ಬಿಡದಿ ರೈತರಿಗೆ ದೊಡ್ಡ ರಿಲೀಫ್: ಪೊರಕೆ ಚಳವಳಿ ನಡೆಸಿದ್ದ 6 ರೈತರ ಮೇಲಿನ ಎಫ್‌ಐಆರ್‌ಗೆ ಹೈಕೋರ್ಟ್ ತಡೆ

ಬಿಡದಿ ಟೌನ್‌ಶಿಪ್ ಯೋಜನೆಗಾಗಿ ಜಂಟಿ ಸರ್ವೆ ವಿರೋಧಿಸಿ ಪೊರಕೆ ಚಳವಳಿ ನಡೆಸಿದ್ದ ಆರು ರೈತರ ವಿರುದ್ಧದ ಎಫ್‌ಐಆರ್ ಮತ್ತು ತನಿಖೆಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ದೂರು ದಾಖಲಾಗಿರುವ ರೀತಿ ಸಂಶಯಾಸ್ಪದ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಬಾಡಿಗೆ ಕಾರು ಚಾಲಕನಿಂದ ದೂರು ದಾಖಲಿಸಿರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿದೆ. ಈ ತಡೆಯಾಜ್ಞೆ ರೈತರಿಗೆ ದೊಡ್ಡ ನಿರಾಳತೆ ತಂದಿದೆ.

ಬಿಡದಿ ರೈತರಿಗೆ ದೊಡ್ಡ ರಿಲೀಫ್: ಪೊರಕೆ ಚಳವಳಿ ನಡೆಸಿದ್ದ 6 ರೈತರ ಮೇಲಿನ ಎಫ್‌ಐಆರ್‌ಗೆ ಹೈಕೋರ್ಟ್ ತಡೆ
ಸಾಂದರ್ಭಿಕ ಚಿತ್ರ
Edited By:

Updated on: Aug 24, 2026 | 5:14 PM

ಬೆಂಗಳೂರು,ಆ.24: ಬಿಡದಿ ಟೌನ್‌ಶಿಪ್‌ ಯೋಜನೆಗೆ ಸಂಬಂಧಿಸಿದಂತೆ ಕೃಷಿ ಜಮೀನಿನ ಜಂಟಿ ಸರ್ವೆ (JMC) ವಿರೋಧಿಸಿ ಪೊರಕೆ ಚಳವಳಿ ನಡೆಸಿದ್ದ ಆರು ಮಂದಿ ರೈತರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಹಾಗೂ ತನಿಖೆಗೆ ಕರ್ನಾಟಕ ಹೈಕೋರ್ಟ್‌ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶಿಸಿದೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು, ದೂರು ದಾಖಲಾಗಿರುವ ರೀತಿಯೇ ಸಂಶಯಾಸ್ಪದವಾಗಿದೆ ಎಂದು ಅಭಿಪ್ರಾಯಪಟ್ಟು ಈ ಮಹತ್ವದ ತಡೆ ನೀಡಿದೆ.

ಬಿಡದಿ ಹೋಬಳಿಯ ಜಯಮ್ಮ, ವರಲಕ್ಷ್ಮಮ್ಮ, ಹೆಚ್.ಆರ್. ನಾಗರಾಜು, ಹೆಚ್.ಸಿ. ಕೃಷ್ಣಪ್ಪ, ಕೆ. ಮೋಹನ್ ಹಾಗೂ ಹರೀಶ್ ಕುಮಾರ್ ಎಂಬ ರೈತರು ತಮ್ಮ ಮೇಲಿನ ಎಫ್‌ಐಆರ್ ರದ್ದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇಂದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ವಾದ ಮಂಡಿಸಿದ ಹಿರಿಯ ವಕೀಲ ಡಿ.ಆರ್. ರವಿಶಂಕರ್ “ರೈತರ ಇಚ್ಛೆಗೆ ವಿರುದ್ಧವಾಗಿ ಭೂಸ್ವಾಧೀನ ಮಾಡುವುದಿಲ್ಲ ಎಂದು ಸರ್ಕಾರವೇ ಹೇಳಿಕೆ ನೀಡಿತ್ತು. ಆದಾಗ್ಯೂ, ಅಧಿಕಾರಿಗಳು ರೈತರ ಜಮೀನಿಗೆ ಅಕ್ರಮವಾಗಿ ಪ್ರವೇಶಿಸಿ ಸರ್ವೆಗೆ ಮುಂದಾಗಿದ್ದಾರೆ. ಜಮೀನು ನಗರದ ಗಡಿಭಾಗದಲ್ಲಿದ್ದ ಮಾತ್ರಕ್ಕೆ ಹಲವು ಪೀಳಿಗೆಗಳಿಂದ ವ್ಯವಸಾಯ ಮಾಡುತ್ತಿರುವ ರೈತರು ಭೂಮಿಯನ್ನು ಬಿಟ್ಟುಕೊಡಬೇಕೆಂದಿಲ್ಲ. ಪ್ರತಿಭಟನೆ ವೇಳೆ ಪೊರಕೆ ಹಿಡಿಯುವುದು ಅಪರಾಧವಲ್ಲ, ರಾಷ್ಟ್ರೀಯ ಪಕ್ಷವೊಂದರ ಚಿಹ್ನೆಯೇ ಪೊರಕೆಯಾಗಿದೆ” ಎಂದು ವಾದಿಸಿದರು.

“ಘಟನೆಯಲ್ಲಿ ಹಲ್ಲೆಗೊಳಗಾಗಿದ್ದಾರೆ ಎನ್ನಲಾದ ಅಧಿಕಾರಿಗಳು ದೂರು ನೀಡಿಲ್ಲ, ಬದಲಿಗೆ ಬಂದಿದ್ದ ಬಾಡಿಗೆ ಕಾರಿನ ಚಾಲಕ (ಮೊಹಮ್ಮದ್ ಸಮೀರ್) ಎಂಬಾತನಿಂದ ‘ಸುಪಾರಿ ದೂರು’ ಕೊಡಿಸಲಾಗಿದೆ” ಎಂದು ವಾದ ಮಂಡಿಸಿದರು. ಅರ್ಜಿದಾರರ ವಾದ ಆಲಿಸಿದ ನ್ಯಾಯಮೂರ್ತಿಗಳು, “ಸರ್ಕಾರ ಕೂಡಾ ಸುಪಾರಿ ದೂರು ಕೊಡಲು ಶುರು ಮಾಡಿದೆಯಾ?” ಎಂದು ತೀವ್ರ ಅಚ್ಚರಿ ಹಾಗೂ ಆಕ್ಷೇಪ ವ್ಯಕ್ತಪಡಿಸಿದರು. ಅಧಿಕಾರಿಗಳ ಬದಲಿಗೆ ಬಾಡಿಗೆ ಕಾರು ಚಾಲಕ ದೂರು ನೀಡಿರುವುದು ಸಂಶಯಾಸ್ಪದವಾಗಿದೆ ಎಂದ ಪೀಠವು, ತನಿಖೆಗೆ ಮಧ್ಯಂತರ ತಡೆ ನೀಡಿ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ.

ಇದನ್ನೂ ಓದಿ: ಪುತ್ತೂರು ದರ್ಬೆ ಗಲಾಟೆ: ನಾಳೆ ಸ್ವಯಂಪ್ರೇರಿತ ‘ಪುತ್ತೂರು ಬಂದ್‌’ಗೆ ಹಿಂದೂ ಜಾಗರಣ ವೇದಿಕೆ ಕರೆ

ಘಟನೆಯ ಹಿನ್ನೆಲೆ:

ಜುಲೈ 13ರಂದು ಬಿಡದಿಯ ಮಂಡಲಹಳ್ಳಿ ಬಳಿ ಬಿಡದಿ ಟೌನ್‌ಶಿಪ್ ಯೋಜನೆಗಾಗಿ ಜಂಟಿ ಸರ್ವೆ (JMC) ನಡೆಸಲು ಆಗಮಿಸಿದ್ದ ಅಧಿಕಾರಿಗಳ ವಿರುದ್ಧ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಪೊರಕೆಗಳಿಂದ ಪ್ರತಿಭಟನೆ ನಡೆಸಿದ್ದರು. ಈ ವೇಳೆ ನೂಕಾಟ-ತಳ್ಳಾಟ ನಡೆದು ಕಾರಿನ ಗ್ಲಾಸ್ ಜಖಂಗೊಂಡಿತ್ತು. ಈ ಸಂಬಂಧ ಕಾರು ಚಾಲಕನ ದೂರಿನ ಮೇರೆಗೆ ರೈತರ ವಿರುದ್ಧ ಬಿಎನ್‌ಎಸ್ ಸೆಕ್ಷನ್ 109 (ಕೊಲೆ ಯತ್ನ) ಸೇರಿದಂತೆ ಹಲವು ಗಂಭೀರ ಪ್ರಕರಣಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಇದೀಗ ಹೈಕೋರ್ಟ್‌ ತಡೆಯಾಜ್ಞೆಯಿಂದಾಗಿ ತನಿಖೆಯ ಭೀತಿಯಲ್ಲಿದ್ದ ರೈತರಿಗೆ ಬಿಡುಗಡೆ ಸಿಕ್ಕಂತಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ರಮೇಶ್​ ಎಮ್​.

ರಮೇಶ್​ ಎಂ ವಿಶೇಷ ವರದಿಗಾರರಾಗಿದ್ದಾರೆ, ಮೂಲತಃ ಕಾನೂನು ಪದವೀಧರನಾಗಿದ್ದು ಕಳೆದ 18 ವರ್ಷಗಳಿಂದ ಟಿವಿ9 ಸುದ್ದಿ ವಾಹಿನಿಯಲ್ಲಿ ಕಾನೂನು ಸಂಬಂಧಿತ ವರದಿ ನೀಡುತ್ತಿದ್ದಾರೆ. ಹೈಕೋರ್ಟ್, ಸುಪ್ರೀಂ ಕೋರ್ಟ್ ಹಾಗೂ ವಿಚಾರಣಾ ನ್ಯಾಯಾಲಯಗಳ ಪ್ರಮುಖ ಪ್ರಕರಣಗಳ ವರದಿಗಾರಿಕೆ ಮಾಡುತ್ತಿದ್ದು, ಬೆಂಗಳೂರಿನ ನಿವಾಸಿಯಾಗಿದ್ದಾರೆ.

Read More
Loading...
Unable to load recommendations.
Follow Us