‘ಪ್ರಾಣಿಗಳಿಗೂ ಹಿಂಸೆಯಿಲ್ಲದೆ ಬದುಕುವ ಹಕ್ಕಿದೆ’: ಕ್ರೌರ್ಯ ಮೆರೆದ ಮಾಲೀಕನಿಗೆ ನಾಯಿ ವಾಪಸ್ ನೀಡಲು ಕೋರ್ಟ್ ನಕಾರ

Bangaluru News: ಕರ್ನಾಟಕ ಹೈಕೋರ್ಟ್ ಪ್ರಾಣಿ ಹಿಂಸೆ ಪ್ರಕರಣದಲ್ಲಿ ಮಹತ್ವದ ಆದೇಶ ನೀಡಿದೆ. 9 ನಾಯಿಗಳನ್ನು ಮಾಲೀಕನಿಂದ ರಕ್ಷಿಸಲು ಆದೇಶಿಸಿದೆ. ನಾಯಿಗಳನ್ನು ಮಾಲೀಕನಿಗೆ ಹಿಂತಿರುಗಿಸುವ ಮ್ಯಾಜಿಸ್ಟ್ರೇಟ್ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ. ಪ್ರಾಣಿಗಳಿಗೂ ಹಿಂಸೆಯಿಂದ ಮುಕ್ತವಾಗಿ ಬದುಕುವ ಹಕ್ಕಿದೆ ಎಂದು ನ್ಯಾ. ಎಂ. ನಾಗಪ್ರಸನ್ನ ಪೀಠ ಅಭಿಪ್ರಾಯಪಟ್ಟಿದೆ.

‘ಪ್ರಾಣಿಗಳಿಗೂ ಹಿಂಸೆಯಿಲ್ಲದೆ ಬದುಕುವ ಹಕ್ಕಿದೆ’: ಕ್ರೌರ್ಯ ಮೆರೆದ ಮಾಲೀಕನಿಗೆ ನಾಯಿ ವಾಪಸ್ ನೀಡಲು ಕೋರ್ಟ್ ನಕಾರ
ನಾಯಿ, ಕರ್ನಾಟಕ ಹೈಕೋರ್ಟ್
Image Credit source: Getty images
Edited By:

Updated on: Jun 24, 2026 | 10:33 PM

ಮುಖ್ಯಾಂಶಗಳು

  • ಮಾಲೀಕನಿಂದ ನಾಯಿಗಳಿಗೆ ಪದೇಪದೆ ಹಲ್ಲೆ
  • ಪ್ರಾಣಿಗಳಿಗೂ ಕೂಡ ಹಿಂಸೆಯಿಲ್ಲದೇ ಬದುಕುವ ಹಕ್ಕಿದೆ
  • ನಾಯಿಗಳನ್ನು ಮಾಲೀಕನಿಗೆ ನೀಡದಂತೆ ಹೈಕೋರ್ಟ್ ಪೀಠ ಆದೇಶ

ಬೆಂಗಳೂರು, ಜೂನ್​​ 24: ‘ಪ್ರಾಣಿಗಳಿಗೂ ಹಿಂಸೆಯಿಲ್ಲದೆ ಬದುಕುವ ಹಕ್ಕಿದೆ’ ಎಂದು ಹೇಳಿರುವ ಹೈಕೋರ್ಟ್, 9 ನಾಯಿಗಳಿಗೆ (Dogs) ತೀವ್ರ ಹಿಂಸೆ ನೀಡಿದ ಮಾಲೀಕನಿಗೆ ಆ ನಾಯಿಗಳನ್ನು ಹಿಂತಿರುಗಿಸದಂತೆ ಮಹತ್ವದ ಆದೇಶ ನೀಡಿದೆ. ಆ ಮೂಲಕ ಮ್ಯಾಜಿಸ್ಟ್ರೇಟ್ ಆದೇಶ ಆಘಾತಕಾರಿ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ (Karnataka HC) ಪೀಠ ಅಭಿಪ್ರಾಯಪಟ್ಟಿದೆ.

ಪದೇಪದೆ ಹಲ್ಲೆ ಹಾಗೂ ಲೈಂಗಿಕ ದುರ್ಬಳಕೆ ಆರೋಪ

ಮಾಲೀಕ ತನ್ನ ಬಳಿಯಿಂದ ನಾಯಿಗಳಿಗೆ ಪದೇಪದೆ ಹಲ್ಲೆ ಹಾಗೂ ಲೈಂಗಿಕ ದುರ್ಬಳಕೆ ಎಸಗುತ್ತಿದ್ದ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಬಗ್ಗೆ ನೆರೆಹೊರೆಯವರು ಕೆಲ ವಿಡಿಯೋ ಸಾಕ್ಷ್ಯಗಳೊಂದಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ್ದ ಪೆಟಾ (PETA) ಸಂಸ್ಥೆ, ಮಾಲೀಕನಿಂದ ಆ 9 ನಾಯಿಗಳನ್ನು ರಕ್ಷಣೆ ಮಾಡಿತ್ತು.

ಇದನ್ನೂ ಓದಿ: ಫುಟ್ ಪಾತ್ ತೆರವಿಗೆ ಕೃಷ್ಣಭೈರೇಗೌಡ ಪಣ:ಒತ್ತುವರಿದಾರರಿಗೆ ಡೆಡ್​​ಲೈನ್, ರಸ್ತೆ ಬದಿ ನಿಲ್ಲಿಸುವ ಗಾಡಿ ಗುಜರಿಗೆ

ಆದರೆ, ರಕ್ಷಿಸಲ್ಪಟ್ಟ ನಾಯಿಗಳನ್ನು ಮರಳಿ ಅದೇ ಮಾಲೀಕನಿಗೆ ಒಪ್ಪಿಸಲು ಈ ಹಿಂದೆ ಮ್ಯಾಜಿಸ್ಟ್ರೇಟ್ ಕೋರ್ಟ್ ಅನುಮತಿ ನೀಡಿತ್ತು. ಮ್ಯಾಜಿಸ್ಟ್ರೇಟ್ ಅವರ ಈ ಆದೇಶವನ್ನು ಆಘಾತಕಾರಿ ಎಂದು ಬಣ್ಣಿಸಿರುವ ಹೈಕೋರ್ಟ್, ವಿಡಿಯೋಗಳಲ್ಲಿ ನಾಯಿಗಳಿಗೆ ಕ್ರೂರವಾಗಿ ಹೊಡೆಯುವ ದೃಶ್ಯಗಳು ಸ್ಪಷ್ಟವಾಗಿವೆ. ಹೀಗಿರುವಾಗ ಕ್ರೌರ್ಯ ಮೆರೆದವನಿಗೆ ಮತ್ತೆ ನಾಯಿಗಳ ಕಸ್ಟಡಿ ನೀಡಿದ ಆದೇಶ ಖಂಡಿತ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದೆ.

ಪ್ರಾಣಿಗಳನ್ನು ಪ್ರಾಣಿದಯಾ ಸಂಘಟನೆ ವಶದಲ್ಲಿಡಲು ಆದೇಶ

‘ಪ್ರಾಣಿಗಳಿಗೆ ಮಾತು ಬಾರದಿದ್ದರೂ ಅವು ನೋವು ಅನುಭವಿಸುತ್ತವೆ. ಅವುಗಳಿಗೂ ಹಿಂಸೆಯಿಂದ ರಕ್ಷಣೆ ಪಡೆದುಕೊಳ್ಳುವ ಹಕ್ಕಿದೆ. ಕೋರ್ಟ್ ಕದ ತಟ್ಟಲಾಗದವರಿಗೂ ನ್ಯಾಯದಾನ ಸಿಗಬೇಕು’ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಅಭಿಪ್ರಾಯಪಟ್ಟಿದೆ. ಅಲ್ಲದೆ, ರಕ್ಷಿಸಲ್ಪಟ್ಟಿರುವ ಎಲ್ಲಾ ಪ್ರಾಣಿಗಳನ್ನು ಪ್ರಾಣಿದಯಾ ಸಂಘಟನೆಯ ವಶದಲ್ಲಿಯೇ ಮುಂದುವರಿಸುವಂತೆ ನ್ಯಾಯಾಲಯ ಆದೇಶಿಸಿದೆ.

ಪ್ರಕರಣ ಹಿನ್ನೆಲೆ 

ಬೆಂಗಳೂರಿನ ನಾಗಸಂದ್ರದ ನಿವಾಸಿ ಕೆ.ಇ. ರಮೇಶ್ ಎಂಬಾತನ ಬಳಿ ಬೇರೆ ಬೇರೆ ತಳಿಯ 9 ನಾಯಿಗಳಿದ್ದವು. ಪದೇಪದೆ ಹಲ್ಲೆ ಮತ್ತು ಲೈಂಗಿಕ ದುರ್ಬಳಕೆಯ ಗಂಭೀರ ಆರೋಪ ಕೇಳಿಬಂದಿತ್ತು. ಘಟನೆಗೆ ಸಂಬಂಧಿಸಿದಂತೆ ರಮೇಶ್​ ವಿರುದ್ಧ ಭಾರತೀಯ ನ್ಯಾಯ ಸಂಹಿತೆ 2023ರ ಸೆಕ್ಷನ್​​ 325 ಮತ್ತು 62 ಹಾಗೂ 1960 ಪ್ರಾಣಿ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್​​ 11(1)ರ ಅಡಿಯಲ್ಲಿ ಎಫ್​​ಐಆರ್​​ ದಾಖಲಿಸಲಾಗಿತ್ತು. ಪ್ರಕರಣ ದಾಖಲಾಗುತ್ತಿದ್ದಂತೆ ಮಾಲೀಕ ರಮೇಶ್​ ನ್ಯಾಯಾಲಯದ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ಮಾಡಿದ್ದ ಮ್ಯಾಜಿಸ್ಟ್ರೇಟ್ ಕೋರ್ಟ್​​, ರಕ್ಷಿಸಲ್ಪಟ್ಟ ನಾಯಿಗಳನ್ನು ಮರಳಿ ಮಾಲೀಕನಿಗೆ ಒಪ್ಪಿಸುವಂತೆ ಅನುಮತಿ ನೀಡಿತ್ತು. ಆದರೆ ಕೆಳ ನ್ಯಾಯಾಲಯದ ಈ ಆದೇಶವನ್ನು ಪ್ರಶ್ನಿಸಿ ಪ್ರಾಣಿದಯಾ ಸಂಘಟನೆ ಪೆಟಾ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us