ಮದ್ಯ ಮಾರಾಟದಲ್ಲಿ ದಾಖಲೆ ಬರೆದ ಅಬಕಾರಿ ಇಲಾಖೆ: 30 ದಿನದಲ್ಲಿ ಸರ್ಕಾರಕ್ಕೆ ಬಂದ ಆದಾಯ ಎಷ್ಟು ಗೊತ್ತಾ?

ಕಳೆದ ಮೇ-ಜೂನ್ ತಿಂಗಳಲ್ಲಿ ಕರ್ನಾಟಕದಲ್ಲಿ ಮದ್ಯ ಮಾರಾಟವು ಸಾರ್ವಕಾಲಿಕ ದಾಖಲೆ ಸೃಷ್ಟಿಸಿದೆ. ಕೇವಲ 30 ದಿನಗಳಲ್ಲಿ ರಾಜ್ಯ ಅಬಕಾರಿ ಇಲಾಖೆಗೆ ಕೋಟಿ ಕೋಟಿ ರೂ ಆದಾಯ ಹರಿದುಬಂದಿದೆ. ಹೊಸ ಅಬಕಾರಿ ನೀತಿ ಮತ್ತು ತೆರಿಗೆ ಏರಿಕೆಯಿಂದ ಈ ದಾಖಲೆಯ ಮಾರಾಟವಾಗಿದೆ ಎನ್ನಲಾಗುತ್ತಿದೆ.

ಮದ್ಯ ಮಾರಾಟದಲ್ಲಿ ದಾಖಲೆ ಬರೆದ ಅಬಕಾರಿ ಇಲಾಖೆ: 30 ದಿನದಲ್ಲಿ ಸರ್ಕಾರಕ್ಕೆ ಬಂದ ಆದಾಯ ಎಷ್ಟು ಗೊತ್ತಾ?
ಮದ್ಯ
Image Credit source: Getty images
Edited By:

Updated on: Jun 15, 2026 | 10:39 PM

ಬೆಂಗಳೂರು, ಜೂನ್​​ 15: ರಾಜ್ಯದಲ್ಲಿ ಕಳೆದ 30 ದಿನಗಳಲ್ಲಿ ಆಗಿರುವಷ್ಟು ಮದ್ಯದ (liquor) ಮಾರಾಟ ಈ ಹಿಂದೆ ಎಂದೂ ಆಗಿರಲಿಲ್ಲವಂತೆ. ಮೇ ಮತ್ತು ಜೂನ್ ತಿಂಗಳ ಮದ್ಯದ ವ್ಯಾಪಾರದಿಂದ ರಾಜ್ಯ ಸರ್ಕಾರಕ್ಕೆ ಬರೋಬ್ಬರಿ ಮೂರೂವರೆ ಸಾವಿರ ಕೋಟಿ ರೂಪಾಯಿಗೂ ಅಧಿಕ ಆದಾಯ ಹರಿದುಬಂದಿದೆ. ಹೊಸ ಅಬಕಾರಿ ನೀತಿ ಜಾರಿಗೆ ಬಂದ ಕೇವಲ ಒಂದೇ ತಿಂಗಳಲ್ಲಿ ಅಬಕಾರಿ ಇಲಾಖೆಯ (Excise Department) ಖಜಾನೆಗೆ ಕೋಟಿ ಕೋಟಿ ಹರಿದುಬಂದಿದೆ.

ಮುಖ್ಯಾಂಶಗಳು

  • ಮದ್ಯ ಮಾರಾಟದಲ್ಲಿ ಹಳೆ ದಾಖಲೆಗಳೆಲ್ಲ ಉಡೀಸ್​
  • ಹೊಸ ಅಬಕಾರಿ ನೀತಿಯಿಂದ ಹರಿದುಬಂತು ಕೋಟಿ ಕೋಟಿ ಹಣ
  • ಕೇವಲ 30 ದಿನದಲ್ಲಿ ಬರೋಬ್ಬರಿ 3,500 ಕೋಟಿ ಆದಾಯ!

ರಾಜ್ಯದಲ್ಲಿ ಕಳೆದ 30 ದಿನದಲ್ಲಿ ದಾಖಲೆಯ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿದೆ. ಹೊಸ ಮದ್ಯ ತೆರಿಗೆಯಿಂದ ಅಬಕಾರಿ ಇಲಾಖೆಗೆ ದಾಖಲೆಯ ಆದಾಯ ಹರಿದು ಬಂದಿದೆ. ಮೇ ದಿಂದ ಜೂನ್​ ತಿಂಗಳ ಅವಧಿಯಲ್ಲಿ ವ್ಯಾಪಾರದಿಂದ ಹಳೆಯ ಎಲ್ಲಾ ದಾಖಲೆಗಳನ್ನು ಅಬಕಾರಿ ಇಲಾಖೆ ಮುರಿದು ಹಾಕಿದೆ. ಇದರಿಂದ ಒಂದೇ ತಿಂಗಳಲ್ಲಿ ಮೂರುವರೆ ಸಾವಿರ ಕೋಟಿ ರೂ ವ್ಯಾಪಾರವಾಗಿದೆ. ಈ ಹಿನ್ನೆಲೆ ಬಾರ್ ಆ್ಯಂಡ್​ ರೆಸ್ಟೋರೆಂಟ್ ಮಾಲೀಕರಿಗೂ ಭರ್ಜರಿ ಆದಾಯ ಆಗುತ್ತಿದೆ.

ಮದ್ಯ ಮಾರಾಟಗಾರರು ಹೇಳುವುದೇನು?

ಆಲ್ಕೋಹಾಲ್ ಇನ್ ಬೆವರೇಜ್ ಅಂಶವನ್ನು ಆಧರಿಸಿ ಮದ್ಯಕ್ಕೆ ತೆರಿಗೆ ವಿಧಿಸುವ ಹೊಸ ಅಬಕಾರಿ ನೀತಿಯು ದಾಖಲೆಯ ಆರಂಭವನ್ನು ನೀಡಿದ್ದು, ಇದು ಜಾರಿಗೆ ಬಂದ ಕೇವಲ ಒಂದು ತಿಂಗಳೊಳಗೆ 3,509 ಕೋಟಿ ರೂ ಆದಾಯ ಗಳಿಸಿದೆ. ಈ ಬಗ್ಗೆ ಮಾತನಾಡಿದ ಮದ್ಯ ಮಾರಾಟಗಾರ ಗಿರೀಶ್​​​, 30 ದಿನದಲ್ಲಿ 20% ರಷ್ಟು ವ್ಯಾಪಾರ ಹೆಚ್ಚಾಗಿದೆ ಎಂದಿದ್ದಾರೆ.

ಕಳೆದ ವರ್ಷಕ್ಕಿಂತ ಶೇಕಡಾ 60 ರಷ್ಟು ಹೆಚ್ಚಳ

ಇನ್ನು ಹೊಸ ತೆರಿಗೆ ವ್ಯವಸ್ಥೆಯಡಿಯಲ್ಲಿ ಕಡಿಮೆ ಬೆಲೆಯ ಮದ್ಯದ ಬ್ರಾಂಡ್‌ಗಳ ಬೆಲೆ ಏರಿಕೆಯಾಗಿದ್ದರೂ ಸಹ, ಮದ್ಯದ ಮಾರಾಟಕ್ಕೆ ಯಾವುದೇ ಬ್ರೇಕ್ ಬಿದ್ದಿಲ್ಲ. ವಿಶೇಷವಾಗಿ ಈ ಬಾರಿ ಬಿಯರ್ ಭಾರಿ ಪ್ರಮಾಣದಲ್ಲಿ ಮಾರಾಟವಾಗಿದೆ. ಕಳೆದ ವರ್ಷ ಮೇ 11 ರಿಂದ ಜೂನ್ 11ರ ಅವಧಿಗೆ ಹೋಲಿಸಿದರೆ, ಈ ವರ್ಷ ಇದೇ ಅವಧಿಯಲ್ಲಿ ಬಿಯರ್ ಮಾರಾಟ ಶೇಕಡಾ 59.4 ರಷ್ಟು ಹೆಚ್ಚಾಗಿದ್ದು, ಬರೋಬ್ಬರಿ 403.1 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದೆ. ಇತ್ತ ಐಎಂಎಲ್ ಮದ್ಯದ ಮಾರಾಟ ಕೂಡ ಹೆಚ್ಚಾಗಿದ್ದು, 443.5 ಲಕ್ಷ ಲೀಟರ್‌ಗೆ ಏರಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 3,022 ಕೋಟಿ ರೂ ವ್ಯಾಪಾರವಾಗಿದ್ದರೆ, ಈ ವರ್ಷ ಅದು 3,509 ಕೋಟಿ ರೂ.ಗೆ ಜಂಪ್ ಆಗಿದೆ.

ಇದನ್ನೂ ಓದಿ: ಪ್ರೀಮಿಯಂ ಮದ್ಯ, ಬಿಯರ್ ದರ ಇಳಿಕೆಯಾದ್ರೂ ಹಳೆ ದರದಲ್ಲೇ ಸೇಲ್: ಮದ್ಯ ಮಾರಾಟಗಾರರ ವಿರುದ್ಧ ಎಣ್ಣೆ ಪ್ರಿಯರ ಆಕ್ರೋಶ

ಒಟ್ಟಿನಲ್ಲಿ ಮೇ- ಜೂನ್​ ತಿಂಗಳಲ್ಲಿ ರಾಜ್ಯದಲ್ಲಿ ವಿಪರೀತ ಬಿಸಿಲು ಇದ್ದ ಕಾರಣವೋ ಅಥವಾ ಯುದ್ಧದಿಂದ ಸರಿಯಾಗಿ ಕೆಲಸ ಕಾರ್ಯಗಳಿಲ್ಲದೆಯೇ ಗೊತ್ತಿಲ್ಲ. ಆದರೆ ಮದ್ಯಪ್ರಿಯರು ಮಾತ್ರ ಮುಗಿಬಿದ್ದು ಎಣ್ಣೆ ಖರೀದಿಸಿರುವುದು ಸುಳ್ಳಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
Follow Us