
ಬೆಂಗಳೂರು, ಸೆಪ್ಟೆಂಬರ್ 20: ನಾಳೆಯಿಂದ ಮೂರು ದಿನಗಳ ಕಾಲ ನಡೆಯಲಿರುವ ವಿಶೇಷ ಅಧಿವೇಶನದಲ್ಲಿ ಸಹಕಾರ ನೀಡುವಂತೆ ವಿಪಕ್ಷ ನಾಯಕರಿಗೆ ಸಚಿವ ಚಲುವರಾಯಸ್ವಾಮಿ ಪತ್ರ ಬರೆದಿದ್ದಾರೆ. ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ಮತ್ತು ಸುರೇಶ್ ಬಾಬುಗೆ ಪತ್ರ ಬರೆದಿರುವ ಸಚಿವರು ಬರ ಪರಿಸ್ಥಿತಿ, ಕಸ್ತೂರಿ ರಂಗನ್ ವರದಿ ಕುರಿತು ಸುಗಮ, ಅರ್ಥಪೂರ್ಣ ಚರ್ಚೆಗೆ ಸಹಕರಿಸಿ ಎಂದು ವಿನಂತಿಸಿದ್ದಾರೆ.
ಬರದಿಂದ ಗ್ರಾಮೀಣ ಜನತೆ ಹಾಗೂ ಜಾನುವಾರುಗಳ ಮೇಲೆ ಪರಿಣಾಮ ಉಂಟಾಗಿದೆ. ಕುಡಿಯುವ ನೀರಿನ ಸಮಸ್ಯೆ, ಕೃಷಿ ನಷ್ಟ, ಪರಿಹಾರ ಕ್ರಮಗಳ ಬಗ್ಗೆ ಚರ್ಚೆಯಾಗಬೇಕಿದೆ. ಕೇಂದ್ರದಿಂದ ರಾಜ್ಯಕ್ಕೆ ದೊರೆಯಬೇಕಾದ ನೆರವು ಸೇರಿದಂತೆ ಎಲ್ಲಾ ವಿಚಾರಗಳ ಬಗ್ಗೆ ಪಕ್ಷಾತೀತವಾಗಿ ಚರ್ಚೆ ನಡೆಯಬೇಕಾಗಿದೆ. ಅದೇ ರೀತಿ, ಕಸ್ತೂರಿ ರಂಗನ್ ವರದಿಯ ಬಗ್ಗೆಯೂ ವಿಸ್ತೃತ ಚರ್ಚೆಯ ಅಗತ್ಯವಿದೆ. ಹೀಗಿರುವಾಗ ಈ ಬಗ್ಗೆ ಅಧಿವೇಶನ ಆರೋಪ-ಪ್ರತ್ಯಾರೋಪಗಳಿಗೆ ಸೀಮಿತವಾಗುವುದು ಬೇಡ. ವಾಸ್ತವಾಂಶಗಳು, ಅಂಕಿ-ಅಂಶಗಳು, ತಜ್ಞರ ಅಭಿಪ್ರಾಯಗಳು ಹಾಗೂ ಜನರ ಹಿತಾಸಕ್ತಿಯನ್ನು ಆಧರಿಸಿ ಚರ್ಚೆ ಮಾಡೋಣ. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಯಾವ ರೀತಿ ಸ್ಪಂದಿಸಬೇಕು ಎಂಬ ದೃಷ್ಟಿಯಲ್ಲಿ ಅರ್ಥಪೂರ್ಣ ವಿಚಾರ ವಿನಿಮಯ ಆಗಬೇಕಿದೆ ಎಂದವರು ತಿಳಿಸಿದ್ದಾರೆ.
ಇದನ್ನೂ ಓದಿ: ‘ಕೆಲಸ ಮಾಡಿಕೊಟ್ಟ ಅಧಿಕಾರಿಗಳಿಗೆ ಗೌರವಯುತವಾಗಿ ಕೊಡೋದು ನಿಮ್ಮ ಧರ್ಮ’: ವಿವಾದ ಸೃಷ್ಟಿಸಿದ ಸಚಿವ ಶಿವಲಿಂಗೇಗೌಡರ ಹೇಳಿಕೆ
ಬೆಂಗಳೂರಿಗೆ 2027ರ ಜನವರಿಯಿಂದಲೇ ನೀರಿನ ಸಮಸ್ಯೆ ಆಗುವ ಲಕ್ಷಣಗಳು ಗೋಚರಿಸುತ್ತಿವೆ. ಪ್ರತಿದಿನ ಜಲಮಂಡಳಿಯು ಕಾವೇರಿ ನದಿಯಿಂದ 2,225 ಎಂಎಲ್ಡಿ ನೀರು ಪೂರೈಸುತ್ತಿದೆ. ಅದರಂತೆ ವರ್ಷಕ್ಕೆ 28.68 ಟಿಎಂಸಿ ಮತ್ತು ಮಾಸಿಕ ಸುಮಾರು 2.35 ಟಿಎಂಸಿ ಅಡಿಗಳಷ್ಟು ಕಾವೇರಿ ನದಿ ನೀರು ಬೆಂಗಳೂರಿಗೆ ತರಲಾಗುತ್ತದೆ. ಅದರಲ್ಲಿ ಬಹುಪಾಲು ಕೆಆರ್ಎಸ್ ಜಲಾಶಯದಿಂದ ಹರಿಯುವ ನೀರನ್ನು ನಗರಕ್ಕೆ ಪೂರೈಸಲಾಗುತ್ತದೆ. ಸದ್ಯ ಕೆಆರ್ಎಸ್ನಲ್ಲಿ 27.83 ಟಿಎಂಸಿ ಅಡಿಗಳಷ್ಟು ನೀರಿದ್ದು, ಬೆಂಗಳೂರಿಗೆ ಮುಂದಿನ ಮೇ ತಿಂಗಳವರೆಗೆ ಸುಮಾರು 18.8 ಟಿಎಂಸಿ ನೀರು ಬೇಕಾಗಲಿದೆ. ಸದ್ಯ ಡೆಡ್ ಸ್ಟೋರೇಜ್ ಹೊರತುಪಡಿಸಿ 19.45 ಟಿಎಂಸಿ ಅಡಿಗಳಷ್ಟು ನೀರಿನಲ್ಲಿ 18.8 ಟಿಎಂಸಿಯನ್ನು ಬೆಂಗಳೂರಿಗೆ ಪೂರೈಸಿದರೆ ಕೇವಲ 0.65 ಟಿಎಂಸಿಗಳಷ್ಟು ನೀರು ಉಳಿಯಲಿದೆ. ವಿಶೇಷ ಅಧಿವೇಶನದಲ್ಲಿ ರೈತರ ಬದುಕಿನ ಬಗ್ಗೆ, ರೈತರ ಸಂಕಷ್ಟಕ್ಕೆ ಇನ್ನೂ ಪರಿಣಾಮಕಾರಿಯಾಗಿ ಸ್ಪಂದಿಸುವ ಬಗ್ಗೆ ಅರ್ಥಪೂರ್ಣ ಚರ್ಚೆಯಾಗಿ ಒಂದು ಪರಿಹಾರ ಹೊರಹೊಮ್ಮಬೇಕಿದೆ. ಈ ಕಾರಣಕ್ಕೆ ವಿಶೇಷ ಅಧಿವೇಶನ ಸುಗಮವಾಗಿ ನಡೆಯಲು ತಾವು ಸಹಕಾರ ನೀಡಿ, ತಮ್ಮ ಪಕ್ಷದ ಶಾಸಕರು ಸಹಕಾರ ಕೊಡಬೇಕು ಎಂದು ಕರ್ನಾಟಕ ಸರ್ಕಾರದ ಪರವಾಗಿ, ರಾಜ್ಯದ ರೈತರ ಪರವಾಗಿ ತಮ್ಮಲ್ಲಿ ಮನವಿ ಮಾಡುತ್ತಿದ್ದೇನೆ ಎಂದು ಪತ್ರ ಮುಖೇನ ಸಚಿವ ಎನ್.ಚಲುವರಾಯಸ್ವಾಮಿ ಆಗ್ರಹಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.