
ಬೆಂಗಳೂರು, ಸೆಪ್ಟೆಂಬರ್ 29: ನಿನ್ನೆ (ಸೆ.28) ತಡರಾತ್ರಿ ಬೆಂಗಳೂರಿನ ಹಲವೆಡೆ ಭಾರೀ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಹವಾಮಾನ ಇಲಾಖೆ ಹೇಳುವಂತೆ ಕರಾವಳಿ ಕರ್ನಾಟಕದ ಕೆಲವು ಕಡೆ ಇಂದು ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲೂ ಗಾಳಿ ಸಹಿತ ಭಾರೀ ಮಳೆಯ ಮುನ್ಸೂಚನೆಯಿದ್ದು, 6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಸೂಚುಸಲಾಗಿದೆ.
ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಮಂಡ್ಯ, ಮೈಸೂರು ಮತ್ತು ತುಮಕೂರು ಜಿಲ್ಲೆಗಳಿಗೆ ಹವಾಮಾನ ಇಲಾಖೆಯು ಯೆಲ್ಲೋ ಅಲರ್ಟ್ ಘೋಷಿಸಿದೆ.
ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಗಂಟೆಗೆ 30-40 ಕಿ.ಮೀ ವೇಗದ ಬಿರುಗಾಳಿ ಹಾಗೂ ಗುಡುಗು ಸಹಿತ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಉಳಿದ ಜಿಲ್ಲೆಗಳಲ್ಲಿ ಶುಷ್ಕ ವಾತಾವರಣವಿರಲಿದೆ. ದಕ್ಷಿಣ ಒಳನಾಡಿನ ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಮಂಡ್ಯ, ಮೈಸೂರು ಮತ್ತು ತುಮಕೂರು ಜಿಲ್ಲೆಗಳಿಗೆ ಹವಾಮಾನ ಇಲಾಖೆಯು ‘ಯೆಲ್ಲೋ ಅಲರ್ಟ್’ ಘೋಷಿಸಿದೆ.
ಬೆಂಗಳೂರಿನಲ್ಲಿ ರಾತ್ರಿಯಿಡೀ ಸುರಿದ ಗುಡುಗು ಸಹಿತ ಧಾರಾಕಾರ ಮಳೆಯಿಂದಾಗಿ ನಗರದ ಜನಜೀವನ ತತ್ತರಿಸಿದೆ. ಮುಖ್ಯವಾಗಿ ಮೆಜೆಸ್ಟಿಕ್, ಕೆ.ಆರ್. ಮಾರುಕಟ್ಟೆ, ಚಾಮರಾಜಪೇಟೆ, ಶಾಂತಿನಗರ, ವಿಜಯನಗರ, ಕೆಂಗೇರಿ, ದೀಪಾಂಜಲಿನಗರ, ರಾಜಾಜಿನಗರ, ಅಂಜನಾಪುರ, ಗೊಟ್ಟಿಗೆರೆ, ಅವಳಹಳ್ಳಿ, ಸೌಧಾಮಿನಿ, ಬನಶಂಕರಿ, ಗಿರಿನಗರ, ಮಡಿವಾಳ, ಕೋಣನಕುಂಟೆ, RBI ಲೇಔಟ್, ಕುಮಾರಸ್ವಾಮಿ ಲೇಔಟ್, ರಿಚ್ಮಂಡ್ ಸರ್ಕಲ್, ಎಂ.ಜಿ. ರಸ್ತೆ, ನಂದಿನಿ ಲೇಔಟ್, ಶೇಷಾದ್ರಿಪುರಂ ಹಾಗೂ ಮಲ್ಲೇಶ್ವರಂ ಸೇರಿದಂತೆ ನಗರದ ಹಲವೆಡೆ ಭಾರಿ ಮಳೆ ದಾಖಲಾಗಿದೆ. ದಕ್ಷಿಣ ಭಾಗದಲ್ಲಿ ಮಳೆಯ ಆರ್ಭಟ ತೀವ್ರವಾಗಿದ್ದು, ತಡರಾತ್ರಿ ಸುರಿದ ಭಾರಿ ಮಳೆಗೆ ರಸ್ತೆಗಳೆಲ್ಲ ಕೆರೆಯಂತೆ ಮಾರ್ಪಟ್ಟಿವೆ. ಮಳೆಯಿಲ್ಲದೆ ಸೊರಗಿದ್ದ ಜನರಿಗೆ ಈ ವರುಣರಾಯ ತಂಪೆರದಿದ್ದರೂ, ರಸ್ತೆಗಳಲ್ಲಿ ನೀರು ನಿಂತು ಸಂಚಾರಕ್ಕೆ ತೊಂದರೆಯಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ