
ಬೆಂಗಳೂರು, ಜೂನ್ 10: ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದು, ಮುಂದಿನ ಕೆಲವು ದಿನಗಳ ಕಾಲ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ (Weather) ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪ್ರಮುಖವಾಗಿ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ವರುಣನ ಅಬ್ಬರ ಜೋರಾಗಿರಲಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಹಲವು ಜಿಲ್ಲೆಗಳಿಗೆ ಅಲರ್ಟ್ ಘೋಷಿಸಲಾಗಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಗಂಟೆಗೆ 30 ರಿಂದ 40 ಕಿ.ಮೀ ವೇಗದ ಬಲವಾದ ಗಾಳಿಯೊಂದಿಗೆ ‘ಅತಿ ಭಾರೀ ಮಳೆ’ಯಾಗುವ ಮುನ್ಸೂಚನೆ ಇರುವುದರಿಂದ ಈ ಭಾಗಕ್ಕೆ ಆರೆಂಜ್ ಅಲರ್ಟ್ (Orange Alert) ಘೋಷಿಸಲಾಗಿದೆ. ಇನ್ನು ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ತೀವ್ರ ಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಈ ಜಿಲ್ಲೆಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಚಾಮರಾಜನಗರ, ಕೊಡಗು, ಚಿಕ್ಕಮಗಳೂರು, ಕೋಲಾರ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಬಲವಾದ ಗಾಳಿ ಸಹಿತ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಈ ಜಿಲ್ಲೆಗಳಿಗೂ ಹವಾಮಾನ ಇಲಾಖೆ **ಯೆಲ್ಲೋ ಅಲರ್ಟ್** ಪ್ರಕಟಿಸಿದೆ. ಉಳಿದಂತೆ ಉತ್ತರ ಒಳನಾಡಿನ ಬೆಳಗಾವಿ, ಗದಗ ಹಾಗೂ ಹಾವೇರಿ ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್ ಅನ್ವಯಿಸಲಿದೆ.
ರಾಜಧಾನಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮೈಸೂರು, ಮಂಡ್ಯ, ಹಾಸನ, ಶಿವಮೊಗ್ಗ, ರಾಮನಗರ, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಸಾಧಾರಣ ಅಥವಾ ಹಗುರವಾದ ಮಳೆಯಾಗುವ ಸಾಧ್ಯತೆಯಿದೆ.
ಕರಾವಳಿ ತೀರದಲ್ಲಿ ಗಾಳಿಯ ವೇಗ ಹೆಚ್ಚಾಗಿರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯುವಾಗ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ತಗ್ಗು ಪ್ರದೇಶಗಳ ನಿವಾಸಿಗಳು ಹಾಗೂ ಸಾರ್ವಜನಿಕರು ಹವಾಮಾನ ಇಲಾಖೆಯ ಮುನ್ನೆಚ್ಚರಿಕೆಗಳನ್ನು ಪಾಲಿಸಲು ಕೋರಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:53 am, Wed, 10 June 26