
ಬೆಂಗಳೂರು, ನವೆಂಬರ್ 07: ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಡಿದ ತುಂಡು ಮಾತು ಇದೀಗ ಮತ್ತೊಂದು ಹಂತಕ್ಕೆ ಹೋಗಿದೆ. ತುಂಡು ಮಾತಿಗೆ ಕೆರಳಿರುವ NSUI ಸದಸ್ಯರು, ಛಲವಾದಿ ನಾರಾಯಣಸ್ವಾಮಿ ನಿವಾಸಕ್ಕೆ ಚಾಕು, ಚೂರಿಗಳನ್ನ ಪಾರ್ಸೆಲ್ ಕಳಿಸಿದ್ದಾರೆ. ಸದ್ಯ ಇದೇ ಪ್ರಕರಣ ಪೊಲೀಸ್ ಆಯುಕ್ತರ ಕಚೇರಿವರೆಗೂ ಹೋಗಿದ್ದು, ಬಿಜೆಪಿ ನಿಯೋಗ ಸೀಮಂತ್ ಕುಮಾರ್ ಸಿಂಗ್ಗೆ ದೂರು ನೀಡಿದ್ದಾರೆ.
ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿಗೆ 10 ರಿಂದ 20 ಮೊಬೈಲ್ ನಂಬರ್‌ಗಳಿಂದ ಚಾಕು, ಚೂರಿ ಅಂತಹ ಮಾರಕ ವಸ್ತುಗಳನ್ನು ಬುಕ್ ಮಾಡಿದ್ದ ಪಾರ್ಸಲ್‌ನ್ನು 8 ರಿಂದ 10 ಜನ ಕಾಂಗ್ರೆಸ್ ಪಕ್ಷದ ಎನ್‌ಎಸ್‌ಯುವ ಹುಡುಗರು ಛಲವಾದಿ ನಾರಾಯಣಸ್ವಾಮಿಯವರ ಮನೆಯ ಹತ್ತಿರ ಬಂದು, ಗೇಟ್ ಸುತ್ತ ಸುತ್ತುವರಿದು, ಭಯ ಭೀತಿಯನ್ನು ಹುಟ್ಟಿಸುತ್ತಿದ್ದರು.
ಇದನ್ನೂ ಓದಿ: ‘ಕಾಂಗ್ರೆಸನ್ನ ತುಂಡುತುಂಡಾಗಿ ಕತ್ತರಿಸುತ್ತಾರೆ’: ವ್ಯಕ್ತಿಯೋರ್ವನಿಂದ ಛಲವಾದಿ ನಿವಾಸಕ್ಕೆ ಚಾಕು ಆರ್ಡರ್!
ಇಂತಹ ಗೂಂಡಾ ಸಂಸ್ಕೃತಿಯ ಎನ್‌ಎಸ್‌ಯುಐ ಕಾರ್ಯಕರ್ತರು ಇಂತಹ ಕೆಲಸಗಳಲ್ಲಿ ತೊಡಗಲು ಕುಮ್ಮಕ್ಕು ನೀಡಿರುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು, ಮುಖ್ಯಮಂತ್ರಿಗಳು, ಗೃಹ ಮಂತ್ರಿಗಳು ನೇರ ಕಾರಣರಾಗಿರುತ್ತಾರೆ. ಕೆಪಿಸಿಸಿ ಕಾರ್ಯದರ್ಶಿ ಮನೋಹರ್ ಮತ್ತು ಸಹಚರರು ಸಾಕಷ್ಟು ಬಾರಿ ಮನೆ ಮುಂದೆ ಪ್ರತಿಭಟನೆ ಮಾಡಿದ್ದು, ಇದಕ್ಕೆಲ್ಲಾ ಯಾರು ಕುಮ್ಮಕ್ಕು ನೀಡುತ್ತಿದ್ದಾರೆ.
ಛಲವಾದಿ ನಾರಾಯಣಸ್ವಾಮಿ ಮನೆಯ ಅಕ್ಕ-ಪಕ್ಕದಲ್ಲಿ ಅನೇಕ ಮಂತ್ರಿಗಳ ಹಾಗೂ ಹೈಕೋರ್ಟ್ ನ್ಯಾಯಾಧೀಶರ ಮನೆಗಳಿವೆ. ಆನ್‌ಲೈನ್ ವ್ಯವಹಾರಿಕ ಸಂಸ್ಥೆಯಾದ ಬ್ಲಿಂಕಿಟ್ ಯಾವುದೇ ವಸ್ತುಗಳನ್ನು ಪಾರ್ಸಲ್ ಕೊಡುವ ಮುಂಚೆ ಪರಿಶೀಲಿಸಬೇಕಾಗಿರುತ್ತದೆ. ಇದ್ಯಾವುದನ್ನೂ ಪರಿಶೀಲಿಸದೇ ಏಕಾಏಕಿ ಮಾರಕ ವಸ್ತುಗಳನ್ನು ಪಾರ್ಸಲ್ ಮೂಲಕ ಕೊಟ್ಟಿರುವುದು ಸಂಸ್ಥೆಯ ಸಂಶಯಕ್ಕೆ ಕಾರಣವಾಗಿದ್ದು, ಅದರ ಪರವಾನಗಿ ರದ್ದು ಪಡಿಸುವಂತೆ ವಿನಂತಿಸಿದ್ದಾರೆ.
ಇದನ್ನೂ ಓದಿ: ನನ್ನ ಹೇಳಿಕೆಯನ್ನು ತಿರುಚಲಾಗಿದೆ: ವಿವಾದಾತ್ಮಕ ಹೇಳಿಕೆ ಬಗ್ಗೆ ಛಲವಾದಿ ನಾರಾಯಣಸ್ವಾಮಿ ಸ್ಪಷ್ಟನೆ
ಇನ್ನು ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿನಿತ್ಯ ಪ್ರತಿಭಟನೆಗಳು, ಭಯದ ವಾತಾವರಣ ಸೃಷ್ಟಿಸುತ್ತಿರುವವರ ಪತ್ತೆ ಹಚ್ಚಿ, ಪ್ರಕರಣವನ್ನು ದಾಖಲಿಸಿ, ಗೂಂಡಾ ಕಾಯ್ದೆಯಡಿ ಗಡಿಪಾರು ಮಾಡಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದೂರು ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ‘ಇಡೀ ಬೆಳವಣಿಗೆ ಬಗ್ಗೆ ನಾವು ಪೊಲೀಸರಿಗೆ ದೂರು ನೀಡಿದ್ದೇವೆ. 1 ವಾರದಿಂದ ಕಾಂಗ್ರೆಸ್ ಗೂಂಡಾಗಳು ನನ್ನ ಮನೆ ಬಳಿ ಧರಣಿ ಮಾಡುತ್ತಿದ್ದಾರೆ. ಇಂದು ಪ್ರಚೋದನೆ ಮಾಡಲು ಮನೆಗೆ ಚಾಕು, ಚೂರಿ ಕಳಿಸಿದ್ದಾರೆ. ಧಮ್ಕಿ ಹಾಕುವುದು, ಬಾಯಿ ಮುಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ಸತ್ಯ ಹೇಳಲು ಹೆದರಬೇಕಾಗಿಲ್ಲ. ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸ್ ಆಯುಕ್ತರು ಹೇಳಿದ್ದಾರೆ. ಕಾದು ನೋಡುತ್ತೇವೆ, ಕ್ರಮ ಆಗದಿದ್ರೆ ಹೋರಾಟ ಮಾಡುತ್ತೇವೆ’ ಎಂದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.