
ಬೆಂಗಳೂರು, ನವೆಂಬರ್ 21: ಕರ್ನಾಟಕ ಲೋಕಸೇವಾ ಆಯೋಗದ (KPSC) ನೇಮಕಾತಿ ಹಗರಣದ ತನಿಖೆಯಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆಯಾಗಿದೆ. ಜಾರಿ ನಿರ್ದೇಶನಾಲಯ (ED) ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಚಂದ್ರಕಾಂತ್ ಅವರ ಹೆಸರು ಉಲ್ಲೇಖವಾಗಿದೆ. ಇಬ್ಬರು ಪುತ್ರಿಯರಿಗೆ ಕೆಎಎಸ್ ಹುದ್ದೆ ಕೊಡಿಸಲು ಚಂದ್ರಕಾಂತ್ ಅವರು ಎರಡು ಕೋಟಿ ರೂಪಾಯಿ ನೀಡಿದ್ದರು ಎಂಬ ಅಂಶ ಚಾರ್ಜ್‌ಶೀಟ್‌ನಲ್ಲಿ ಪ್ರಸ್ತಾಪವಾಗಿದೆ. ಈ ಪ್ರಕರಣದಲ್ಲಿ ಆರೋಪಿ ಬಸವರಾಜ್ ಕನ್ನಾಳೆ ನೀಡಿರುವ ಹೇಳಿಕೆಯ ಆಧಾರದಲ್ಲಿ ಚಂದ್ರಕಾಂತ್ ಅವರ ಹೆಸರು ಉಲ್ಲೇಖವಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಕನ್ನಾಳೆಯಿಂದ ಇಡಿ ಅಧಿಕಾರಿಗಳು ಹೇಳಿಕೆ ದಾಖಲಿಸಿಕೊಂಡಿದ್ದರು.
ಚಂದ್ರಕಾಂತ್ ಅವರ ಪುತ್ರಿಯರಾದ ತೇಜಸ್ವಿನಿ ಮತ್ತು ಪಲ್ಲವಿ ಕೆಎಎಸ್ ಪರೀಕ್ಷೆ ಬರೆದಿದ್ದರು. ಈ ಪೈಕಿ ಒಬ್ಬರು ಸಂದರ್ಶನಕ್ಕೆ ಅರ್ಹತೆ ಪಡೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ಅರ್ಹತೆ ಗಿಟ್ಟಿಸಿಕೊಳ್ಳಲು ಎರಡು ಕೋಟಿ ರೂಪಾಯಿ ನೀಡಲಾಗಿತ್ತು ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಜ್ಞಾನೇಂದ್ರ ಕುಮಾರ್ ಸೂಚನೆಯಂತೆ ತಾನು ಎರಡು ಕೋಟಿ ರೂಪಾಯಿ ಹಣ ಪಡೆದಿದ್ದೆ. ಚಂದ್ರಕಾಂತ್ ಅವರ ಮನೆ ಸಮೀಪಕ್ಕೆ ತೆರಳಿ ಹಣ ಪಡೆಯುವಂತೆ ಜ್ಞಾನೇಂದ್ರ ಕುಮಾರ್ ತಿಳಿಸಿದ್ದರು. ಅದರಂತೆ ಎರಡು ಕೋಟಿ ರೂಪಾಯಿ ಪಡೆದು ಜ್ಞಾನೇಂದ್ರ ಕುಮಾರ್ ಅವರಿಗೆ ನೀಡಿದ್ದಾಗಿ ಕನ್ನಾಳೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಅಭ್ಯರ್ಥಿಗಳಿಗೆ ಹೆಚ್ಚಿನ ಅಂಕಗಳನ್ನು ಕೊಡಿಸುವ ಉದ್ದೇಶದಿಂದ ಈ ಹಣ ಸಂಗ್ರಹಿಸಲಾಗಿತ್ತು. ಈ ಹಣವನ್ನು ಶಿವಶಂಕರಪ್ಪ ಸಾಹುಕಾರ್ ಅವರಿಗೆ ನೀಡಬೇಕೆಂದು ಜ್ಞಾನೇಂದ್ರ ಕುಮಾರ್ ಸೂಚಿಸಿದ್ದರು ಎಂದು ಕನ್ನಾಳೆ ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಕೆಪಿಎಸ್ಸಿ ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ: ಸಾಹುಕರ್ ಶಿವಶಂಕರಪ್ಪರನ್ನು ವಶಕ್ಕೆ ಪಡೆದ ಎಸ್ಐಟಿ
ಇದಲ್ಲದೆ, ವಾಟ್ಸಾಪ್ ಕರೆಗಳ ಮೂಲಕ ಚಂದ್ರಕಾಂತ್ ಮತ್ತು ಅವರ ಪತ್ನಿ ತಮ್ಮನ್ನು ಸಂಪರ್ಕಿಸುತ್ತಿದ್ದರು. ಪದೇಪದೇ ಕರೆ ಮಾಡಿ ಹಣದ ವಿಚಾರವಾಗಿ ವಿಚಾರಿಸುತ್ತಿದ್ದರು ಎಂದು ಕನ್ನಾಳೆ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಗಳ ಆಧಾರದಲ್ಲಿ ಚಾರ್ಜ್‌ಶೀಟ್‌ನಲ್ಲಿ ಚಂದ್ರಕಾಂತ್ ಅವರ ಹೆಸರು ಪ್ರಸ್ತಾಪವಾಗಿದ್ದು, ಪ್ರಕರಣದಲ್ಲಿ ಅವರ ಪಾತ್ರದ ಕುರಿತು ತನಿಖೆಯ ಮಹತ್ವ ಹೆಚ್ಚಾಗಿದೆ.
ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ತನಿಖೆ ನಡೆಯುತ್ತಿದೆ. ಪರೀಕ್ಷೆಯಲ್ಲಿ ಅಕ್ರಮವಾಗಿ ಅಂಕಗಳನ್ನು ಹೆಚ್ಚಿಸುವುದು, ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಡಲು ಹಣದ ವಹಿವಾಟು ನಡೆಸಿರುವ ಆರೋಪಗಳು ಪ್ರಕರಣದ ಪ್ರಮುಖ ಅಂಶಗಳಾಗಿವೆ. ಈ ಸಂಬಂಧ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದ್ದು, ಆರೋಪಿಗಳ ಹೇಳಿಕೆಗಳು ಮತ್ತು ಹಣದ ವಹಿವಾಟಿನ ವಿವರಗಳನ್ನು ಆಧರಿಸಿ ಚಾರ್ಜ್‌ಶೀಟ್ ಸಲ್ಲಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ