ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಹೆಸರಿನಲ್ಲಿ ಕೋಟಿ-ಕೋಟಿ ಹಣ ಲೂಟಿ ಆರೋಪ: ಮಾಜಿ ಶಾಸಕಿ ವಿರುದ್ಧ ದೂರು ದಾಖಲಿಸಲು ಮುಂದಾದ ಹಾಲಿ ಶಾಸಕ
ಜಯನಗರ ವಾಣಿಜ್ಯ ಸಂಕೀರ್ಣದಲ್ಲಿ ಕೋಟ್ಯಾಂತರ ರೂಪಾಯಿ ಲೂಟಿ ಮತ್ತೆ ಮುನ್ನಲೆಗೆ. ಜಯನಗರ ಶಾಂಪಿಗ್ ಕಾಂಪ್ಲೇಕ್ಸ್ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಲೂಟಿ ಮಾಡಲಾಗಿದೆ ಎಂಬ ಆರೋಪ ಬಿಬಿಎಂಪಿ ಅಧಿಕಾರಿಗಳು ಹಾಗೂ ಮಾಜಿ ಶಾಸಕರ ವಿರುದ್ಧ ಕೇಳಿಬಂದಿದೆ.
ಬೆಂಗಳೂರು: ಬಿಜೆಪಿ ಸರ್ಕಾರ ಕೆಳಗಿಳಿದು ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತಿದೆ. ನೂತನ ಸಚಿವ ಎಂ.ಬಿ. ಪಾಟೀಲ್(MB Patil) ಬಿಜೆಪಿ ಆಡಳಿತದ ಅವಧಿಯಲ್ಲಿ ನಡೆದಿದ್ದ ಅಕ್ರಮಗಳ ಮರು ತನಿಖೆ ಮಾಡಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇದರ ನಡುವೆ ಈಗ ಜಯನಗರ ವಾಣಿಜ್ಯ ಸಂಕೀರ್ಣದಲ್ಲಿ ಕೋಟ್ಯಾಂತರ ರೂಪಾಯಿ ಲೂಟಿ ಮತ್ತೆ ಮುನ್ನಲೆಗೆ. ಜಯನಗರ ಶಾಂಪಿಗ್ ಕಾಂಪ್ಲೇಕ್ಸ್(Jayanagar shopping complex) ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಲೂಟಿ ಮಾಡಲಾಗಿದೆ ಎಂಬ ಆರೋಪ ಬಿಬಿಎಂಪಿ(BBMP) ಅಧಿಕಾರಿಗಳು ಹಾಗೂ ಮಾಜಿ ಶಾಸಕರ (Ex MLAs)ವಿರುದ್ಧ ಕೇಳಿಬಂದಿದೆ. 15 ರಿಂದ 20 ಕೋಟಿ ಲೂಟಿ ಮಾಡಲಾಗಿದೆ ಎನ್ನಲಾಗುತ್ತಿದೆ.
ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ ಅವರು ಈ ಆರೋಪ ಮಾಡಿದ್ದು ಜಯನಗರ ನೂತನ ಶಾಂಪಿಗ್ ಕಾಂಪ್ಲೇಕ್ಸ್ ನಲ್ಲಿ 362 ಮಳಿಗೆ ನಿರ್ಮಾಣ ಮಾಡಲಾಗಿದೆ. 362 ಮಳಿಗೆಗಳಲ್ಲಿ 30 ರಿಂದ 35 ಮಳಿಗೆಗಳನ್ನ ಕಾನೂನು ಬಾಹಿರವಾಗಿ ಮಾರಾಟ ಮಾಡಿದ್ದಾರೆ. ಒಂದು ಮಳಿಗೆಗೆ ಕನಿಷ್ಠ 40 ರಿಂದ 50 ಲಕ್ಷ ಹಣ ಸೂಲಿಗೆ ಮಾಡಿರುವುದಾಗಿ ಶಾಸಕ ರಾಮಮೂರ್ತಿ ಆರೋಪ ಮಾಡಿದ್ದಾರೆ. ಪಾಲಿಕೆ ಮತ್ತು ಬಿಡಿಎ ಸಹಯೋಗದಲ್ಲಿ ನಿರ್ಮಿಸಲಾಗಿರುವ ವಾಣಿಜ್ಯ ಕಟ್ಟಡ ಹೊಸದಾಗಿ ಹಂಚಿಕೆ ಮಾಡಿರುವ ಮಳಿಗೆಗಳಲ್ಲಿ ಅಕ್ರಮದ ವಾಸನೆ ಬರುತ್ತಿದೆ ಎನ್ನಲಾಗಿದೆ.
ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ 3 ಕೋಟಿ ರೂ. ಮೌಲ್ಯದ ಕೊಕೇನ್ ವಶ
ಇನ್ನು ಜಯನಗರ ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆಯಾಗುತ್ತಿದ್ದಂತೆ ನೂತನ ಶಾಸಕ ರಾಮಮೂರ್ತಿ ಭ್ರಷ್ಟರ ಹಿಂದೆ ಬಿದ್ದಿದ್ದಾರೆ. ಜಯನಗರ ವಾಣಿಜ್ಯ ಸಂಕೀರ್ಣದಲ್ಲಿ ಅಕ್ರಮ ಮಳಿಗೆ ನಿರ್ಮಾಣ ಮಾಡಿ ಕಾನೂನು ಬಾಹಿರವಾಗಿ ಹಂಚಿಕೆ ಮಾಡಿ ಕೋಟ್ಯಾಂತರ ರೂಪಾಯಿ ಭ್ರಷ್ಟಾಚಾರ ಮಾಡಿದ್ದಾರೆ ಎಂದಿದ್ದಾರೆ. ಬೇಕಾದವರಿಗೆ ಬೇಕಾಬಿಟ್ಟಿಯಾಗಿ ಮಳಿಗೆಗಳನ್ನ ಹಂಚಿಕೆ ಮಾಡಲಾಗಿದೆ. ಹೀಗಾಗಿ ಶಾಸಕ ರಾಮಮೂರ್ತಿ, ಆಯುಕ್ತರಿಗೆ ಹಾಗೂ ಲೋಕಾಯುಕ್ತರಿಗೆ ದೂರು ಸಲ್ಲಿಸಲು ಮುಂದಾಗಿದ್ದಾರೆ. ಕಾನೂನು ಬಾಹಿರವಾಗಿ ಮಾರಾಟ ಮಾಡಿರುವ ಮಳಿಗೆ ತೆರವು ಮಾಡುವಂತೆ ಪಟ್ಟು ಹಿಡಿಯಲಾಗಿದೆ. ಕಾನೂನು ಉಲ್ಲಂಘಿಸಿ ನಿರ್ಮಿಸಿರುವ ಮಳಿಗೆ ತೆರವು ಮಾಡುವಂತೆ ಶಾಸಕ ರಾಮಮೂರ್ತಿಯಿಂದ ಪಾಲಿಕೆಗೆ ಒತ್ತಾಯ ಕೇಳಿಬಂದಿದೆ.
ಶಾಸಕ ರಾಮಮೂರ್ತಿ ವಿರುದ್ಧ ಮಾನನಷ್ಟ ಮೊಕದ್ದಮೆಗೆ ಮುಂದಾದ ಎನ್ ನಾಗರಾಜ್
ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿ ಅಕ್ರಮ ಆರೋಪಕ್ಕೆ ಸಂಬಂಧಿಸಿ ಭೈರಸಂದ್ರ ಮಾಜಿ ಕಾರ್ಪೋರೇಟರ್ ನಾಗರಾಜು ಹಾಲಿ ಶಾಸಕ ರಾಮಮೂರ್ತಿಗೆ ತಿರಗೇಟು ನೀಡಿದ್ದಾರೆ. ಕಾನೂನು ಬದ್ದವಾಗಿ ಮಳಿಗೆಗಳ ಹಂಚಿಕೆಯಾಗಿದೆ. ಶಾಸಕ ರಾಮಮೂರ್ತಿ ಸೇಡಿನ ರಾಜಕಾರಣ ಮಾಡ್ತಿದ್ದಾರೆ. ಕಾಂಪ್ಲೆಕ್ಸ್ ಹೊರಭಾಗದ ಫುಟ್‌ಪಾತ್‌ನಲ್ಲಿರೋ ವ್ಯಾಪಾರಿಗಳ ಬಳಿ ರೋಲ್‌ಕಾಲ್ ಮಾಡಲು ಮುಂದಾಗಿದ್ದಾರೆ. ಕೂಡಲೇ ತೆರವು ಮಾಡುವಂತೆ ಸೂಚಿಸಿ ಖುದ್ದಾಗಿ ಬಂದು ಕಾಣಲು ಹೇಳಿದ್ದಾರೆ. ತಿಂಗಳ ಮಾಮುಲಿ ಫಿಕ್ಸ್ ಮಾಡಲು ಹೊರಟಿದ್ದಾರೆ. ತನ್ನ ವಿರುದ್ಧ ಆರೋಪಕ್ಕೆ ಮಾನನಷ್ಟ ಮೊಕದ್ದಮೆ ಹೂಡೋದಾಗಿ ಭೈರಸಂದ್ರ ನಾಗರಾಜ್ ತಿರಗೇಟು ನೀಡಿದ್ದಾರೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:42 am, Mon, 29 May 23