ಬೆಂಗಳೂರು ವಿಮಾನ ನಿಲ್ದಾಣದಲ್ಲಿ 3 ಕೋಟಿ ರೂ. ಮೌಲ್ಯದ ಕೊಕೇನ್ ವಶ
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು 30 ಕೋಟಿ ರೂಪಾಯಿ ಮೌಲ್ಯದ 2 ಕೆಜಿ ಕೊಕೇನ್ ವಶಪಡಿಸಿಕೊಂಡಿದ್ದಾರೆ.
ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda International Airport) ಕಂದಾಯ ಗುಪ್ತಚರ ನಿರ್ದೇಶನಾಲಯದ (DRI) ಅಧಿಕಾರಿಗಳು 30 ಕೋಟಿ ರೂಪಾಯಿ ಮೌಲ್ಯದ 2 ಕೆಜಿ ಕೊಕೇನ್ ವಶಪಡಿಸಿಕೊಂಡಿದ್ದಾರೆ. ಆಫ್ರಿಕಾ ಖಂಡದ ಅಡಿಸ್ ಅಬಾಬಾ ಇಥಿಯೋಪಿಯಾ ದೇಶದದಿಂದ ಇಥಿಯೋಪಿಯನ್ ಏರ್‌ಲೈನ್ಸ್ ಮೂಲಕ 38 ವರ್ಷದ ಲೈಬೀರಿಯನ್ ಮಹಿಳೆ ಶುಕ್ರವಾರ (ಮೇ.27) ರಂದು ಮುಂಜಾನೆ ಕೆಐಎಗೆ ಆಗಮಿಸಿದ್ದಳು. ಪ್ರವಾಸಿ ವೀಸಾ ಹೊಂದಿದ್ದ ಮಹಿಳೆಯು ಅನುಮಾನಾಸ್ಪದವಾಗಿ ವರ್ತಿಸುತ್ತಿರುವುದನ್ನು ಕಂಡ ಅಧಿಕಾರಿಗಳು ಪರಿಶೀಲಿಸಿದಾಗ ಹ್ಯಾಂಡ್ ಬ್ಯಾಗ್ನಲ್ಲಿ ಕೊಕೇನ್ ಪತ್ತೆಯಾಗಿದೆ. ಕೂಡಲೆ ಅಧಿಕಾರಿಗಳು ಮಹಿಳೆಯನ್ನು ಬಂಧಿಸಿದ್ದಾರೆ.
ಆಫ್ರಿಕಾದಿಂದ ದೊಡ್ಡ ಪ್ರಮಾಣದ ಕೊಕೇನ್ ಕಳ್ಳಸಾಗಣೆಯಾಗುತ್ತಿದೆ ಎಂಬ ಸುಳಿವಿನ ಮೇರೆಗೆ ಬೆಂಗಳೂರಿನ ಡಿಆರ್‌ಐ ತಂಡವು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಪರಿಶೀಲಿಸುತ್ತಿದ್ದಾರೆ. ಮಹಿಳೆಯು ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡುತ್ತಿದ್ದು, ಬೆಂಗಳೂರಿನಿಂದ ದೇಶದ ವಿವಿಧ ನಗರಗಳಿಗೆ ಪ್ರಯಾಣಿಸಲು ಇಚ್ಚಿಸಿದ್ದಾಳೆ ಎಂದು ತನಿಕೆ ವೇಳೆ ಬಾಯಿಬಿಟ್ಟಿದ್ದಾಳೆ.
ಸದ್ಯ ಅಧಿಕಾರಿಗಳು ಮಹಿಳೆಯನ್ನು ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸ್ ಆಕ್ಟ್ ಅಡಿಯಲ್ಲಿ ಬಂಧಿಸಿದ್ದಾರೆ. ಮಹಿಳೆಯನ್ನು ನ್ಯಾಯಾಂಗ ಬಂಧನದಲ್ಲಿದ್ದು, ಪರಪ್ಪನ ಅಗ್ರಹಾರದಲ್ಲಿ ಕಂಬಿ ಎಣಿಸುತ್ತಿದ್ದಾಳೆ.
ಇದನ್ನೂ ಓದಿ: CISF ಅಧಿಕಾರಿಗಳ ಕಾರ್ಯಾಚರಣೆ: ವಿದೇಶಕ್ಕೆ ಸ್ಮಗಲ್ ಮಾಡಲು ಯತ್ನಿಸುತ್ತಿದ್ದ ವಜ್ರ ವಶ
ಈ ಹಿಂದಿನ ಪ್ರಕರಣಗಳು
ವೈದ್ಯಕೀಯ ಚಿಕಿತ್ಸೆ ವೀಸಾ ಹೊಂದಿದ್ದ 40 ವರ್ಷದ ವ್ಯಕ್ತಿ ಏಪ್ರಿಲ್ 28 ರಂದು ನೈಜೀರಿಯಾದಿಂದ ಬೆಂಗಳೂರಿಗೆ ಬಂದಿಳಿದ್ದನು. ಈತನ ಮೇಲೆ ಅನುಮಾನಗೊಂಡಿದ್ದ ಅಧಿಕಾರಿಗಳು ತಪಾಸಣೆಗೆ ಒಳಪಡಿಸಿದಾಗ 11 ಕೋಟಿ ರೂಪಾಯಿ ಮೌಲ್ಯದ 64 ಕೊಕೇನ್ ಕ್ಯಾಪ್ಸುಲ್‌ಗಳು ಪತ್ತೆಯಾಗಿದ್ದವು.
ಫೆಬ್ರವರಿ 20 ರಂದು, ಇಥಿಯೋಪಿಯಾದಿಂದ ಬೆಂಗಳೂರಿಗೆ ಆಗಮಿಸಿದ್ದ 33 ವರ್ಷದ ಭಾರತೀಯ ಮಹಿಳೆಯ ಕಪ್ಪು ಬಣ್ಣದ ಸೂಟ್‌ಕೇಸ್‌ನಲ್ಲಿ 30 ಕೋಟಿ ರೂಪಾಯಿ ಮೌಲ್ಯದ 2.5 ಕೆಜಿ ಕಳಪೆ ಗುಣಮಟ್ಟದ ಕೊಕೇನ್ ಪತ್ತೆಯಾಗಿತ್ತು. ಆಕೆಯ ಸಹಚರರು ಏಕಕಾಲದಲ್ಲಿ 60 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್‌ನೊಂದಿಗೆ ಚೆನ್ನೈ ಮತ್ತು ಮುಂಬೈ ವಿಮಾನ ನಿಲ್ದಾಣಗಳಲ್ಲಿ ಸಿಕ್ಕಿಬಿದ್ದಿದ್ದರು.
ಜನವರಿ 14 ರಂದು, ದುಬೈ ಮೂಲಕ ಗಿನಿಯಾದಿಂದ ಕೆಐಎಗೆ ಬಂದಿಳಿದ ಸಿಯೆರಾ ಲಿಯೋನ್‌ನ 40 ವರ್ಷದ ಮಹಿಳೆ ಹೊಟ್ಟೆಯಲ್ಲಿ 58 ಕೊಕೇನ್ ಕ್ಯಾಪ್ಸುಲ್‌ಗಳು ಪತ್ತೆಯಾಗಿದ್ದವು. ಆಕೆಯ ಬಳಿ 7 ಕೋಟಿ ಮೌಲ್ಯದ 686 ಗ್ರಾಂ ಡ್ರಗ್ಸ್ ಇತ್ತು.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:06 am, Mon, 29 May 23