AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ನಡು ರಸ್ತೆಯಲ್ಲೇ ವ್ಯಕ್ತಿಯ ಭೀಕರ ಹತ್ಯೆ ಪ್ರಕರಣ: 24 ಗಂಟೆಯೊಳಗೆ ರೌಡಿಶೀಟರ್ ಸೇರಿ 6 ಮಂದಿ ಬಂಧನ

ಬೆಂಗಳೂರಿನ ಮಡಿವಾಳ ಅಂಡರ್‌ಪಾಸ್‌ ಬಳಿ ಶನಿವಾರ ರಾತ್ರಿ ನಡೆದ ಸುಹೇಲ್ ಹತ್ಯೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಘಟನೆ ನಡೆದ 24 ಗಂಟೆಯೊಳಗೆ ರೌಡಿಶೀಟರ್ ಆದಿಲ್ ಸೇರಿದಂತೆ ಆರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಕೊಲೆ ಮಾಡಿದ ಬಳಿಕ ಬಿಡದಿಗೆ ತೆರಳಿದ್ದರು ಎನ್ನಲಾಗಿದ್ದು, ಅಲ್ಲಿಂದ ಲಾರಿ ಮೂಲಕ ಮುಂಬೈಗೆ ಪರಾರಿಯಾಗಲು ಪ್ಲಾನ್ ಮಾಡಿದ್ದರು ಎಂಬುದು ತಿಳಿದುಬಂದಿದೆ.

ಬೆಂಗಳೂರಿನ ನಡು ರಸ್ತೆಯಲ್ಲೇ ವ್ಯಕ್ತಿಯ ಭೀಕರ ಹತ್ಯೆ ಪ್ರಕರಣ: 24 ಗಂಟೆಯೊಳಗೆ ರೌಡಿಶೀಟರ್ ಸೇರಿ 6 ಮಂದಿ ಬಂಧನ
ಮಡಿವಾಳ ಕೊಲೆ ಪ್ರಕರಣ: 24 ಗಂಟೆಯೊಳಗೆ ರೌಡಿಶೀಟರ್ ಸೇರಿ 6 ಮಂದಿ ಬಂಧನImage Credit source: tv9
ವಿಕಾಸ್​ ಬಿಎಂ
| Edited By: |

Updated on: Aug 24, 2026 | 9:56 AM

Share

ಬೆಂಗಳೂರು, ಆಗಸ್ಟ್ 24: ಬೆಂಗಳೂರಿನ (Bengaluru) ಮಡಿವಾಳದಲ್ಲಿ ಮೆಡಿಕಲ್ ಶಾಪ್ ನಡೆಸುತ್ತಿದ್ದ ಸುಹೇಲ್ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿವಾಳ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ರೌಡಿಶೀಟರ್ ಆದಿಲ್ ಸೇರಿದಂತೆ ಆರು ಮಂದಿಯನ್ನು ಘಟನೆ ನಡೆದ 24 ಗಂಟೆಯೊಳಗೆ ಬಂಧಿಸಲಾಗಿದ್ದು, ಹತ್ಯೆಯ ಹಿಂದಿನ ನಿಖರ ಕಾರಣ ಹಾಗೂ ಆರೋಪಿಗಳ ಪಾತ್ರದ ಬಗ್ಗೆ ತನಿಖೆ ಮುಂದುವರಿದಿದೆ. ಮಡಿವಾಳ ಅಂಡರ್‌ಪಾಸ್‌ ಸಮೀಪ ಶನಿವಾರ ರಾತ್ರಿ ಸುಹೇಲ್‌ನನ್ನು ಮಾರಕಾಸ್ತ್ರಗಳಿಂದ ಹತ್ಯೆ ಮಾಡಲಾಗಿತ್ತು. ಈ ಕೃತ್ಯದ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಘಟನೆಯ ಬೆನ್ನಲ್ಲೇ ಪೊಲೀಸರು ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದರು.

ಶಬ್ಬೀರ್ ಹತ್ಯೆಗೆ ಪ್ರತೀಕಾರದ ಶಂಕೆ

ಜನವರಿಯಲ್ಲಿ ಬಂಡೆಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶಬ್ಬೀರ್ ಎಂಬಾತನ ಹತ್ಯೆಯಾಗಿತ್ತು. ಆ ಪ್ರಕರಣದಲ್ಲಿ ಸುಹೇಲ್‌ನ ಸಹೋದರರು ಶಾಮೀಲಾಗಿದ್ದರು ಎನ್ನಲಾಗಿದ್ದು, ಶಬ್ಬೀರ್‌ನ ಆಪ್ತನಾಗಿದ್ದ ಆದಿಲ್ ಈ ವಿಚಾರದಲ್ಲಿ ಸುಹೇಲ್ ಕುಟುಂಬದ ವಿರುದ್ಧ ದ್ವೇಷ ಹೊಂದಿದ್ದ ಎನ್ನಲಾಗಿದೆ. ಶಬ್ಬೀರ್ ಹತ್ಯೆಗೆ ಪ್ರತೀಕಾರವಾಗಿ ಸುಹೇಲ್‌ನನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂಬ ಅನುವಾನ ಇದ್ದು, ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದೇ ವೇಳೆ, ಆದಿಲ್ ಹಾಗೂ ಸುಹೇಲ್ ನಡುವೆ ಈ ಹಿಂದಿನಿಂದಲೂ ವೈಮನಸ್ಸು ಇತ್ತು ಎನ್ನಲಾಗಿದ್ದು, ಇಬ್ಬರ ಗುಂಪುಗಳ ನಡುವಿನ ಪ್ರದೇಶದ ಪ್ರಾಬಲ್ಯದ ಸಂಘರ್ಷವೂ ಪ್ರಕರಣಕ್ಕೆ ಕಾರಣವಾಗಿರಬಹುದೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ.

ಸುಹೇಲ್ ಕೂಡ ಆದಿಲ್ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತನ್ನ ಆಪ್ತರ ಬಳಿ ಹೇಳಿಕೊಂಡಿದ್ದ ಎನ್ನಲಾಗಿದೆ. ಮತ್ತೊಂದೆಡೆ, ತನ್ನನ್ನು ಗುರಿಯಾಗಿಸುವ ಮುನ್ನವೇ ಎದುರಾಳಿಯನ್ನು ಹೊಡೆಯುವ ಬಗ್ಗೆ ಆದಿಲ್ ಹೇಳಿಕೊಂಡಿದ್ದ ಎನ್ನುವ ಮಾಹಿತಿಯೂ ತನಿಖೆಯಲ್ಲಿ ಹೊರಬಂದಿದೆ.

ಮುಂಬೈಗೆ ಪರಾರಿಯಾಗಲು ಪ್ಲ್ಯಾನ್?

ಸುಹೇಲ್ ಹತ್ಯೆಯ ಬಳಿಕ ಆರೋಪಿಗಳು ಬಿಡದಿಗೆ ತೆರಳಿದ್ದರು ಎನ್ನಲಾಗಿದ್ದು, ಅಲ್ಲಿಂದ ಲಾರಿ ಮೂಲಕ ಮುಂಬೈಗೆ ಪರಾರಿಯಾಗಲು ಯೋಜನೆ ರೂಪಿಸಿದ್ದರು ಎಂಬ ಮಾಹಿತಿ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಆದರೆ ಅದಕ್ಕೂ ಮುನ್ನವೇ ಪೊಲೀಸರು ಕಾರ್ಯಾಚರಣೆ ನಡೆಸಿ ಆರು ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ನಡು ರಸ್ತೆಯಲ್ಲಿಯೆ ವ್ಯಕ್ತಿಯ ಭೀಕರ ಹತ್ಯೆ: ಪ್ರತೀಕಾರಕ್ಕಾಗಿ ನಡೀತಾ ಕೊಲೆ?

ಮಂಗಮ್ಮನಪಾಳ್ಯ ಪ್ರದೇಶದಲ್ಲಿ ಪ್ರಾಬಲ್ಯ ಸಾಧಿಸುವ ವಿಚಾರವಾಗಿ ಸುಹೇಲ್ ಮತ್ತು ಆದಿಲ್ ಗುಂಪುಗಳ ನಡುವೆ ಸಂಘರ್ಷವಿತ್ತು ಎನ್ನಲಾಗಿದ್ದು, ಹಳೆಯ ದ್ವೇಷವೂ ಕೊಲೆಗೆ ಪ್ರಮುಖ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ವಿಕಾಸ್​ ಬಿಎಂ
ವಿಕಾಸ್​ ಬಿಎಂ

ವಿಕಾಸ್​ ಬಿಎಂ ಅವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ. ಬೆಳೆದಿದ್ದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ. ಮೈಸೂರು ಯೂನಿವರ್ಸಿಟಿ ಯಲ್ಲಿ ಶಿಕ್ಷಣ ಮುಗಿಸಿ, 2014 ರಿಂದ ಎಲೆಕ್ಟ್ರಾನಿಕ್ ಮಾದ್ಯಮದಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ಸದ್ಯ ಬೆಂಗಳೂರು ಕ್ರೈಂ ವರದಿಗಾರನಾಗಿ 11 ವರ್ಷ ಸೇವೆ ಸಲ್ಲಿಸಿದ್ದಾರೆ. ಕ್ರೈಂ ರಿಪೋರ್ಟಿಂಗ್ ಹಾಗು ಇನ್ವೆಷ್ಟಿಗೇಟಿವ್ ವರದಿಗಾರರಾಗಿ ಹಾಗು ಸ್ಟಿಂಗ್ ಆಪರೇಷನ್​ಗಳನ್ನ ಮಾಡಿದ್ದಾರೆ. ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದ ಸುದ್ದಿ ಮೊದಲು ಬ್ರೇಕ್ ಮಾಡಿದ್ದಲ್ಲದೆ, ಶಂಕಿತರ ಸಿಸಿ ಕ್ಯಾಮರಾ ವಿಡಿಯೋಗಳನ್ನ ಪ್ರಸರಣ ಮಾಡಿ ಸಂಸ್ಥೆಯಿಂದ ಪ್ರಶಂಸೆಗೆ ಪಾತ್ರನಾಗಿದ್ದಾರೆ. ಅಲ್ಲದೇ ಬೆಂಗಳೂರಲ್ಲಿ ಟೈಡಾಲ್ ಡ್ರಗ್ ಸೇವನೆಯ ಸ್ಟಿಂಗ್ ಆಪರೇಷನ್ ಮಾಡಿ, ಮೆಡಿಕಲ್ ಗಳಲ್ಲಿ ಟೈಡಾಲ್ ಮಾತ್ರೆಯ ಮಾರಟ ನಿಯಂತ್ರಣಕ್ಕೆ ಬರುವಂತೆ ಮಾಡಿದ್ದಾರೆ. ನೊಂದವರ ಪರವಾಗಿ ನಿಂತು ವಸ್ತುನಿಷ್ಠವಾಗಿ ಸುದ್ದಿಗಳನ್ನ ನೀಡಿ ನ್ಯಾಯ ಕೊಡಿಸುವುದು ಇವರ ಮೊದಲ ಉದ್ದೇಶ. ಸದ್ಯ ಟಿವಿ9 ಸಂಸ್ಥೆಯಲ್ಲಿ ಬೆಂಗಳೂರು ಕ್ರೈಂ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ರೋಡ್ ಟ್ರಿಪ್, ಕ್ರಿಕೆಟ್‌, ವಾಲಿಬಾಲ್ ಆಡುವುದು, ಕ್ರೈಂ ಇನ್ವೆಷ್ಟಿಗೇಷನ್ ಪುಸ್ತಕ ಓದುವುದು ಮತ್ತು ಕ್ರೈಂ ತ್ರಿಲ್ಲರ್ ಸಿನಿಮಾಗಳನ್ನ ನೋಡುವುದು ಇವರ ಹವ್ಯಾಸಗಳು.

Read More