
ಬೆಂಗಳೂರು, ಏಪ್ರಿಲ್ 26: ರಾಜ್ಯದಾದ್ಯಂತ ಇರುವ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ವಿದ್ಯಾರ್ಥಿಗಳು ಪ್ರತಿದಿನ ಕನಿಷ್ಠ 10 ನಿಮಿಷಗಳ ಕಾಲ ಕನ್ನಡ ದಿನಪತ್ರಿಕೆಗಳನ್ನು (Kannada Newspaper) ಓದುವುದನ್ನು ಶಿಕ್ಷಣ ಇಲಾಖೆ ಕಡ್ಡಾಯಗೊಳಿಸಿದೆ. ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಶಿಫಾರಸಿನ ಮೇರೆಗೆ ಈ ಆದೇಶ ಹೊರಡಿಸಲಾಗಿದೆ. ಪ್ರತಿದಿನ ಬೆಳಗಿನ ಪ್ರಾರ್ಥನೆಯ ನಂತರ ವಿದ್ಯಾರ್ಥಿಗಳು ಪತ್ರಿಕೆ ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ಇಲಾಖೆ ಸೂಚಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ನಿಷೇಧಿಸುವ ಬಗ್ಗೆ ಬಜೆಟ್‌ನಲ್ಲಿ ಘೋಷಿಸಿದ್ದು, ಅದರ ಮುಂದಿನ ಭಾಗವಾಗಿ ಈ ಶೈಕ್ಷಣಿಕ ಸುಧಾರಣೆ ಜಾರಿಗೆ ಬಂದಿದೆ. ಈ ನೂತನ ನಿಯಮವು ಮಕ್ಕಳನ್ನು ಬಾಹ್ಯ ಜಗತ್ತಿನ ವಿದ್ಯಮಾನಗಳೊಂದಿಗೆ ಸಂಪರ್ಕಿಸಲು ಮತ್ತು ಅವರಲ್ಲಿ ಓದುವ ಆಸಕ್ತಿ ಮೂಡಿಸಲು ಸಹಕಾರಿಯಾಗಲಿದೆ ಎಂದು ಇಲಾಖೆ ವಿಶ್ವಾಸ ವ್ಯಕ್ತಪಡಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ