ಭಯೋತ್ಪಾದಕರಿಗೆ ಫಂಡಿಂಗ್ ಎಲ್ಲಿಂದ? ಕುಕ್ಕರ್ ಬ್ಲಾಸ್ಟ್ ಪ್ರಮುಖ ಆರೋಪಿ ಶಾರಿಕ್ನ ತೀವ್ರ ವಿಚಾರಣೆ ನಡೆಸಿದ ಇಡಿ
ಉಗ್ರರಿಗೆ ವಿದೇಶಗಳಿಂದ ಹಣಕಾಸು ನೆರವು ಹರಿದುಬರುತ್ತಿದೆ ಎಂಬ ಆರೋಪಗಳ ಬಗ್ಗೆ ಜಾರಿ ನಿರ್ದೇಶನಾಯಲ ತನಿಖೆ ತೀವ್ರಗೊಳಿಸಿದೆ. ಎನ್ಐಎ ತನಿಖೆ ವೇಳೆ ಸಿಕ್ಕ ಸುಳಿವಿನಿಂದಾಗಿ ಇದೀಗ ಇ.ಡಿ ಸಹ ಅಖಾಡಕ್ಕಿಳಿದಿದ್ದು, ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿಯನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಿದೆ.

ಬೆಂಗಳೂರು, ಆಗಸ್ಟ್ 28: ದೇಶದಾದ್ಯಂತ ಸಂಚಲನ ಮೂಡಿಸಿದ್ದ ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣ ಮತ್ತೆ ಸುದ್ದಿಯಲ್ಲಿದೆ. ದೇಶದಲ್ಲಿ ವಿಧ್ವಂಸಕ ಕೃತ್ಯಕ್ಕೆ ಹವಣಿಸಿದ್ದ ಭಯೋತ್ಪಾದಕರಿಗೆ (Terrorists) ಫಂಡಿಂಗ್ ಮಾಡಿದ್ದು ಯಾರು ಎಂಬುದರ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ತೀವ್ರಗೊಳಿಸಿದೆ. ಭಯೋತ್ಪಾದಕ ಕೃತ್ಯ ಎಸಗುವವರ ಹಣದ ಮೂಲದ ಬಗ್ಗೆ ತನಿಖೆ ಚುರುಕುಗೊಂಡಿದ್ದು, ಕುಕ್ಕರ್ ಬ್ಲಾಸ್ಟ್ ಪ್ರಕರಣದ ಪ್ರಮುಖ ಆರೋಪಿ ಶಾರಿಕ್ನನ್ನು (Mohammed Shariq) ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ (Parappana Agrahara Jail) ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.
ಶಾರಿಕ್ ಮಾತ್ರವಲ್ಲದೆ, ಪರಪ್ಪರ ಅಗ್ರಹಾರ ಜೈಲಿನಲ್ಲಿರುವ ಇತರ ಶಂಕಿತ ಉಗ್ರರನ್ನೂ ಜಾರಿ ನಿರ್ದೇಶನಾಲಯ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಆರೋಪಿಗಳಿಗೆ, ಅಕ್ರಮ ಹಣ ಸಂದಾಯ ಆಗಿತ್ತು ಎಂಬ ಆರೋಪಗಳ ಬಗ್ಗೆ ತನಿಖೆ ಚುರುಕುಗೊಳಿಸಿದ್ದಾರೆ.
ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣದ ಪ್ರಮುಖ ಆರೋಪಿ ಶಾರೀಕ್ ಸೇರಿದಂತೆ ಪ್ರಕರಣದ ಇನ್ನಿತರ ಆರೋಪಿಗಳ ವಿಚಾರಣೆ ನಡೆಸಲಾಗಿದೆ. ವಿದೇಶದಿಂದ ಆರೋಪಿಗಳಿಗೆ ಹಣ ಸಂದಾಯ ಆಗಿರುವ ಬಗ್ಗೆ ಇಡಿ ತನಿಖೆ ಮಾಡುತ್ತಿದೆ. ನ್ಯಾಯಾಲಯದ ಅನುಮತಿ ಪಡೆದು ಜೈಲಿನಲ್ಲಿ ಶಂಕಿತ ಉಗ್ರರ ವಿಚಾರಣೆ ನಡೆಸಿದೆ.
ಉಗ್ರರ ತನಿಖೆಗೆ ಇ.ಡಿ ಮುಂದಾಗಲು ಕಾರಣವೇನು?
ದೇಶದ ಹಲವೆಡೆ ವಿದ್ವಂಸಕ ಕೃತ್ಯಗಳನ್ನು ಎಸಗಲು ಸಂಚು ರೂಪಿಸಿದ್ದ ಶಂಕಿತ ಉಗ್ರರ ಷಡ್ಯಂತ್ರ ಎನ್ಐಎ ತನಿಖೆವೇಳೆ ಬಯಲಾಗಿತ್ತು. ಅದರ ಬೆನ್ನಲ್ಲೇ ವಿದೇಶಿ ಹಣದ ಮೂಲದ ಕುರಿತಂತೆ ತನಿಖೆಗೆ ಇಡಿ ಮುಂದಾಗಿದೆ. ಶಂಕಿತ ಉಗ್ರರಿಗೆ ಭಯೋತ್ಪಾದನಗೆ ಹಣದ ಪೂರೈಕೆ, ಫಂಡಿಂಗ್ ಹಿಂದಿನ ಕಾಣದ ಕೈಗಳು ಯಾವುದು ಎಂಬುದನ್ನು ಇಡಿ ತನಿಖೆ ಬಯಲಿಗೆಳೆಯಲಿದೆ.
ಇದನ್ನೂ ಓದಿ: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಕೇಸ್ಗೆ ಇಡಿ ಎಂಟ್ರಿ, ಆರೋಪಿ ಖಾತೆ ಸೀಜ್
ಮಂಗಳೂರಿನಲ್ಲಿ 2022ರ ನವೆಂಬರ್‌ನಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಸಂಭವಿಸಿತ್ತು. ಪ್ರಕರಣ ಸಂಬಂಧ ಮೂರು ವಾರಗಳ ಹಿಂದೆ ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿದೆ. ಐಸಿಸ್ ಸಂಘಟನೆಯ ಹಣಕಾಸು ವ್ಯವಹಾರ ಮತ್ತು ಕ್ರಿಪ್ಟೋ ಕರೆನ್ಸಿ ಮೂಲಕ ಹಣದ ವರ್ಗಾವಣೆಯನ್ನು ಇಡಿ ಪತ್ತೆ ಹಚ್ಚುತ್ತಿದ್ದು, ಇದರ ಭಾಗವಾಗಿ ಕುಕ್ಕರ್ ಬ್ಲಾಸ್ಟ್ ಕೇಸ್ಗೂ ಎಂಟ್ರಿ ಕೊಟ್ಟಿದೆ. ಇಡಿ ತನಿಖೆಗೆ ಇಳಿಯುತ್ತಿದ್ದಂತೆಯೇ, ಆರೋಪಿಗಳ ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಲಾಗಿತ್ತು. ಇದರ ಜೊತೆಗೆ, ಭಾರತಾದ್ಯಂತ ಐಸಿಸ್ ಚಟುವಟಿಕೆಗಳನ್ನು ವಿಸ್ತರಿಸುವ ಉಗ್ರರ ಸಂಚಿನ ಬಗ್ಗೆಯೂ ತನಿಖೆ ನಡೆಯುತ್ತಿದೆ.







