
ಮಂಗಳೂರು, ನವೆಂಬರ್ 04: ಕರಾವಳಿಯ ಮೂವರು ಸಾಹಸಿಗಳು ಹಳೆಯ ಮಾಡೆಲ್ ಕಾರಿನಲ್ಲಿ ಹಿಮಾಲಯದ ಕಠಿಣ ಹಾದಿಯನ್ನು ಮೆಟ್ಟಿ ನಿಂತು ಇತಿಹಾಸ ಸೃಷ್ಟಿಸಿದ್ದಾರೆ. ಮಂಗಳೂರಿನ ಹರೀಶ್ ಭಟ್, ಕೃಷ್ಣ ಪ್ರಸಾದ್ ಭಟ್ ಹಾಗೂ ರಾಕೇಶ್ ಬೋಳಾರ್ ಎಂಬುವವರು 2001ರ ಮಾಡೆಲ್ ನ ಮಾರುತಿ 800 ಕಾರಿನಲ್ಲಿ ಸುಮಾರು 11 ರಾಜ್ಯಗಳನ್ನು ಸುತ್ತಿ, ಬರೋಬ್ಬರಿ 6,900 ಕಿಲೋಮೀಟರ್ ದೂರವನ್ನು ಕ್ರಮಿಸುವ ಮೂಲಕ ಲಡಾಖ್ ತಲುಪಿ ಸಾಧನೆ ಮಾಡಿದ್ದಾರೆ. 2026ರ ಅಕ್ಟೋಬರ್ 19 ರಂದು ಆರಂಭವಾದ ಈ ಸಾಹಸಯಾತ್ರೆಯನ್ನು ಯಶಸ್ವಿಯಾಗಿ ಮುಗಿಸಿ ನವೆಂಬರ್ 2 ರಂದು ವಾಪಸ್ ಮಂಗಳೂರಿಗೆ ಮರಳಿದ್ದಾರೆ.
ಕೇವಲ ರೋಮಾಂಚನಕ್ಕಾಗಿ ಮಾತ್ರವಲ್ಲದೆ, ‘ಕಾಡು ಉಳಿಸಿ, ವನ್ಯಜೀವಿ ಸಂರಕ್ಷಣೆ ಮತ್ತು ಪ್ಲಾಸ್ಟಿಕ್ ಮುಕ್ತ ಭೂಮಿ’ಯಂತಹ ಪರಿಸರ ಜಾಗೃತಿಯ ಸಂದೇಶವನ್ನು ಸಾರಲು ಈ ಮೂವರು ಮುಂದಾಗಿದ್ದರು. ಯಾವುದೇ ಆಧುನಿಕ ಸೌಲಭ್ಯಗಳು, ಜಿಪಿಎಸ್ ಅಥವಾ ಎಸಿ ಇಲ್ಲದ 25 ವರ್ಷ ಹಳೆಯ ಕಾರಿನಲ್ಲಿ ಈ ದೂರದ ಪ್ರಯಾಣ ಕೈಗೊಂಡಿರುವುದು ವಿಶೇಷ. ಕಾರಿನಲ್ಲಿ ಯಾವುದೇ ತಾಂತ್ರಿಕ ದೋಷ ಉಂಟಾದರೆ ಸರಿಪಡಿಸಲು ಅಗತ್ಯವಿರುವ ಬಿಡಿಭಾಗಗಳನ್ನು ಮಾತ್ರ ಅವರು ಜೊತೆಯಲ್ಲಿ ಕೊಂಡೊಯ್ದಿದ್ದರು.
ಈ ಕುರಿತು ಮಾತನಾಡಿರುವ ರಾಕೇಶ್ ಬೋಳಾರ್, “ಆಫ್-ಸೀಸನ್ ಸಮಯದಲ್ಲಿ ಪ್ರಯಾಣಿಸಿದ್ದರಿಂದ ಮೈನಸ್ 14 ಡಿಗ್ರಿ ಸೆಲ್ಸಿಯಸ್ ವರೆಗಿನ ತೀವ್ರ ಚಳಿಯನ್ನು ಎದುರಿಸಬೇಕಾಯಿತು. ರಸ್ತೆಗಳಲ್ಲಿ ಹೆಪ್ಪುಗಟ್ಟಿದ ‘ಬ್ಲಾಕ್ ಐಸ್’ ಕಾರಣದಿಂದ ವಾಹನ ಚಾಲನೆ ಅತ್ಯಂತ ಅಪಾಯಕಾರಿಯಾಗಿತ್ತು. ಮುಂಜಾಗ್ರತಾ ಕ್ರಮವಾಗಿ ನಾವು ಆಮ್ಲಜನಕ ಸಿಲಿಂಡರ್ ಅನ್ನು ಕೂಡ ಜೊತೆಯಲ್ಲಿ ಇಟ್ಟುಕೊಂಡಿದ್ದೆವು” ಎಂದು ಹಂಚಿಕೊಂಡಿದ್ದಾರೆ. ಯಾವುದೇ ಜಿಪಿಎಸ್ ನೆರವಿಲ್ಲದೆ, ಹಳ್ಳಿಕಾಡಿನ ರಸ್ತೆಗಳ ಮೂಲಕ ಸಾಗುತ್ತಾ ಭಾರತದ ವಿವಿಧ ಸಂಸ್ಕೃತಿ ಹಾಗೂ ಜನರ ಪ್ರೀತಿಯನ್ನು ಹತ್ತಿರದಿಂದ ಅನುಭವಿಸಿದ್ದಾಗಿ ಅವರು ತಿಳಿಸಿದ್ದಾರೆ.
ಇದೇ ರೀತಿಯ ಸಾಹಸಮಯ ಯತ್ನವೊಂದರಲ್ಲಿ, ಬೆಂಗಳೂರಿನ 35 ವರ್ಷದ ಚಾಲಕ ಬಾಲಕೃಷ್ಣ ಮೋಹನ್ ಅವರು ತಮ್ಮ ಸ್ವಂತ ಆಟೋ ರಿಕ್ಷಾದಲ್ಲೇ ಲಡಾಖ್‌ಗೆ ಬರೋಬ್ಬರಿ 24 ದಿನಗಳ ಕಾಲ 8,000 ಕಿ.ಮೀ ಒಂಟಿ ಪ್ರಯಾಣ ನಡೆಸಿ ಐತಿಹಾಸಿಕ ಸಾಧನೆ ಮಾಡಿದ್ದರು. 2026ರ ಆಗಸ್ಟ್ 1 ರಂದು ಪ್ರಯಾಣ ಆರಂಭಿಸಿದ ಅವರು ಮಹಾರಾಷ್ಟ್ರ, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳನ್ನು ದಾಟಿ, ಜೊಜಿ ಲಾ ಪಾಸ್‌ನಂತಹ ಅಪಾಯಕಾರಿ ಹಾದಿಗಳನ್ನು ಎದುರಿಸಿದರು. ಬೆಟ್ಟದ ದಾರಿಯಲ್ಲಿ ಸಿಎನ್‌ಜಿ ಬಂಕ್‌ಗಳಿಲ್ಲದ ಕಾರಣ ಪೆಟ್ರೋಲ್‌ಗೆ ಬದಲಾಯಿಸಿಕೊಂಡು, 19,024 ಅಡಿ ಎತ್ತರದಲ್ಲಿರುವ ವಿಶ್ವದ ಅತ್ಯಂತ ಎತ್ತರದ ಮೋಟಾರು ವಾಹನ ರಸ್ತೆಯಾದ ‘ಉಮ್ಲಿಂಗ್ ಲಾ’ ತಲುಪಿ ಆಟೋ ರಿಕ್ಷಾ ಪ್ರಯಾಣದಲ್ಲಿ ಹೊಸ ಇತಿಹಾಸ ಬರೆದಿದ್ದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ