“ಕೋಪದ ಕೈಗೆ ಬುದ್ಧಿ ಕೊಡಬೇಡಿ, ಜೈಲಿನಲ್ಲಿ ಎಲ್ಲ ಕಳೆದುಕೊಂಡೆ”: ಕೊಲೆ ಕೇಸ್‌ನಲ್ಲಿ ಜೈಲಿಗೆ ಹೋದ್ರೂ ಕೈಬಿಡದ ಪ್ರೇಯಸಿ
ಕೊಲೆ ಕೇಸ್‌ನಲ್ಲಿ 14 ವರ್ಷ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾದ ಮಣಿಕಂಠ ಅವರ ಕಥೆ ಇದು. ಸಿಟ್ಟಿನಿಂದ ಮಾಡಿದ ತಪ್ಪಿಗೆ ಜೈಲು ಸೇರಿದರೂ, ಅವರ ಪ್ರೇಯಸಿ ನಿಷ್ಠೆಯಿಂದ ಕಾದಿದ್ದರು. ಜೈಲಿಂದ ಹೊರಬಂದಾಗ ಮದುವೆಯಾಗಿ, ಈಗ ಮಗನ ಜೊತೆ ಹೊಸ ಜೀವನ ಆರಂಭಿಸಿದ್ದಾರೆ. ಕೋಪಕ್ಕೆ ಬುದ್ಧಿ ಕೊಡಬೇಡಿ, ಅಮೂಲ್ಯ ಸಮಯ ಕಳೆದುಕೊಳ್ಳಬೇಡಿ ಎಂದು ಯುವಕರಿಗೆ ಕಿವಿಮಾತು ಹೇಳಿದ್ದಾರೆ.

ಮುಖ್ಯಾಂಶಗಳು
- ಜೈಲು ಶಿಕ್ಷೆ ಮನುಷ್ಯನನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ
- ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾದ ಮಣಿಕಂಠ ಅವರ ಕಥೆ
- ಕಷ್ಟದ ದಿನಗಳಲ್ಲೂ ಅವರ ಕೈಹಿಡಿದಿದ್ದು ಅವರ ಪ್ರೀತಿಸಿದ ಹುಡುಗಿ
ಬೆಂಗಳೂರು, ಜು.4 : ತಿಳಿಯದೇ ಮಾಡಿದ ಒಂದು ತಪ್ಪು ಇಡೀ ಬದುಕನ್ನೇ ಕತ್ತಲಿಗೆ ತಳ್ಳಬಹುದು. ಜೈಲು ಶಿಕ್ಷೆ ಮನುಷ್ಯನನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ ಎನ್ನುವುದಕ್ಕೆ ಸನ್ನಡತೆ ಆಧಾರದ ಮೇಲೆ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾದ ಮಣಿಕಂಠ ಅವರ ಕಥೆಯೇ ಸಾಕ್ಷಿ. ಆಕಸ್ಮಿಕವಾಗಿ ನಡೆದ ಕೊಲೆ ಪ್ರಕರಣದಲ್ಲಿ ಸಿಲುಕಿ ಬರೋಬ್ಬರಿ 14 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿ ಇಂದು ಮುಕ್ತರಾಗಿ ಹೊರಬಂದ ಮಣಿಕಂಠ, ತಮ್ಮ ಜೀವನದ ಏಳುಬೀಳುಗಳನ್ನು ಹಂಚಿಕೊಂಡಿದ್ದಾರೆ.
ಮಣಿಕಂಠ ಅವರ ಈ ಕಷ್ಟದ ದಿನಗಳಲ್ಲೂ ಅವರ ಕೈಹಿಡಿದಿದ್ದು ಅವರ ಪ್ರೀತಿಸಿದ ಹುಡುಗಿ. ಕೊಲೆ ಪ್ರಕರಣದಲ್ಲಿ ಜೈಲು ಸೇರುವ ಮುನ್ನ ಮಣಿಕಂಠ ಒಬ್ಬ ಯುವತಿಯನ್ನು ತುಂಬಾ ಪ್ರೀತಿಸುತ್ತಿದ್ದರು. ತಾನು ಪ್ರೀತಿಸಿದ ಹುಡುಗ ಕೊಲೆ ಕೇಸ್‌ನಲ್ಲಿ 14 ವರ್ಷ ಜೈಲು ಪಾಲಾದರೂ ಆ ಯುವತಿ ಮಾತ್ರ ಆತನ ಮೇಲಿನ ಪ್ರೀತಿಯನ್ನು ಕೈಬಿಡಲಿಲ್ಲ. ಜೈಲಿನಲ್ಲಿದ್ದರೂ ಅವರಿಗಾಗಿ ಕಾದಿದ್ದರು.
ಹುಡುಗಿಯ ನಿಶ್ಚಲ ಪ್ರೀತಿಗೆ ಗೌರವ ಕೊಟ್ಟ ಮಣಿಕಂಠ, ಕಳೆದ 2017ರಲ್ಲಿ ಜೈಲಿನಿಂದ ಪೆರೋಲ್ ಮೇಲೆ ಹೊರಬಂದಾಗ ತಮ್ಮ ಮನೆ ದೇವರ ದೇವಸ್ಥಾನದಲ್ಲಿ ಆಕೆಯನ್ನು ಮದುವೆಯಾದರು. ಸದ್ಯ ಈ ದಂಪತಿಗೆ 7 ವರ್ಷದ ಮಗನಿದ್ದು, ಆತ ಈಗ ಒಂದನೇ ತರಗತಿಯಲ್ಲಿ ಓದುತ್ತಿದ್ದಾನೆ.
ಜೈಲಿನಲ್ಲಿ 10 ವರ್ಷ ಬೇಕರಿ ಕೆಲಸ:
ಜೈಲು ಜೀವನದ ಬಗ್ಗೆ ಮಾತನಾಡಿದ ಮಣಿಕಂಠ, “ಕಾನೂನಿನ ಅರಿವಿಲ್ಲದೆ, ಸಿಟ್ಟಿನ ಕೈಗೆ ಬುದ್ಧಿ ಕೊಟ್ಟು ಮಾಡಿದ ತಪ್ಪಿನಿಂದಾಗಿ 14 ವರ್ಷ ಜೈಲಿನಲ್ಲಿ ಕಳೆಯಬೇಕಾಯಿತು. ಜೈಲು ಶಿಕ್ಷೆಯೇ ನನ್ನ ಮನಪರಿವರ್ತನೆ ಮಾಡಿದೆ. ಜೈಲಿನಲ್ಲಿದ್ದಾಗ ಸುಮಾರು 10 ವರ್ಷಗಳ ಕಾಲ ಬೇಕರಿ ಕೆಲಸ ಮಾಡಿಕೊಂಡಿದ್ದೆ. ಅಲ್ಲಿ ಎಲ್ಲವನ್ನೂ ಕಳೆದುಕೊಂಡಿದ್ದೇನೆ. ತಂದೆ-ತಾಯಿ, ಇಡೀ ಕುಟುಂಬವನ್ನು ಬಿಟ್ಟು ಬದುಕುವುದು ಎಷ್ಟು ಕಷ್ಟ ಎಂಬುದು ನನಗೀಗ ಅರ್ಥವಾಗಿದೆ” ಎಂದು ಕಣ್ಣೀರಿಟ್ಟಿದ್ದಾರೆ.
ಇದನ್ನೂ ಓದಿ: ಸನ್ನಡತೆ ಆಧಾರದ ಮೇಲೆ ಪರಪ್ಪನ ಅಗ್ರಹಾರದಿಂದ 24 ಜೀವಾವಧಿ ಖೈದಿಗಳಿಗೆ ಅವಧಿ ಪೂರ್ವ ಬಿಡುಗಡೆ ಭಾಗ್ಯ
ಯುವಕರಿಗೆ ಮಣಿಕಂಠ ಕಿವಿಮಾತು:
“ಯಾರೂ ಕೂಡ ಕೋಪದ ಕೈಗೆ ಬುದ್ಧಿ ಕೊಡಬೇಡಿ, ಎಲ್ಲವನ್ನೂ ಪ್ರೀತಿಯಿಂದಲೇ ಗೆಲ್ಲಬೇಕು. ಇಲ್ಲದಿದ್ದರೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ನಿಮ್ಮ ಅಮೂಲ್ಯವಾದ ಸಮಯ, ಹೆತ್ತ ತಂದೆ-ತಾಯಿಯ ಪ್ರೀತಿ ಎಲ್ಲವನ್ನೂ ಕಳೆದುಕೊಳ್ಳಬೇಕಾಗುತ್ತದೆ” ಎಂದು ಯುವ ಪೀಳಿಗೆಗೆ ಮಣಿಕಂಠ ಕಿವಿಮಾತು ಹೇಳಿದ್ದಾರೆ. “ಈಗ ಪತ್ನಿ ಮತ್ತು ಮಗನ ಜೊತೆ ಹೊಸದಾಗಿ ನೆಮ್ಮದಿಯ ಜೀವನ ಶುರು ಮಾಡುತ್ತೇನೆ” ಎಂದು ಅವರು ಭಾವುಕರಾಗಿ ಹೇಳಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:56 pm, Sat, 4 July 26



