ಬೆಂಗಳೂರು: ಇಬ್ಬರು ಹೆಣ್ಣುಮಕ್ಕಳನ್ನು ಕತ್ತು ಸೀಳಿ ಕೊಲೆ ಮಾಡಿದ ಮಲತಂದೆ ಅರೆಸ್ಟ್
ಆ.24ರಂದು ಅಮೃತಹಳ್ಳಿಯ ಕಾವೇರಿ ಬಡಾವಣೆಯಲ್ಲಿ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಕತ್ತುಸೀಳಿ ಪರಾರಿಯಾಗಿದ್ದ ಮಲತಂದೆಯನ್ನು ಇಂದು ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಬೆಂಗಳೂರಿನಿಂದ ಎಸ್ಕೇಪ್ ಆಗಲು ರೈಲ್ವೆ ನಿಲ್ದಾಣದಲ್ಲಿ ಟಿಕೆಟ್ ಪಡೆಯಲು ಮೊಬೈಲ್ ಆನ್ ಮಾಡಿದ್ದು ಕ್ಷಣಾರ್ಥದಲ್ಲಿ ಸ್ಥಳಕ್ಕೆ ಪೊಲೀಸರು ಆಗಮಿಸಿ ಬಂಧಿಸಿದ್ದಾರೆ.
ಬೆಂಗಳೂರು, ಆಗಸ್ಟ್.26: ಬೆಂಗಳೂರಿನಲ್ಲಿ ಇಬ್ಬರು ಬಾಲಕಿಯರ ಕೊಲೆ (Murder) ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಮಲತಂದೆ ಸುಮಿತ್ನನ್ನು ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಅಮೃತಹಳ್ಳಿ ಠಾಣೆ ಪೊಲೀಸರು (Amruthahalli Police) ಬಂಧಿಸಿದ್ದಾರೆ. ಬೆಂಗಳೂರಿನಿಂದ ಎಸ್ಕೇಪ್ ಆಗಲು ಆರೋಪಿ ಸುಮಿತ್ ರಾತ್ರಿ ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ಬಂದಿದ್ದ. ಈ ವೇಳೆ ಟಿಕೆಟ್ ಖರೀದಿಸಲು ಮೊಬೈಲ್ ಆನ್ ಮಾಡಿದ್ದ. ಕೆಲವೇ ಸೆಕೆಂಡ್ ಆನ್ ಮಾಡಿ ಮೊಬೈಲ್ ಆಫ್ ಮಾಡಿದ್ದ. ಅಷ್ಟೊತ್ತಿಗಾಗಲೇ ಪೊಲೀಸರು ಆರೋಪಿಯನ್ನು ಸುತ್ತುವರಿದು ಬಂಧಿಸಿದ್ದಾರೆ. ಅಮೃತಹಳ್ಳಿ ಠಾಣೆ ಪೊಲೀಸರು ಆರೋಪಿ ಸುಮಿತ್ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಘಟನೆ ಹಿನ್ನೆಲೆ
ಆ.24ರಂದು ಅಮೃತಹಳ್ಳಿಯ ಕಾವೇರಿ ಬಡಾವಣೆಯಲ್ಲಿ ಇಬ್ಬರು ಬಾಲಕಿಯರನ್ನು ಕತ್ತುಸೀಳಿ ಮಲತಂದೆ ಕೊಲೆ ಮಾಡಿದ ಘಟನೆ ನಡೆದಿತ್ತು. ಶಾಲೆಗೆ ಹೋಗುತಿದ್ದ ಮಕ್ಕಳ ಅತಿಯಾಗಿ ಕೇರ್ ಮಾಡುತಿದ್ದ ಮಲತಂದೆಗೆ ಅವರ ಪ್ರತಿ ಹೆಜ್ಜೆಯೂ ಅನುಮಾನವಾಗಿದ್ದು, ಇತ್ತೀಚೆಗೆ ಇಬ್ಬರು ಹೆಣ್ಣು ಮಕ್ಕಳು ಇದೇ ವಿಚಾರವಾಗಿ ಬೇಸರಗೊಂಡಿದ್ದರಂತೆ.. ಅಲ್ಲದೇ ಮಲತಂದೆ ಜೊತೆ ಸರಿಯಾಗಿ ಮಾತನಾಡುವುದು ಬಿಟ್ಟಿದ್ದರಂತೆ. ಇದೇ ಕೋಪಕ್ಕೆ ಮೊನ್ನೆ ಇಬ್ಬರು ಹೆಣ್ಣು ಮಕ್ಕಳನ್ನು ಮಲತಂದೆ ಸುಮಿತ್ ಹತ್ಯೆ ಮಾಡಿರೋ ಅನುಮಾನ ವ್ಯಕ್ತವಾಗಿದೆ.
ಇದನ್ನೂ ಓದಿ: ಏಳು ವರ್ಷದ ಬಾಲಕಿ ಮೇಲೆ 55 ವರ್ಷದ ವ್ಯಕ್ತಿಯಿಂದ ಅತ್ಯಾಚಾರ: ಹುಬ್ಬಳ್ಳಿಲ್ಲೊಂದು ಅಮಾನವೀಯ ಘಟನೆ
ಕಳೆದ ಒಂದು ವರ್ಷದ ಹಿಂದೆ ಕಾವೇರಿ ಬಡವಾಣೆಗೆ ಶಿಫ್ಟ್ ಆಗಿದ್ದ ಕುಟುಂಬ ಆರಂಭದಲ್ಲಿ ಚೆನ್ನಾಗಿದ್ದರು. ಆದರೇ ಕಳೆದ ಎರಡು ತಿಂಗಳಿಂದ ಮನೆಯಲ್ಲಿ ಗಲಾಟೆ ಶುರುವಾಗಿದೆ. ಇದು ಮನೆ ಮಾಲೀಕನಿಗೆ ಸರಿ ಎಂದೆನಿಸಿರಲಿಲ್ಲ. ಜೊತೆಗೆ ಎರಡು ತಿಂಗಳಿಂದ ಬಾಕಿ ಇಟ್ಟುಕೊಂಡ ಬಾಡಿಗೆ ಹಣ ತಲೆ ಬಿಸಿ ತಂದಿತ್ತು. ಇದೇ ಕಾರಣಕ್ಕೆ ಮನೆ ಖಾಲಿ ಮಾಡುವಂತೆ ಮಾಲೀಕ ಸುಮಿತ್ ಗೆ ಸೂಚಿಸಿದ್ದ. ಅದರಂತೆ ಈ ಬರುವ 1ನೇ ತಾರೀಖು ಮನೆ ಖಾಲಿ ಮಾಡೊದಾಗಿ ಹೇಳಿದ್ದ. ಮನೆ ಜಗಳದಲ್ಲಿ ಮಕ್ಕಳ ಕೊಲೆ ಮಾಡಿದ್ದಾನೆಂದು ಮನೆ ಮಾಲೀಕರು ಹೇಳುತಿದ್ದಾರೆ.
ಇನ್ನು ಸುಮಿತ್ ಜೊತೆ ಅನಿತಾಳಿಗೆ ಕಳೆದ ೪ ವರ್ಷಗಳ ಹಿಂದೆ ಮದುವೆಯಾಗಿತ್ತು. ಇಬ್ಬರು ಚೆನ್ನಾಗಿಯೇ ಇದ್ದರು. ಅಲ್ಲದೇ ಅನಿತಾಳ ಇಬ್ಬರು ಹೆಣ್ಣು ಮಕ್ಕಳನ್ನು ಸುಮಿತ್ ಸಹ ನೋಡಿಕೊಳ್ಳುತಿದ್ದ. ಆದರೇ ಕಳೆದ ಎರಡು ತಿಂಗಳಿಂದ ಅದ್ಯಾಕೋ ಮಕ್ಕಳ ಮೇಲೆ ಹೆಚ್ಚು ಒತ್ತಡ ಹಾಕುತಿದ್ದನಂತೆ. ಗೆಳೆಯರು, ಸಂಬಂಧಿಕರ ಜೊತೆ ಮಾತನಾಡದಂತೆ ರೂಲ್ಸ್ ಮಾಡಿದ್ದನಂತೆ. ಈ ವಿಚಾರ ತಿಳಿದ ತಾಯಿ ಇಬ್ಬರು ಹೆಣ್ಣು ಮಕ್ಕಳನ್ನು ಹೆಬ್ಬಾಳದ ತನ್ನ ಸಹೋದರನ ಮನೆಗೆ ಕಳುಹಿಸಿದ್ದರು. ಆ ಬಳಿಕ ಈತನೇ ಕರೆ ಮಾಡಿ ತಾನು ಮಾಡಿದ್ದು, ತಪ್ಪಾಯ್ತು ಎಂದು ಕ್ಷಮೆ ಕೇಳಿ ಇಬ್ಬರನ್ನು ಮನೆಗೆ ವಾಪಾಸ್ ಕರೆಸಿದ್ದ. ಆದರೇ ಹೀಗೆ ಕರೆಸಿದ 20 ದಿನದಲ್ಲೇ ಅನುಮಾನ ಹುಚ್ಚಿಗೆ ಆ ಇಬ್ಬರು ಮಕ್ಕಳ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದ. ಸದ್ಯ ಈಗ ಆರೋಪಿಯನ್ನು ಬಂಧಿಸಲಾಗಿದ್ದು ಆರೋಪಿ ಸತ್ಯ ಬಾಯಿಬಿಡಬೇಕಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ