AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮ್ಯಾಟ್ರಿಮೋನಿಯಲ್‌ನಲ್ಲಿ ‘ಡಾಕ್ಟರ್’ ಎಂದು ಬಿಲ್ಡಪ್ ಕೊಟ್ಟು ಹತ್ತಕ್ಕೂ ಹೆಚ್ಚು ಯುವತಿಯರಿಗೆ ವಂಚನೆ!

ಮ್ಯಾಟ್ರಿಮೋನಿ ವೆಬ್‌ಸೈಟ್‌ಗಳಲ್ಲಿ ನಕಲಿ PhD ಡಾಕ್ಟರ್ ಪ್ರೊಫೈಲ್ ಸೃಷ್ಟಿಸಿ, ಮದುವೆಯಾಗುವುದಾಗಿ ನಂಬಿಸಿ ಬೆಂಗಳೂರು ಮತ್ತು ಮೈಸೂರಿನ ಯುವತಿಯರಿಗೆ ಲಕ್ಷಾಂತರ ರೂ. ವಂಚಿಸಿದ ಪ್ರದೀಪ್ ಸೋಲೋಮನ್ ಹಾಗೂ ಆತನ ತಾಯಿ ಕಲಾವತಿ ವಿರುದ್ಧ ಆಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐಷಾರಾಮಿ ಜೀವನ ಶೈಲಿ ಪ್ರದರ್ಶಿಸಿ, ಹಣ ಬ್ಯಾಂಕ್‌ನಲ್ಲಿ ಸಿಕ್ಕಿಹಾಕಿಕೊಂಡಿದೆ ಎಂದು ಸುಳ್ಳು ಹೇಳಿ ಹಣ ಪಡೆದು ತಲೆಮರೆಸಿಕೊಂಡಿರುವ ಅಮ್ಮ-ಮಗನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಮ್ಯಾಟ್ರಿಮೋನಿಯಲ್‌ನಲ್ಲಿ 'ಡಾಕ್ಟರ್' ಎಂದು ಬಿಲ್ಡಪ್ ಕೊಟ್ಟು ಹತ್ತಕ್ಕೂ ಹೆಚ್ಚು ಯುವತಿಯರಿಗೆ ವಂಚನೆ!
ಮ್ಯಾಟ್ರಿಮೋನಿ ವಂಚನೆ ಮಾಡುತ್ತಿರುವ ನಕಲಿ ಡಾಕ್ಟರ್
ಅಕ್ಷಯ್​ ಪಲ್ಲಮಜಲು​​
|

Updated on: May 22, 2026 | 3:46 PM

Share

ಬೆಂಗಳೂರು, ಮೇ.22: ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ಗಳಲ್ಲಿ ತಾನು ಪಿಎಚ್‌ಡಿ (PhD) ಪದವೀಧರ, ಡಾಕ್ಟರ್ ಎಂದು ಸುಳ್ಳು ಪ್ರೊಫೈಲ್ ಸೃಷ್ಟಿಸಿ, ಮದುವೆಯಾಗುವುದಾಗಿ ನಂಬಿಸಿ ಮೈಸೂರು ಮತ್ತು ಬೆಂಗಳೂರಿನ ಹತ್ತಕ್ಕೂ ಹೆಚ್ಚು ಯುವತಿಯರಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ವಂಚನೆ ಜಾಲದ ಸೂತ್ರಧಾರ ಪ್ರದೀಪ್ ಸೋಲೋಮನ್ ಹಾಗೂ ಆತನಿಗೆ ಸಾತ್ ನೀಡಿದ ತಾಯಿ ಕಲಾವತಿ ವಿರುದ್ಧ ಬೆಂಗಳೂರಿನ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಪೊಲೀಸರ ಬಂಧನ ಭೀತಿಯಲ್ಲಿ ಅಮ್ಮ-ಮಗ ಇಬ್ಬರೂ ಎಸ್ಕೇಪ್ ಆಗಿದ್ದಾರೆ.

ಆರೋಪಿ ಪ್ರದೀಪ್ ಸೋಲೋಮನ್ ಮ್ಯಾಟ್ರಿಮೋನಿಯಲ್ ಸೈಟ್‌ಗಳಲ್ಲಿ ‘ಡಾ. ಪ್ರದೀಪ್ ಸೋಲೋಮನ್’ ಹೆಸರಿನಲ್ಲಿ ಹೈ-ಫೈ ಪ್ರೊಫೈಲ್ ತೆರೆದಿದ್ದನು. ಮಗನ ಈ ವಂಚನೆ ಆಟಕ್ಕೆ ತಾಯಿ ಕಲಾವತಿ ಕೂಡ ಸಂಪೂರ್ಣ ಸಾತ್ ನೀಡಿದ್ದಳು. ಇವರಿಬ್ಬರು ಮೈಸೂರಿನಲ್ಲಿ ದೊಡ್ಡದೊಂದು ಐಷಾರಾಮಿ ಬಂಗಲೆಯನ್ನು ಬಾಡಿಗೆಗೆ ಪಡೆದು, ತಾವು ದೊಡ್ಡ ಶ್ರೀಮಂತರು ಎಂಬಂತೆ ಸಮಾಜದಲ್ಲಿ ಬಿಲ್ಡಪ್ ಕೊಡುತ್ತಿದ್ದರು. ಈ ಬಂಗಲೆ ಮತ್ತು ಅವರ ಲೈಫ್‌ಸ್ಟೈಲ್ ನೋಡಿ ಮದುವೆ ಸಂಬಂಧ ಬೆಳೆಸಲು ಮುಂದೆ ಬರುವ ವಧುವಿನ ಕುಟುಂಬಸ್ಥರನ್ನು ತಮ್ಮ ಬಣ್ಣದ ಮಾತುಗಳ ಬಲೆಗೆ ಬೀಳಿಸಿಕೊಳ್ಳುತ್ತಿದ್ದರು.

ಇದನ್ನೂ ಓದಿ: ವೆಬ್​​​ಸೈಟ್​​​​ಗೆ ಪೇಜ್​​ ವಿವ್ಸ್​​​ ಬರದಿರಲು ಇದೆ ಅಸಲಿ ಕಾರಣ!: ಗೂಗಲ್ ತಂದ ಎಐ ಮಾರಿ; ಇನ್ಮುಂದೆ ಲಿಂಕ್ ಕ್ಲಿಕ್ ಮಾಡೋರೇ ಇರಲ್ವಾ?

ಯುವತಿಯರ ಕುಟುಂಬದ ನಂಬಿಕೆ ಗಳಿಸಿದ ನಂತರ, “ನನ್ನ ದೊಡ್ಡ ಮೊತ್ತದ ಹಣ ತಾಂತ್ರಿಕ ಕಾರಣಗಳಿಂದ ಬ್ಯಾಂಕ್‌ನಲ್ಲಿ ಸ್ಟ್ರಕ್ (Stuck) ಆಗಿದೆ, ಇನ್ನು ಕೆಲವೇ ದಿನಗಳಲ್ಲಿ ಹಣ ವಾಪಸ್ ಬರುತ್ತದೆ, ಸದ್ಯಕ್ಕೆ ಅರ್ಜೆಂಟ್ ಇದೆ” ಎಂದು ಹೇಳಿ ಲಕ್ಷ ಲಕ್ಷ ರೂಪಾಯಿ ಹಣಕ್ಕೆ ಡಿಮ್ಯಾಂಡ್ ಮಾಡುತ್ತಿದ್ದನು. ಪ್ರದೀಪನ ಮಾತು ನಂಬಿ ಇತ್ತೀಚೆಗೆ ಬೆಂಗಳೂರು ಮೂಲದ ಶ್ರೀಮಂತ ಕುಟುಂಬವೊಂದು ಲಕ್ಷಾಂತರ ರೂಪಾಯಿ ಹಣ ನೀಡಿ ವಂಚನೆಗೊಳಗಾಗಿದೆ. ಹಣ ಕೈ ಸೇರಿದ ಬೆನ್ನಲ್ಲೇ ಅಮ್ಮ-ಮಗ ಇಬ್ಬರೂ ನಾಪತ್ತೆಯಾಗಿದ್ದಾರೆ.

ಪ್ರದೀಪ್ ಕೈಯಲ್ಲಿ ಮೋಸ ಹೋದ ಮೈಸೂರು ಮತ್ತು ಬೆಂಗಳೂರಿನ ಹಲವು ಯುವತಿಯರು ಹಾಗೂ ಅವರ ಕುಟುಂಬಸ್ಥರು ಈಗ ಮೈಸೂರಿನ ಆ ಬಂಗಲೆಯ ಮುಂದೆ ಬಂದು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ. ಇತ್ತ ಅಡುಗೋಡಿ ಪೊಲೀಸರು ಕಳೆದ ಎರಡು ದಿನಗಳಿಂದ ವಂಚಕ ಅಮ್ಮ-ಮಗನಿಗಾಗಿ ತೀವ್ರ ಶೋಧ ಕಾರ್ಯ (ತಲಾಶ್) ನಡೆಸುತ್ತಿದ್ದಾರೆ. ಬಂಧನ ಭೀತಿಯಿಂದ ತಲೆಮರೆಸಿಕೊಂಡಿರುವ ಈ ಖತರ್ನಾಕ್ ಜೋಡಿಯ ಪತ್ತೆಗಾಗಿ ಪೊಲೀಸರು ವಿಶೇಷ ತಂಡ ರಚಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Akshay Pallamajalu
Akshay Pallamajalu

ನನ್ನ ಹೆಸರು ಅಕ್ಷಯ್ ಕುಮಾರ್ ಪಲ್ಲಮಜಲು, ನನ್ನ ಊರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕು, ಡಿಜಿಟಲ್​ ವಿಭಾಗದಲ್ಲಿ 3 ವರ್ಷಗಳ ಅನುಭವ, ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದು, ಟಿವಿ9ನಲ್ಲೂ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದೇನೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಲೇಖನಗಳನ್ನು ಬರೆಯುತ್ತೇನೆ.

Read More