
ಬೆಂಗಳೂರು, ಆಗಸ್ಟ್ 21: ಸಚಿವ ನಾಗೇಂದ್ರ ಅವರ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಸದನದ ಒಳಗೆ ಮತ್ತು ಹೊರಗೆ ಭಾರಿ ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ, ರಾಜ್ಯ ಸರ್ಕಾರವು ಅವರಿಗೆ ಮತ್ತೊಂದು ಮಹತ್ವದ ಜವಾಬ್ದಾರಿಯನ್ನು ವಹಿಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈಗಾಗಲೇ ಯೋಜನೆ ಮತ್ತು ಸಾಂಖ್ಯಿಕ ಖಾತೆಯನ್ನು ನಿರ್ವಹಿಸುತ್ತಿರುವ ನಾಗೇಂದ್ರ ಅವರಿಗೆ, ಇದೀಗ ‘ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಸಚಿವಾಲಯ’ದ ಹೊಣೆಯನ್ನೂ ನೀಡಲಾಗಿದೆ.
ವಿಧಾನ ಪರಿಷತ್‌ನಲ್ಲಿ ಬಿಜೆಪಿ ಸದಸ್ಯ ಶಶೀಲ್ ನಮೋಶಿ ಅವರು ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವ ನಾಗೇಂದ್ರ, ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. 2025ರಲ್ಲಿ ರಚನೆಯಾದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಸಚಿವಾಲಯಕ್ಕೆ ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸಚಿವರೇ ಮುಖ್ಯಸ್ಥರಾಗಿರುತ್ತಾರೆ ಎಂದು ತಿಳಿಸಿದ್ದಾರೆ. ಈ ಸಚಿವಾಲಯದ ಅಧೀನದಲ್ಲಿಯೇ ಪ್ರಮುಖವಾದ ‘ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ’ (KKRDB) ಕಾರ್ಯನಿರ್ವಹಿಸಲಿದ್ದು, ಈ ಹೊಸ ಸಚಿವಾಲಯದ ಸುಗಮ ಕಾರ್ಯಾಚರಣೆಗಾಗಿ ಸರ್ಕಾರ ಒಟ್ಟು 16 ಹುದ್ದೆಗಳನ್ನು ಮೀಸಲಿಟ್ಟಿದೆ.
ಒಂದು ಕಡೆ ನಾಗೇಂದ್ರ ಅವರ ವಿರುದ್ಧ ವಿರೋಧ ಪಕ್ಷದ ನಾಯಕರು ತೀವ್ರ ಪ್ರತಿಭಟನೆ ನಡೆಸುತ್ತಿದ್ದರೆ, ಮತ್ತೊಂದು ಕಡೆ ಸರ್ಕಾರ ಅವರಿಗೆ ಈ ಮಹತ್ವದ ಖಾತೆಯನ್ನು ನೀಡಿರುವುದು ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ.
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣ ಖಂಡಿಸಿ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಶಾಸಕರ ಭವನದ ವಾಲ್ಮೀಕಿ ಪ್ರತಿಮೆ ಬಳಿ ಕಪ್ಪು ಟೀ-ಶರ್ಟ್ ಧರಿಸಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ವಿಪಕ್ಷ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ನಡೆದ ಈ ಧರಣಿಯಲ್ಲಿ ಶಾಸಕರು ನಾಗೇಂದ್ರ ರಾಜೀನಾಮೆಗೆ ಆಗ್ರಹಿಸುವ ಬರಹಗಳಿದ್ದ ಟೀ-ಶರ್ಟ್ ಧರಿಸಿ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಕಪ್ಪು ಟೀ ಶರ್ಟ್ ಧರಿಸಿ ಬಿಜೆಪಿ-ಜೆಡಿಎಸ್ ಪ್ರತಿಭಟನೆ
ಕಳೆದ 5 ದಿನಗಳಿಂದ ಸದನದಲ್ಲಿ ಹೋರಾಟ ನಡೆಸಲಾಗುತ್ತಿದ್ದು, ದಲಿತರ ಹಣ ಲೂಟಿ ಮಾಡಿದವರನ್ನು ಸರ್ಕಾರ ತಕ್ಷಣ ವಜಾಗೊಳಿಸಬೇಕು ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆಗ್ರಹಿಸಿದ್ದಾರೆ. ನಾಗೇಂದ್ರ ಬದಲಿಗೆ ಕಾಂಗ್ರೆಸ್‌ನ ಬೇರೆ ದಲಿತ ಶಾಸಕರಿಗೆ ಸಚಿವ ಸ್ಥಾನ ನೀಡಲಿ ಎಂದಿರುವ ಅವರು, ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಜೊತೆಗೂಡಿ ಸದನದ ಒಳಗೆ ಹಾಗೂ ಹೊರಗೆ ಜಂಟಿ ಹೋರಾಟ ಮುಂದುವರಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:18 pm, Fri, 21 August 26