‘ಬೆಂಗಳೂರಿಗೆ ಬಂದ ಹಲವು ಶಾಸಕರು ಎರಡೆರಡು ಮದುವೆ ಆಗಿದ್ದಾರೆ’: ತೀವ್ರ ಕುತೂಹಲ ಮೂಡಿಸಿದ ಸಿಎಂ ಡಿಕೆ ಶಿವಕುಮಾರ್​​ ಹೇಳಿಕೆ

ಬೆಂಗಳೂರಿಗೆ ಬಂದ ಅನೇಕ ಶಾಸಕರು ಎರಡೆರಡು ಮದುವೆಯಾಗಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೇಳಿರೋದೀಗ ಭಾರಿ ಕುತೂಹಲ ಮೂಡಿಸಿದೆ. ಆ ಶಾಸಕರು ಯಾರೆಂಬ ಪ್ರಶ್ನೆ ಉದ್ಭವಿಸಿವೆ. ಈ ನಡುವೆ ಸಿಎಂ ಹೇಳಿಕೆ ಬಗ್ಗೆ ಬಿಜೆಪಿ ಹಿರಿಯ ಶಾಸಕ ಸುರೇಶ್​​ ಕುಮಾರ್​​ ಆಕ್ಷೇಪ ತೆಗೆದಿದ್ದು, ಎರಡೆರಡು ಮದುವೆ ಆಗಿರುವ ಶಾಸಕರ ಹೆಸರುಗಳನ್ನು ದಯವಿಟ್ಟು ಬಹಿರಂಗ ಮಾಡಿ ಎಂದು ಆಗ್ರಹಿಸಿದ್ದಾರೆ. ಇಲ್ಲದಿದ್ದರೆ ರಾಜ್ಯದ ಜನತೆ ಎಲ್ಲರನ್ನೂ ಅಸಹ್ಯ ದೃಷ್ಟಿಯಿಂದ ಕಾಣುವ ಅಥವಾ ಅಪಹಾಸ್ಯ ಮಾಡುವ ಸಾಧ್ಯತೆ ಇದೆ ಎಂದಿದ್ದಾರೆ.

ಬೆಂಗಳೂರಿಗೆ ಬಂದ ಹಲವು ಶಾಸಕರು ಎರಡೆರಡು ಮದುವೆ ಆಗಿದ್ದಾರೆ: ತೀವ್ರ ಕುತೂಹಲ ಮೂಡಿಸಿದ ಸಿಎಂ ಡಿಕೆ ಶಿವಕುಮಾರ್​​ ಹೇಳಿಕೆ
ಡಿಕೆ ಶಿವಕುಮಾರ್​​
Edited By:

Updated on: Sep 25, 2026 | 12:02 PM

ಬೆಂಗಳೂರು, ಸೆಪ್ಟೆಂಬರ್​​ಮ 25: 1991ರಲ್ಲಿ ‘ಇಬ್ಬರು ಹೆಂಡಿರ ಮುದ್ದಿನ ಪೊಲೀಸ್’ ಎಂಬ ಸಿನಿಮಾ ಬಂದಿತ್ತು. ಆದರೀಗ ‘ಇಬ್ಬರು ಹೆಂಡಿರ ಮುದ್ದಿನ ಶಾಸಕರು’ ಯಾರೆಂದು ಜನ ಚರ್ಚೆ ಮಾಡತೊಡಗಿದ್ದಾರೆ. ಇದಕ್ಕೆ ಕಾರಣವಾಗಿರೋದು ವಿಧಾನಸಭೆಯಲ್ಲಿಯೇ ಸಿಎಂ ಡಿಕೆ ಶಿವಕುಮಾರ್​​ ಅವರು ನೀಡಿರುವ ಹೇಳಿಕೆ. ಹೌದು, ಶಾಸಕರ ಮದುವೆ ಬಗ್ಗೆ ಸಿಎಂ ಡಿಕೆಶಿ ಸ್ಫೋಟಕ ಹೇಳಿಕೆ ನೀಡಿದ್ದು, ಬೆಂಗಳೂರಿಗೆ ಬಂದ ಶಾಸಕರು ಯಾರೂ ವಾಪಸ್​ ಹೋಗ್ತಿಲ್ಲ. ಅದರ ಹಿಸ್ಟ್ರೀ ನನ್ನ ಬಳಿ ಇದೆ, ಎರಡೆರಡು ಮದುವೆ ಆಗಿದ್ದಾರೆ. ಅದು ಒಂದು ಡಜನ್ ಇದೆ, ನಾನು ಬೇಕಿದ್ರೆ ಅದರ ಪಟ್ಟಿ ಹೇಳ್ತೀನಿ. ಧಾರವಾಡ, ಕಾರವಾರ, ದಕ್ಷಿಣ ಕನ್ನಡ ಜಿಲ್ಲೆಯವರನ್ನೂ ಹೇಳ್ತೀನಿ. ಆದರೆ ಆ ರೀತಿಯ ಪರಿಸ್ಥಿತಿ ಬೇಡ. ಬೆಂಗಳೂರಿಗೆ ಬಂದವರು ಯಾರೂ ಬಿಟ್ಟು ವಾಪಸ್ ಹೋಗ್ತಿಲ್ಲ. ಅದಕ್ಕಾಗಿ ಬೆಂಗಳೂರಿನ ಜನಸಂಖ್ಯೆ ಹೆಚ್ಚಾಗಿದೆ ಎಂದು ಸಿಎಂ ಹೇಳಿರೋದು ಹೊಸ ಚರ್ಚೆ ಹುಟ್ಟುಹಾಕಿದೆ.

ಸಿಎಂ ಹೇಳಿಕೆಗೆ ಬಿಜೆಪಿ ಶಾಸಕ ಎಸ್​​. ಸುರೇಶ್​​ ಕುಮಾರ್​​ ಆಕ್ಷೇಪ

ಇನ್ನು ಸಿಎಂ ನೀಡಿರುವ ಈ ಹೇಳಿಕೆ ಬಗ್ಗೆ ಬಿಜೆಪಿ ಹಿರಿಯ ಶಾಸಕ ಎಸ್​​. ಸುರೇಶ್​​ ಕುಮಾರ್​​ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಿನ್ನೆ ನಾನು ಸಂಜೆ ನನ್ನ ಗೆಳೆಯರೊಬ್ಬರು ಆಸ್ಪತ್ರೆಯಲ್ಲಿ ಇದ್ದ ಕಾರಣ ಅವರನ್ನು ಕಾಣಲು ಸದನದಿಂದ ಕೊಂಚ ಮುಂಚೆ ಹೊರಟೆ. ಮುಖ್ಯಮಂತ್ರಿಗಳು ಸದನದಲ್ಲಿ ಉತ್ತರ ಕೊಡುವಾಗ ನಾನು ಇರಲು ಸಾಧ್ಯವಾಗಿರಲಿಲ್ಲ. ಮುಖ್ಯಮಂತ್ರಿಗಳು ನೀಡಿರುವ ಉತ್ತರ ಲಘುವಾಗಿಯೇ ಇರಬಹುದು. ಆದರೆ ಈ ರೀತಿಯ ಉತ್ತರ ವಿಧಾನಸಭಾ ವೇದಿಕೆಯಿಂದ ಮಾತನಾಡುವುದು ಯಾರಿಗೂ ಘನತೆ ತರುವ ವಿಚಾರವಲ್ಲ. ನಾಡಿನ ಮುಖ್ಯಮಂತ್ರಿಗಳು ಈ ರೀತಿ ಹೇಳಬಾರದಿತ್ತು. ಇದು ಯಾರಿಗೂ ಗೌರವ ತರುವ ಸಂಗತಿಯಲ್ಲ. ಸದನದ ಗಾಂಭೀರ್ಯತೆಗೆ ತಕ್ಕ ಸಂಗತಿಯಲ್ಲ. ನಾನು ಸದನದಲ್ಲಿ ಇದ್ದಿದ್ದರೆ ಕೂಡಲೇ ಪ್ರತಿಕ್ರಿಯಿಸುತ್ತಿದ್ದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಡಿಕೆಶಿ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ: ಚುನಾವಣೆ, ಬರ ನಿರ್ವಹಣೆ ಸೇರಿ ಏನೇನು ಚರ್ಚೆಯಾಯ್ತು? ಇಲ್ಲಿದೆ ಪೂರ್ಣ ವಿವರ

ಮೊದಲೇ ವಿಧಾನಸಭಾ ಸದನವನ್ನು, ಅಲ್ಲಿ ನಡೆಯುವ ಚರ್ಚೆಯನ್ನು, ಶಾಸಕರನ್ನು ನಾಡಿನ ಜನತೆ ಗಂಭೀರವಾಗಿ ಪರಿಗಣಿಸದ ಸ್ಥಿತಿ ತಲುಪಿರುವುದರಿಂದ, ಡಿಕೆ ಶಿವಕುಮಾರ್ ಅವರ ಈ ಅಸಂಬದ್ಧ ಹೇಳಿಕೆ ಒಟ್ಟು ವಿಧಾನಮಂಡಲದ ಮತ್ತು ಜನಪ್ರತಿನಿಧಿಗಳ ವ್ಯಕ್ತಿತ್ವವನ್ನು ಇನ್ನಷ್ಟು ಅಧಃಪತನಕ್ಕೆ ತೆಗೆದುಕೊಂಡು ಹೋಗುತ್ತದೆ. ಯಾರೇ ಸಾರ್ವಜನಿಕ ವೇದಿಕೆಗಳಿಂದ ಮಾತನಾಡುವ ಮುನ್ನ ಸ್ವಲ್ಪ ಯೋಚಿಸಿ ಮುಂದುವರೆದರೆ ಈ ರೀತಿಯ ಅವಘಡ ಸಂಭವಿಸುವುದಿಲ್ಲ. ಮುಖ್ಯಮಂತ್ರಿಗಳ ವೇಷಭೂಷಣ, ನಡೆ ನುಡಿ ಎಲ್ಲವನ್ನು ನಿರ್ದೇಶಿಸುತ್ತಿರುವ ವೃತ್ತಿ ತಂಡ ಈ ಬಗ್ಗೆಯೂ ಗಮನ ನೀಡಬೇಕಿದೆ ಎಂದವರು ಸಲಹೆ ನೀಡಿದ್ದಾರೆ.

‘ಶಾಸಕರ ಹೆಸರನ್ನು ದಯವಿಟ್ಟು ಬಹಿರಂಗಪಡಿಸಿ’

ಈಗ ಮುಖ್ಯಮಂತ್ರಿಗಳು ಈ ರೀತಿ ಹೇಳಬಾರದನ್ನು ಹೇಳಿಯಾಗಿದೆ. ಈಗ ಇದು ಸಾರ್ವಜನಿಕರೆಲ್ಲರ ಕೆಟ್ಟ ಕುತೂಹಲಕ್ಕೆ ಕಾರಣವಾಗಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಜನರ ಮುಂದೆ ಇಡಲು ಶ್ವೇತಪತ್ರ ಹೊರಡಿಸುತ್ತೀರೋ ಇಲ್ಲವೋ ನನಗೆ ಗೊತ್ತಾಗುತ್ತಿಲ್ಲ. ಆದರೆ ಎರಡೆರಡು ಮದುವೆ (ಅಥವಾ ಇನ್ನೂ ಹೆಚ್ಚು) ಆಗಿರುವ, ಎರಡೆರಡು ಮನೆ ಇಟ್ಟುಕೊಂಡಿರುವ ಶಾಸಕರ ಹೆಸರರೂಗಳನ್ನು ದಯವಿಟ್ಟು ಬಹಿರಂಗ ಮಾಡಿ ಎಂದು ಆಗ್ರಹಿಸುತ್ತಿದ್ದೇನೆ. ಇಲ್ಲದಿದ್ದರೆ ರಾಜ್ಯದ ಜನತೆ ಎಲ್ಲರನ್ನೂ ಅಸಹ್ಯ ದೃಷ್ಟಿಯಿಂದ ಕಾಣುವ ಅಥವಾ ಅಪಹಾಸ್ಯ ಮಾಡುವ ಸಾಧ್ಯತೆ ಇದೆ ಎಂದವರು ಅಭಿಪ್ರಾಯಪಟ್ಟಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 11:35 am, Fri, 25 September 26

ಸುನಿಲ್​ ಎಮ್​ ಹೆಚ್​
Loading...
Unable to load recommendations.
Follow Us