
ಬೆಂಗಳೂರು, ಸೆಪ್ಟೆಂಬರ್ 04: ಮುಂದಿನ ಒಂದು ವಾರ ದಕ್ಷಿಣ ಭಾರತದಲ್ಲಿ ಮಳೆ ಚಟುವಟಿಕೆ ಕ್ಷೀಣವಾಗಿರುವ ಸಾಧ್ಯತೆಯಿದ್ದು, ಬಹುತೇಕ ಪ್ರದೇಶಗಳಲ್ಲಿ ಅಲ್ಲಲ್ಲಿ ಅಥವಾ ಚದುರಿದ ಮಳೆಯಾಗುವ ನಿರೀಕ್ಷೆಯಿದೆ. ಇದೇ ವೇಳೆ, ಕಡಿಮೆ ಒತ್ತಡದ ಪ್ರದೇಶದ ಪರಿಣಾಮ ಮಧ್ಯ ಭಾರತದ ಕೆಲವೆಡೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.
ಸೆಪ್ಟೆಂಬರ್ 4ರಿಂದ 9ರವರೆಗೆ ಆಂಧ್ರಪ್ರದೇಶ ಮತ್ತು ಯಾನಂ, ಕೇರಳ ಮತ್ತು ಮಾಹೆ, ಉತ್ತರ ಒಳನಾಡು ಕರ್ನಾಟಕ, ರಾಯಲಸೀಮಾ, ದಕ್ಷಿಣ ಒಳನಾಡು ಕರ್ನಾಟಕ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ ಹಾಗೂ ತೆಲಂಗಾಣದಲ್ಲಿ ಅಲ್ಲಲ್ಲಿ ಅಥವಾ ಚದುರಿದ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಪ್ರದೇಶದ ಕರ್ನಾಟಕದ ಕರಾವಳಿ ಭಾಗದಲ್ಲಿ ಮಾತ್ರ ಸೆಪ್ಟೆಂಬರ್ 4ರಿಂದ 9ರವರೆಗೆ ವ್ಯಾಪಕ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಲಕ್ಷದ್ವೀಪದಲ್ಲಿಯೂ ಸೆಪ್ಟೆಂಬರ್ 8 ಮತ್ತು 9ರಂದು ಭಾರಿ ವರ್ಷಧಾರೆಯ ಸಾಧ್ಯತೆಯಿದೆ.
ಇದನ್ನೂ ಓದಿ: ಕರ್ನಾಟಕ ಹವಾಮಾನ ಮುನ್ಸೂಚನೆ: ಕರಾವಳಿ, ಉತ್ತರ ಒಳನಾಡಿನಲ್ಲಿ ಸಾಧಾರಣ ಮಳೆ ಸಾಧ್ಯತೆ
ದಕ್ಷಿಣ ಭಾರತದಲ್ಲಿ ಮಳೆ ಕ್ಷೀಣಿಸುವ ಮುನ್ಸೂಚನೆಯ ನಡುವೆಯೇ, ಮಧ್ಯ, ಉತ್ತರ ಮತ್ತು ಪೂರ್ವ ಭಾರತದ ಕೆಲವು ಭಾಗಗಳಲ್ಲಿ ಮುಂಗಾರು ಚುರುಕಾಗಿರಲಿದೆ. ಈಶಾನ್ಯ ಮಧ್ಯಪ್ರದೇಶ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಸುಸ್ಪಷ್ಟ ಕಡಿಮೆ ಒತ್ತಡದ ಪ್ರದೇಶದ ಪರಿಣಾಮ ಸೆಪ್ಟೆಂಬರ್ 4 ಮತ್ತು 5ರಂದು ಭಾರಿ ಮಳೆಯಾಗುವ ಸಾಧ್ಯತೆಯಿದೆ.
ಈಶಾನ್ಯ ಭಾರತದಲ್ಲೂ ಮಳೆ
ಅರುಣಾಚಲ ಪ್ರದೇಶದಲ್ಲಿ ಸೆಪ್ಟೆಂಬರ್ 5ರಿಂದ 8ರವರೆಗೆ ವ್ಯಾಪಕ ಮಳೆಯಾಗುವ ನಿರೀಕ್ಷೆಯಿದೆ. ಅಸ್ಸಾಂ ಮತ್ತು ಮೇಘಾಲಯದಲ್ಲಿ ಸೆಪ್ಟೆಂಬರ್ 4ರಂದು ಹಾಗೂ ಸೆಪ್ಟೆಂಬರ್ 6ರಿಂದ 8ರವರೆಗೆ ವ್ಯಾಪಕ ಮಳೆಯಾಗಬಹುದು. ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾದಲ್ಲಿ ಸೆಪ್ಟೆಂಬರ್ 9ರವರೆಗೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:03 pm, Fri, 4 September 26