ಭಿಕ್ಷುಕರಿಗೆ ಹಣ ಕೊಡಲೇಬೇಡಿ: ಬೆಂಗಳೂರು ಹುಡುಗರು ತಂಡದ ಈ ಅಭಿಯಾನದ ಹಿನ್ನೆಲೆ, ಉದ್ದೇಶವೇನು? ಇಲ್ಲಿದೆ ವಿವರ

ganapathi bhat

|

Updated on:Oct 12, 2021 | 5:34 PM

Bengaluru News: ಭಿಕ್ಷಾಟನೆ, ಅದರ ಮಾಫಿಯಾ ಹಾಗೂ ದುಷ್ಪರಿಣಾಮಗಳನ್ನು ಭವಿಷ್ಯದ ಹಿತದೃಷ್ಟಿಯಿಂದ ಯೋಚಿಸಬೇಕು. ತಕ್ಷಣಕ್ಕೆ ಭಾವನಾತ್ಮಕವಾಗಿ ಕುಗ್ಗಬಾರದು ಎಂಬುದು ವಿನೋದ್ ಅಭಿಪ್ರಾಯ.

ಭಿಕ್ಷುಕರಿಗೆ ಹಣ ಕೊಡಲೇಬೇಡಿ: ಬೆಂಗಳೂರು ಹುಡುಗರು ತಂಡದ ಈ ಅಭಿಯಾನದ ಹಿನ್ನೆಲೆ, ಉದ್ದೇಶವೇನು? ಇಲ್ಲಿದೆ ವಿವರ
ಭಿಕ್ಷಾಟನೆ ಮುಕ್ತ ಭಾರತ

ಬೆಂಗಳೂರು: ಬೃಹತ್ ನಗರ ಬೆಂಗಳೂರಿನ ಸರ್ಕಲ್​ಗಳಲ್ಲಿ ಎಷ್ಟೋ ಬಾರಿ ಭಿಕ್ಷುಕರನ್ನು ನೀವು ಕಂಡಿರಬಹುದು. ಮಹಿಳೆಯರು, ಮಕ್ಕಳು, ಇನ್ನೂ ಮಾತು ಕಲಿಯದ ಪುಟ್ಟ ಮಕ್ಕಳು, ಯುವಕ, ಯುವತಿಯರು, ಮುದುಕ, ಮುದುಕಿಯರು ಎನ್ನದೆ ಎಲ್ಲಾ ವಯೋಮಾನದ ಜನರೂ ಭಿಕ್ಷಾಟನೆಯಲ್ಲಿ ತೊಡಗಿರುತ್ತಾರೆ. ಅವರಲ್ಲೇ ಸಣ್ಣ ಹುಡುಗರು ಉದ್ದದ ಪೆನ್ನು ಅಥವಾ ಪುಟ್ಟ ಹುಡುಗಿಯರು ಗುಲಾಬಿ ಹೂವು ಮಾರುತ್ತಿರುತ್ತಾರೆ. ಎಲ್ಲಾ ಸರ್ಕಲ್​ಗಳಲ್ಲೂ ಅವರವರೇ ದಿನವೂ ನಿಂತುಕೊಳ್ಳುವುದು. ಭಿಕ್ಷಾಟನೆ ಮಾಡುವುದು. ಹಾಗೂ ಪ್ರತಿ ಸರ್ಕಲ್​ಗಳಲ್ಲೂ ಭಿಕ್ಷುಕರು ಇದನ್ನೇ ಮಾರುವುದು ಹೇಗೆ ಸಾಧ್ಯ? ಅವರ ನಡುವೆ ಯಾವ ಇಂಟರ್ ಕನೆಕ್ಷನ್ ಇದೆ? ಹುಡುಗಿಗೆ ಗುಲಾಬಿ, ಹುಡುಗನಿಗೆ ಪೆನ್ನು ಕೊಟ್ಟು, ಹೆಂಗಸರು ಮಕ್ಕಳನ್ನು ತೆಕ್ಕೆಯಲ್ಲಿ ಇಟ್ಟುಕೊಂಡು ಜನಸಾಮಾನ್ಯರ ಮನಕಲಕುವಂತೆ ಮಾಡುವುದು ಹೇಗೆ? ಇದರ ಹಿಂದೆ ಎಷ್ಟೆಲ್ಲಾ ಸಮಸ್ಯೆಗಳು ಇವೆ ಗೊತ್ತೇ ಎಂದು ಮಾತಿಗೆ ಇಳಿಯುತ್ತಾರೆ ವಿನೋದ್ ಕರ್ತವ್ಯ. ವಿನೋದ್ ಪ್ರತಿಷ್ಠಿತ ಡಿಆರ್​ಡಿಒ ಸಂಸ್ಥೆಯಲ್ಲಿ ಉದ್ಯೋಗಿ. ಬಿಕಾಂ ಬಳಿಕ ಬಿಇ ಪದವೀಧರ. ಅವರು ಈ ಮಹಾನಗರದ ಭಿಕ್ಷಾಟನೆಯ ವಿವರ ನೀಡುವುದಕ್ಕೆ ಬಲವಾದ ಕಾರಣವಿದೆ.

ಒಂದು ದಿನ ಕೆಲಸದ ಅವಧಿ ಮುಗಿಸಿ ಅವರು ಮನೆಗೆ ಮರಳುತ್ತಿದ್ದಾಗ, ಬೆಂಗಳೂರಿನ ಸರ್ಕಲ್ ಒಂದರಲ್ಲಿ ಒಬ್ಬಾಕೆ ಹೆಂಗಸು ತೋಳಲ್ಲಿ ಮಗುವನ್ನು ಕೂರಿಸಿಕೊಂಡು ಭಿಕ್ಷೆ ಬೇಡುತ್ತಿದ್ದಳು. ಆ ಮಗು ಜೋರಾಗಿ ಅಳುತ್ತಿತ್ತು. ಮಗುವಿನ ಅಳುವಿನಿಂದ ಕಿರಿಕಿರಿ ಅನುಭವಿಸಿದ ಆಕೆ ಬದಿಗೆ ಹೋಗಿ ಒಂದು ಬಟ್ಟೆಯ ತುಂಡನ್ನು ಮಗುವಿನ ಮೂಗಿಗೆ ಇಟ್ಟಳು. ಅಷ್ಟರಲ್ಲೇ ಆ ಮಗುವಿಗೆ ನಿದ್ದೆ ಹತ್ತಿತು. ಮತ್ತೆ ಆ ಹೆಂಗಸು ಭಿಕ್ಷೆ ಬೇಡುವುದು ಮುಂದುವರಿಸಿದಳು. ಇದನ್ನು ನೋಡಿ ನನಗೆ ನನ್ನ ಮಗನ ನೆನಪಾಯಿತು. ಭಿಕ್ಷೆ ಬೇಡುತ್ತಿದ್ದ ಆ ಹೆಂಗಸಿನ ಬಳಿ ಮಗುವಿಗೆ ಏನು ಮಾಡಿದೆ ಎಂದು ಕೇಳಲು ಹೋದರೆ ಆಕೆ ಬೈಯ್ಯುತ್ತಾ ಜೋರಾಗಿ ಮಾತನಾಡಿ ನನ್ನನ್ನು ಸುಮ್ಮನಾಗಿಸಿದಳು. ಈ ಘಟನೆಯ ವಿವರವನ್ನು ವಿನೋದ್ ನೆನಪಿಸಿಕೊಳ್ಳುತ್ತಾರೆ.

ಭಿಕ್ಷೆ ಬೇಡುವುದು, ಬೇಡಿಸುವುದು ಒಂದು ಮಾಫಿಯಾದಂತೆ ನಡೆಯುತ್ತಿದೆ. ಬೃಹತ್ ಮಾನವ ಕಳ್ಳಸಾಗಾಣಿಕೆ, ಹಳ್ಳಿಗಳಲ್ಲಿ, ಬಡ ಮತ್ತು ಅನಕ್ಷರಸ್ಥ ಜನರ ನಡುವೆ ನಡೆಯುತ್ತದೆ. ಹೆಣ್ಣು ಭ್ರೂಣ ಹತ್ಯೆ. ಕೆಲಸ ಮಾಡಲು ಸಾಧ್ಯ ಇರುವಂಥವರೂ ಭಿಕ್ಷೆಗೆ ಇಳಿಯುವುದು. ಎಳೆಯ ಮಕ್ಕಳ ಬದುಕನ್ನು ಕೂಡ ಕಸಿದುಕೊಳ್ಳುವುದು ಇದೆಲ್ಲಾ ಅಪರಾಧ. ಈ ಘಟನೆಗಳಿಗೆ ಹಾಗೂ ಭಿಕ್ಷಾಟನೆಗೆ ಸಂಬಂಧ ಇದೆ ಎಂದು ಅಧಿಕೃತ ವರದಿಗಳ, ಅಪರಾಧ ಅಂಕಿ ಅಂಶಗಳ ತಮ್ಮ ವಿಶ್ಲೇಷಣೆಯ ರೂಪವನ್ನು ವಿನೋದ್ ಹೇಳಿಕೊಳ್ಳುತ್ತಾರೆ. The Karnataka Prohibition of Beggary Act 1975 ಕೂಡ ಉಲ್ಲೇಖಿಸುತ್ತಾರೆ.

ಭಿಕ್ಷಾಟನೆ ಮುಕ್ತ ಭಾರತ ಒಂದೇ ನಗರದಲ್ಲಿ ಸಾವಿರಾರು ಭಿಕ್ಷುಕರು ಇರುವುದರಿಂದ ಈ ಸಮಸ್ಯೆ ನಿರ್ವಹಣೆ ಮಾಡುವುದು ನಿಜವಾಗಿಯೂ ಕಷ್ಟ. ಸರ್ಕಾರ ಕಲ್ಪಿಸುವ ಪುನರ್ವಸತಿ ಅಥವಾ ಕೌಶಲ್ಯ ಅಭಿವೃದ್ಧಿ ವ್ಯವಸ್ಥೆಯ ಪ್ರಮಾಣವೂ ಸಾಕಾಗುತ್ತಿಲ್ಲ. ಇದರಿಂದ ದೊಡ್ಡ ಪ್ರಮಾಣದ ಜನರು ಹಾಳಾಗುತ್ತಿದ್ದಾರೆ. ಸಮಾಜವೂ ಅವರೆಲ್ಲರಿಗೆ ಮತ್ತೆ ಮತ್ತೆ ಹಣ ನೀಡಿ ಅವರನ್ನು ತಪ್ಪು ದಾರಿಗೆ ತಳ್ಳುತ್ತಿದೆ. ಎಲ್ಲರೂ ಕೈ ಜೋಡಿಸಿ, ಭಿಕ್ಷೆ ಹಾಕೋದನ್ನ ನಿಲ್ಲಿಸಿ . ಭಿಕ್ಷುಕರಿಗೆ ನಗದು ರೂಪದಲ್ಲಿ ಭಿಕ್ಷೆ ಹಾಕುವುದನ್ನು ನಿಲ್ಲಿಸಿ. ಭಿಕ್ಷುಕರಿಗೆ (ಆಹಾರ, ನೀರು) ನೀಡಿ. ಆದರೆ ಒಂದು ರೂಪಾಯಿಯನ್ನೂ ನಗದು ರೂಪದಲ್ಲಿ ನೀಡಬೇಡಿ ಎಂಬುದು ವಿನೋದ್ ಅವರ ಕಳಕಳಿ ಮತ್ತು ಚಳುವಳಿ.

ಇದರ ಪರಿಣಾಮವಾಗಿ ಭಿಕ್ಷುಕರ ಗ್ಯಾಂಗ್‌ಗಳು ಒಡೆಯುತ್ತವೆ ಮತ್ತು ಮಕ್ಕಳ, ಹೆಂಗಸರ ಹಾಗೂ ವೃದ್ಧರ ಅಪಹರಣವು ಸ್ವಯಂಚಾಲಿತವಾಗಿ ನಿಲ್ಲುತ್ತದೆ. ಇಂತಹ ಗ್ಯಾಂಗ್‌ಗಳು ಅಪರಾಧ ಜಗತ್ತಿನಲ್ಲಿ ಕೊನೆಗೊಳ್ಳುತ್ತವೆ ಎಂಬುದು ವಿನೋದ್ ಯೋಚನೆ. ಈ ಯೋಚನೆಯನ್ನು ಅವರು ಚಳುವಳಿ ರೂಪಕ್ಕಿಳಿಸಿದ್ದಾರೆ. ಅವರು ಮತ್ತು ಅವರ ತಂಡದವರು ಭಿಕ್ಷಾಟನೆ ಮುಕ್ತ ಭಾರತ ಚಳುವಳಿ ನಡೆಸುತ್ತಿದ್ದಾರೆ. ಪ್ರತೀ ವಾರಾಂತ್ಯದಲ್ಲಿ ಬೆಂಗಳೂರಿನ ಯಾವುದೇ ಸರ್ಕಲ್​ನಲ್ಲಿ ಕೆಲವಷ್ಟು ಪ್ಲಕಾರ್ಡ್​ಗಳನ್ನು ಹಿಡಿದು ನಿಲ್ಲುವುದು. ಆ ಮೂಲಕ, ಜನರಿಗೆ ಇದರ ಅಡ್ಡಪರಿಣಾಮಗಳ ಮನದಟ್ಟು ಮಾಡುವುದು ವಿನೋದ್ ಉದ್ದೇಶ.

ಈ ಯೋಜನೆ ಈಗ 9 ವಾರಗಳನ್ನು ದಾಟಿ ನಡೆಯುತ್ತಿದೆ. ಹೀಗೆ ಸಾರ್ವಜನಿಕೆ ಸ್ಥಳಗಳಲ್ಲಿ ಚಳುವಳಿ ನಡೆಸುವುದಕ್ಕೆ ವಿನೋದ್ ಹಾಗೂ ಬೆಂಗಳೂರು ಹುಡುಗರು ತಂಡ, ಬೆಂಗಳೂರು ಸಂಚಾರ ಪೊಲೀಸ್ ಜಂಟಿ ಆಯುಕ್ತ ರವಿಕಾಂತೇಗೌಡ ಮತ್ತು ಮುಖ್ಯಮಂತ್ರಿ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ಅವರ ಅಧಿಕೃತ ಒಪ್ಪಿಗೆಯನ್ನು ಪಡೆದಿದ್ದಾರೆ. ಪೊಲೀಸ್ ಮಹಾನಿರ್ದೇಶಕ ಕಮಲ್ ಪಂತ್ ಮತ್ತಿತರರು ಕೂಡ ಈ ವಿಚಾರಕ್ಕೆ ಪ್ರೋತ್ಸಾಹ ನೀಡುವುದಾಗಿ ಹೇಳಿದ್ದಾರೆ.

Beggars Mukt Bharat

ರಸ್ತೆಗಳಲ್ಲಿ ಬೆಂಗಳೂರು ಹುಡುಗರು ತಂಡದಿಂದ ಅಭಿಯಾನ

ಮೊಳೆ ಮುಕ್ತ ಮರ ಹೀಗೆ ಚಳುವಳಿ ಆರಂಭಿಸಿರುವ ವಿನೋದ್ ಇದೇ ಮೊದಲ ಬಾರಿಗೆ ಸಾಮಾಜಿಕ ಕಾರ್ಯ ಕೈಗೆತ್ತಿಕೊಂಡವರಲ್ಲ. ಎರಡು ವರ್ಷಗಳ ಹಿಂದೆ ಒಂದು ದಿನ ವಿನೋದ್ ಫೋನ್​ನಲ್ಲಿ ಮಾತನಾಡುತ್ತಿರುವಾಗ, ಮರದಲ್ಲಿದ್ದ ಮೊಳೆಯೊಂದು ತಲೆಗೆ ಚುಚ್ಚಿತಂತೆ. ಆಗ ಅವರು ಅನುಭವಿಸಿದ ನೋವು ನೆನೆದು ಹೀಗೆ ಯೋಚಿಸಿದರಂತೆ. ಮರಕ್ಕೆ ಜೀವ ಇದೆ ಎಂದು ಹೇಳುವ ನಾವು ಅದನ್ನು ಏಕೆ ಅರ್ಥ ಮಾಡಿಕೊಳ್ಳುವುದಿಲ್ಲ? ನಮಗೆ ಒಂದು ಬಾರಿ ಚುಚ್ಚಿದ ಮೊಳೆ ಇಷ್ಟು ನೋವು ಕೊಟ್ಟರೆ, ಮರಕ್ಕೆ ಬಡಿದಿರುವ ಹತ್ತಾರು ಮೊಳೆಗಳಿಂದ ನೋವಾಗುವುದಿಲ್ಲವೇ?

ಹಾಗೆ ಅನಿಸಿದ ಮುಂದಿನ ದಿನದಿಂದಲೇ ಅವರು ತಾವು ವಾಸಿಸುವ ಸಂಪಂಗಿರಾಮನಗರದ ಬಳಿಯ ಮರಗಳಿಗೆ ಬಡಿದಿರುವ ಮೊಳೆಗಳನ್ನು ಕೀಳಲು ತೊಡಗಿದರು. ಮೊದ ಮೊದಲು ನಗುತ್ತಿದ್ದ ಜನರು ಬಳಿಕ ಅವರ ಈ ಕಾರ್ಯಕ್ಕೆ ಕೈಜೋಡಿಸಲು ಶುರು ಮಾಡಿದರು. ಹೀಗೆ ಆ ಅಭಿಯಾನವು ದೊಡ್ಡದಾಗಿ ಬೆಳೆದು ಒಂದು ತಂಡವೇ ರಚನೆಯಾಯ್ತು. ಅವರು ತಮ್ಮ ವಾರ್ಡ್​ಗಳ ಮರಗಳಿಂದ ಮೊಳೆ, ಪಿನ್​ಗಳನ್ನು ತೆಗೆದು ಬಳಿಕ ಬೆಂಗಳೂರಿನ ಇತರ ವಾರ್ಡ್​ಗಳಲ್ಲೂ ಈ ಕಾರ್ಯ ಸಾಧಿಸಿದ್ದಾರೆ. ಸುಮಾರು 25 ವಾರ್ಡ್​​ಗಳ ತಮ್ಮ ಸ್ನೇಹಿತರ ಗುಂಪು ಕಟ್ಟಿಕೊಂಡು 28 ವಾರ್ಡ್​ಗಳಿಂದ ಅಂದಾಜು 12,000 ಮರಗಳ ಮೇಲಿರುವ ಮೊಳೆಗಳನ್ನು ತೆಗದಿದ್ದಾರೆ. ಇದನ್ನೂ ಕೂಡ ಕಾನೂನಾತ್ಮಕವಾಗಿ ಮಾಡಿದ್ದೇವೆ ಎನ್ನುತ್ತಾರೆ ವಿನೋದ್.

ಟ್ರೀ ಪ್ರೊಟೆಕ್ಷನ್ ಆಕ್ಟ್ (Tree Protection Act) ಅನ್ವಯ ಮರಗಳಿಗೆ ಹೀಗೆ ಹಾನಿ ಮಾಡುವುದು ತಪ್ಪು. ಈ ಹಿನ್ನೆಲೆಯಲ್ಲಿ ಪೊಲೀಸರ, ಬಿಬಿಎಂಪಿ ಅಧಿಕಾರಿಗಳ ಸಲಹೆಗಳನ್ನು ಕೂಡ ವಿನೋದ್ ಮತ್ತು ತಂಡದವರು ಪಡೆದುಕೊಂಡಿದ್ದಾರೆ. ಮುಂದೆ ಮರದ ಮೇಲೆ ಮೊಳೆ ಹೊಡೆದ ಪತ್ರ ನೋಡಿ ಸಂಬಂಧಪಟ್ಟವರ ಮೇಲೆ ದೂರು ಕೂಡ ದಾಖಲು ಮಾಡಲಾಗಿದೆ. ಅದರಂತೆ ಒಟ್ಟು 12 ಎಫ್​ಐಆರ್ ಕೂಡ ಸಂಬಂಧಿಸಿದವರ ವಿರುದ್ಧ ದಾಖಲು ಮಾಡಿದ್ದಾರೆ ವಿನೋದ್.

ಸಾಮಾಜಿಕ ಜಾಲತಾಣದ ಮೂಲಕವೂ ಪ್ರಚಾರ ಪಡೆದ ಈ ಅಭಿಯಾನಕ್ಕೆ ನಟ ಕಿಶೋರ್, ಆಗಿನ ಐಪಿಎಸ್ ಅಧಿಕಾರಿ ಅಣ್ಣಾಮಲೈ ಮತ್ತು ಸೀರಿಯಲ್ ನಟರು ಈ ಕೈಜೋಡಿಸಿದ್ದರು. ಮೊಳೆ ಮುಕ್ತ ಮರ ಅಭಿಯಾನ ವಿನೋದ್ ಅವರ ಮೊದಲ ಹೋರಾಟ. ಅಲ್ಲಿ ಜೊತೆಯಾದ ತಂಡವನ್ನು (ಬೆಂಗಳೂರು ಹುಡುಗರು) ಸೇರಿಸಿ ಈಗ ಭಿಕ್ಷಾಟನೆ ಮುಕ್ತ ಭಾರತ ಚಳುವಳಿಯನ್ನು ವಿನೋದ್ ಮಾಡುತ್ತಿದ್ದಾರೆ. ಈ ಎಲ್ಲಾ ಕಾರ್ಯಕ್ಕೆ ರೈಲ್ವೇ ವಿಭಾಗದ ಎಡಿಜಿಪಿ ಭಾಸ್ಕರ್ ರಾವ್ ತಂಡದ ಮಾರ್ಗದರ್ಶಕರಾಗಿ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ.

Bengaluru Hudugaru

ಮೊಳೆ ಮುಕ್ತ ಮರ ಅಭಿಯಾನ

ಕೊರೊನಾ ಸಂದರ್ಭದಲ್ಲಿ ಆಹಾರ ಸರಬರಾಜು ಇದೇ ತಂಡದವರು ಕೊರೊನಾ ಅವಧಿಯಲ್ಲಿ ಕೂಡ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕ್ವಾರಂಟೈನ್ ಕಾರಣದಿಂದ ಮನೆಗೆ ಆಹಾರ ಒದಗಿಸಬೇಕಾದ ನಿರೀಕ್ಷೆ ಇದ್ದವರಿಗೆ ಊಟ, ತಿಂಡಿ ನೀಡಿದ್ದಾರೆ. ಕೊರೊನಾ ಎರಡನೇ ಅಲೆಯ ಸಂದರ್ಭ ಈ ಕೆಲಸವನ್ನು ಕೂಡ ಮಾಡಿದ್ದಾರೆ. ಬೆಂಗಳೂರಿನ ಸಣ್ಣ ಅಂಗಡಿಗಳಲ್ಲಿ 18 ವರ್ಷ ದಾಟದ ಮಕ್ಕಳಿಗೆ ತಂಬಾಕು, ಬೀಡಿ, ಸಿಗರೇಟು ಕೊಡುತ್ತಾರೆ. ಅದು ನಿಲ್ಲಬೇಕು. ಯುವಜನರು ಚಟಕ್ಕೆ ಬಲಿಯಾಗಿ ಹಾಳಾಗಬಾರದು ಎಂಬುದು ಕೂಡ ವಿನೋದ್ ಮತ್ತು ತಂಡದ ಕಾಳಜಿ.

ಸದ್ಯ ಭಿಕ್ಷಾಟನೆ ಮುಕ್ತ ಭಾರತ ಚಳುವಳಿಯ ಮೂಲಕ ಸಮಾಜಕ್ಕೆ ಒಳ್ಳೆಯ ಕೆಲಸ ಮಾಡಬೇಕು. ನಮ್ಮಿಂದಾದಷ್ಟು ಕೆಲಸ ಮಾಡಬೇಕು ಎನ್ನುವುದು ವಿನೋದ್ ಮಾತು. ಈ ಅಭಿಯಾನಗಳನ್ನು ಕಾನೂನಾತ್ಮಕವಾಗಿಯೇ ಮಾಡಲಾಗಿದೆ. ಭಿಕ್ಷಾಟನೆ, ಅದರ ಮಾಫಿಯಾ ಹಾಗೂ ದುಷ್ಪರಿಣಾಮಗಳನ್ನು ಭವಿಷ್ಯದ ಹಿತದೃಷ್ಟಿಯಿಂದ ಯೋಚಿಸಬೇಕು. ತಕ್ಷಣಕ್ಕೆ ಭಾವನಾತ್ಮಕವಾಗಿ ಕುಗ್ಗಬಾರದು ಎಂಬುದು ವಿನೋದ್ ಅಭಿಪ್ರಾಯ. ಅದಕ್ಕಾಗಿ ಇನ್ನುಮುಂದೆ ಮಹಾನಗರಗಳಲ್ಲಿ ಭಿಕ್ಷೆ ಬೇಡುವವರಿಗೆ ಹಣ ಕೊಡಲೇಬೇಡಿ. ಆಹಾರ, ನೀರು ಮಾತ್ರ ನೀಡಿ ಎಂಬುದು ಅಭಿಯಾನ.

Bengaluru Hudugaru

ಕೊರೊನಾ ಎರಡನೇ ಅಲೆ ಸಂದರ್ಭ ಆಹಾರ ಸರಬರಾಜು ಕೆಲಸಕ್ಕೆ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಪ್ರೋತ್ಸಾಹ

Bengaluru Hudugaru

ಬೆಂಗಳೂರು ಹುಡುಗರು ತಂಡ

ವಿನೋದ್ ಕರ್ತವ್ಯ ಅವರ ಸಂಪರ್ಕ ಸಂಖ್ಯೆ: 96117 33032

ವರದಿ: ಗಣಪತಿ ದಿವಾಣ

ಇದನ್ನೂ ಓದಿ: ಭಿಕ್ಷಾಟನೆ ಮಾಡುತ್ತಿದ್ದ ಬಾಲಕಿ ಎಸ್ಎಸ್ಎಲ್​ಸಿ ಪರೀಕ್ಷೆಯಲ್ಲಿ ಪಾಸ್; ಅಲೆಮಾರಿ ಕುವರಿಯ ಭವಿಷ್ಯಕ್ಕೆ ಬೆಳಕಾದ ಟೆಂಟ್ ಶಾಲೆ

ಇದನ್ನೂ ಓದಿ: ಗ್ರಾಹಕರ ಸೋಗಿನಲ್ಲಿ ಬಂದು ಕಳ್ಳತನ ಮಾಡುವ ಭಿಕ್ಷುಕರ ಗ್ಯಾಂಗ್, ಭಿಕ್ಷಕರನ್ನು ಪುನರ್ವಸತಿ ಕೇಂದ್ರಕ್ಕೆ ಶಿಫ್ಟ್ ಮಾಡಲು ಮುಂದಾದ ಕಮಲ್ ಪಂತ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada