
ಬೆಂಗಳೂರು, ಅಕ್ಟೋಬರ್ 30: ಕರ್ನಾಟಕದಲ್ಲಿ ನಡೆದಿರುವ ಎಸ್ಐಆರ್ ಪ್ರಕ್ರಿಯೆ ಕುರಿತು ತಾವು ನೀಡಿದ್ದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸಚಿವ ಜಾರಕಿಹೊಳಿ ತಿಳಿಸಿದ್ದಾರೆ. ಈ ಬಗ್ಗೆ ಎಕ್ಸ್ ಪೋಸ್ಟ್ ಮೂಲಕ ಸ್ಪಷ್ಟನೆ ನೀಡಿರುವ ಅವರು, ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಫಾರಂ–7 ಮೂಲಕ ಕಾಂಗ್ರೆಸ್ ಬೆಂಬಲಿಗ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸುವ ಬಿಜೆಪಿಯ ಷಡ್ಯಂತ್ರವನ್ನು ನಮ್ಮ ರಾಷ್ಟ್ರ ನಾಯಕರಾದ ರಾಹುಲ್ ಗಾಂಧಿ ಅವರ ಹೋರಾಟ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ವಿಫಲಗೊಳಿಸಲಾಗಿದೆ ಎಂಬುದು ನನ್ನ ಹೇಳಿಕೆಯ ಉದ್ದೇಶವಾಗಿತ್ತು. ಆದರೆ, SIR ಪ್ರಕ್ರಿಯೆ ಸರಿಯಾಗಿದೆ ಎಂಬ ಅರ್ಥದಲ್ಲಿ ನಾನು ಹೇಳಿಕೆ ನೀಡಿಲ್ಲ ಎಂದವರು ಹೇಳಿದ್ದಾರೆ.
ಕರ್ನಾಟಕದಲ್ಲಿ ಫಾರಂ–7 ಮೂಲಕ ಅರ್ಹ ಮತದಾರರ ಹೆಸರುಗಳನ್ನು ಅಳಿಸುವ ಪ್ರಯತ್ನವನ್ನು ನಾವು ವಿಫಲಗೊಳಿಸಿದ್ದು, ಈ ಹೋರಾಟಕ್ಕೆ ನಮ್ಮ ಬೆಳಗಾವಿ ಜಿಲ್ಲೆಯಿಂದಲೇ ಚಾಲನೆ ನೀಡಿ ಯಶಸ್ವಿಯಾಗಿ ಎದುರಿಸಿದ್ದೇವೆ. ಅರ್ಹ ಮತದಾರರ ಹಕ್ಕುಗಳನ್ನು ಕಸಿದುಕೊಳ್ಳುವ ಯಾವುದೇ ಪ್ರಯತ್ನದ ವಿರುದ್ಧ ನನ್ನ ನಿಲುವು ಮೊದಲಿನಿಂದಲೂ ದೃಢವಾಗಿದೆ. ಮತದಾರರ ಪಟ್ಟಿಯಿಂದ ಅರ್ಹ ಮತದಾರರ ಹೆಸರುಗಳನ್ನು ಅಕ್ರಮವಾಗಿ ತೆಗೆದುಹಾಕುವ ಪ್ರಯತ್ನಗಳನ್ನು ನಾನು ಬಲವಾಗಿ ವಿರೋಧಿಸುತ್ತೇನೆ. ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಮತದಾನದ ಹಕ್ಕಿನ ರಕ್ಷಣೆಗಾಗಿ ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರೊಂದಿಗೆ ದೃಢವಾಗಿ ನಿಲ್ಲುತ್ತೇನೆ. ನನ್ನ ಹೇಳಿಕೆಯ ಉದ್ದೇಶವನ್ನು ತಪ್ಪಾಗಿ ಅರ್ಥೈಸದೆ, ಅದರ ನೈಜ ಆಶಯವನ್ನು ಗ್ರಹಿಸಬೇಕೆಂದು ಸ್ಪಷ್ಟಪಡಿಸುತ್ತೇನೆ ಎಂದವರು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ SIR ಸಮರ್ಪಕವಾಗಿ ನಡೆದಿದೆ: ಆಯೋಗಕ್ಕೆ ಜಾರಕಿಹೊಳಿ ಶಹಬ್ಬಾಸ್ ಗಿರಿ
ಬೇರೆ ರಾಜ್ಯಗಳಲ್ಲಿ ಅಂದರೆ ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಬಿಹಾರ SIR ಪ್ರಕ್ರಿಯೆಗೆ ಆಕ್ಷೇಪವಿದೆ. ಮತಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ವಿರುದ್ಧ ಪ್ರತಿಭಟನೆ ನಡೆಸಿದ್ದೆವು. ಅದೇ ರೀತಿ ಎಸ್ಐಆರ್ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಿದ್ದೆವು. ಇದರ ಪರಿಣಾಮವಾಗಿ ರಾಜ್ಯದಲ್ಲಿ SIR ಪ್ರಕ್ರಿಯೆ ಸಮರ್ಪಕವಾಗಿದೆ. ಬೇರೆ ರಾಜ್ಯಗಳಲ್ಲಿ ಇದೇ ರೀತಿ ಪ್ರಕ್ರಿಯೆ ನಡೆಯಬೇಕೆಂಬುದು ನಮ್ಮ ಆಶಯ ಎಂದು ನಿನ್ನೆಯಷ್ಟೇ ಸತೀಶ್ ಜಾರಕಿಹೊಳಿ ಹೇಳಿದ್ದರು. ಎಸ್ಐಆರ್ ಕುರಿತು ಕಾಂಗ್ರೆಸ್ನಿಂದ ರಾಷ್ಟ್ರವ್ಯಾಪಿ ಹೋರಾಟದ ನಡುವೆ ಸಚಿವರ ಈ ಹೇಳಿಕೆಯನ್ನು ಬಿಜೆಪಿಗರು ಅಸ್ತ್ರ ಮಾಡಿಕೊಂಡಿದ್ದರು. ಆ ಬೆನ್ನಲ್ಲೇ ಸತೀಶ್ ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಇನ್ನು ತಮ್ಮ ಸ್ಪಷ್ಟನೆ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು, ತನ್ನ ಜಿಲ್ಲೆಗೆ ಸೀಮಿತವಾಗಿ ನಾನು ಹೇಳಿದ್ದೆ. ಎಸ್ಐಆರ್ ವಿರುದ್ಧ ನಮ್ಮ ನಾಯಕರು ಹೋರಾಟ ಮಾಡ್ತಿದ್ದಾರೆ. ಕೆಲವು ಕಡೆ ಎಸ್ಐಆರ್ ಕರೆಕ್ಟ್ ಆಗಿ ಆಗಿರಬಹುದು ಎಂದಿದ್ದೆ. ಆದರೆ ಬೆಂಗಳೂರಲ್ಲಿ ಕೆಲವರು ಮೃತಪಟ್ಟಿದ್ದಾರೆಂದು ತೋರಿಸಿದ್ದಾರೆ ಎಂದವರು ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:38 am, Fri, 30 October 26