
ಬೆಂಗಳೂರು, ಜುಲೈ 21: ಬೆಂಗಳೂರಿನ ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ (Green Line) ಇಂದು ಬೆಳಿಗ್ಗೆ ವಿದ್ಯುತ್ ಪೂರೈಕೆಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮೆಟ್ರೋ ರೈಲು ಸಂಚಾರದಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ. ಬೆಳಿಗ್ಗೆ 8 ಗಂಟೆಯ ಸುಮಾರಿಗೆ ಎದುರಾದ ಈ ವಿದ್ಯುತ್ ಸಮಸ್ಯೆಯಿಂದಾಗಿ ಪ್ರಯಾಣಿಕರು ತೀವ್ರ ಪರದಾಟ ನಡೆಸುವಂತಾಗಿತ್ತು. ಇದೀಗ 8.45ಕ್ಕೆ ಸಂಚಾರ ಆರಂಭವಾಗಿದೆ.
ವಿದ್ಯುತ್ ಸಮಸ್ಯೆಯ ಕಾರಣದಿಂದಾಗಿ ಹಸಿರು ಮಾರ್ಗದ ಸಿಲ್ಕ್ ಇನ್‌ಸ್ಟಿಟ್ಯೂಟ್‌ನಿಂದ ಯಶವಂತಪುರ ನಿಲ್ದಾಣಗಳ ನಡುವೆ ಮಾತ್ರ ಮೆಟ್ರೋ ರೈಲುಗಳು ಶಾರ್ಟ್-ಲೂಪ್ (Short-loop) ಸೇವೆಯಲ್ಲಿ ಸಂಚರಿಸುತ್ತಿವೆ. ಆದರೆ, ಯಶವಂತಪುರ ಮತ್ತು ಮಾದಾವರ (ನಾಗಸಂದ್ರ ವಿಸ್ತರಿತ ಮಾರ್ಗ) ನಡುವಿನ ಒಟ್ಟು 10 ಮೆಟ್ರೋ ನಿಲ್ದಾಣಗಳ ನಡುವೆ ರೈಲು ಸಂಚಾರವನ್ನು ಸಂಪೂರ್ಣವಾಗಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
ಸಂಚಾರ ವ್ಯತ್ಯಯದ ಕುರಿತು ಪ್ರತಿಕ್ರಿಯಿಸಿರುವ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL), ತಾಂತ್ರಿಕ ದೋಷವನ್ನು ಸರಿಪಡಿಸಿ ಸಾಮಾನ್ಯ ಮೆಟ್ರೋ ಸೇವೆಯನ್ನು ಶೀಘ್ರದಲ್ಲೇ ಪುನಃ ಆರಂಭಿಸಲು ನಮ್ಮ ತಾಂತ್ರಿಕ ತಂಡಗಳು ತುರ್ತು ಗತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಸೇವೆಯಲ್ಲಿ ಉಂಟಾದ ಹಠಾತ್ ಅನಾನುಕೂಲತೆಗೆ ಪ್ರಯಾಣಿಕರಲ್ಲಿ ವಿಷಾದಿಸುತ್ತೇವೆ. ಸಮಸ್ಯೆ ಬಗೆಹರಿದು ಸೇವೆ ಪುನರಾರಂಭಗೊಂಡ ತಕ್ಷಣವೇ ಮುಂದಿನ ಅಧಿಕೃತ ಮಾಹಿತಿಯನ್ನು ಹಂಚಿಕೊಳ್ಳಲಾಗುವುದು ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿತ್ತು.
ಒಟ್ಟು 33.46 ಕಿ.ಮೀ. ಉದ್ದ ಹಾಗೂ 32 ನಿಲ್ದಾಣಗಳನ್ನು ಹೊಂದಿರುವ ಹಸಿರು ಮಾರ್ಗವು ನಗರದ ಉತ್ತರ ಮತ್ತು ದಕ್ಷಿಣ ಭಾಗಗಳನ್ನು ಸಂಪರ್ಕಿಸುವ ಪ್ರಮುಖ ಕೊಂಡಿಯಾಗಿದೆ. ಬೆಳಗಿನ ಪೀಕ್ ಅವರ್‌ನಲ್ಲೇ (Peak Hours) ಈ ತಾಂತ್ರಿಕ ದೋಷ ಎದುರಾಗಿದ್ದರಿಂದ ಕಚೇರಿಗಳು, ಕಾಲೇಜುಗಳು ಹಾಗೂ ಆಸ್ಪತ್ರೆಗಳಿಗೆ ತೆರಳುತ್ತಿದ್ದ ಸಾವಿರಾರು ಪ್ರಯಾಣಿಕರು ಯಶವಂತಪುರ ಹಾಗೂ ಇತರ ನಿಲ್ದಾಣಗಳಲ್ಲಿ ಸಿಲುಕಿಕೊಂಡು ಪರದಾಡುವಂತಾಗಿತ್ತು. ಇದೀಗ ಮೆಟ್ರೋ ಸಂಚಾರ ಸಹಜ ಸ್ಥಿತಿಗೆ ಮರಳಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:08 am, Tue, 21 July 26