ನಮ್ಮ ಮೆಟ್ರೋ
ಬೆಂಗಳೂರು, ಸೆಪ್ಟೆಂಬರ್ 18: ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಸಂಚಾರ ಪ್ರಾರಂಭವಾಗಿ 13 ವರ್ಷಗಳು ಕಳೆದಿವೆ. ನಿತ್ಯ ಸಾವಿರಾರು ಮಂದಿ ಮೆಟ್ರೋ ರೈಲು ಪ್ರಯಾಣವನ್ನೇ ನೆಚ್ಚಿಕೊಂಡಿದ್ದಾರೆ. ಹೀಗೆ ರಾಜಧಾನಿಯ ಹತ್ತಾರು ಕಡೆ ಪ್ರಯಾಣಿಕರನ್ನು ಹೊತ್ತೊಯ್ಯುವ ಮೆಟ್ರೋದ ನಿಲ್ದಾಣಗಳು ಆತ್ಮಹತ್ಯೆ ತಾಣಗಳಾಗಿ ಬದಲಾಗುತ್ತಿರುವ ಅನುಮಾನ ಶುರುವಾಗಿದೆ. ಕಳೆದ 9 ತಿಂಗಳಲ್ಲಿ 7 ಅವಾಂತರಗಳು ನಡೆದಿದ್ದು, ಮೆಟ್ರೋ ಹಳಿಗೆ ಜಿಗಿದು ಇಬ್ಬರು ಪ್ರಾಣ ಬಿಟ್ಟಿದ್ದಾರೆ. ಟ್ರಾಫಿಕ್ನಿಂದ ಬಚಾವ್ ಆಗಬೇಕೆಂದು ಮೆಟ್ರೋ ಏರುವ ಪ್ರಯಾಣಿಕರು, ಸಂಚಾರ ವ್ಯತ್ಯಯಕ್ಕೆ ಹೈರಾಣಾಗುತ್ತಿದ್ದಾರೆ.
ಮೆಟ್ರೋ ಶುರುವಾಗಿ 13 ವರ್ಷ: ಇನ್ನೂ ಇಲ್ಲ ಪಿಎಸ್ಡಿ ವ್ಯವಸ್ಥೆ
ಪದೇ ಪದೇ ಅವಾಂತರಗಳು ನಡೆಯುತ್ತಿವೆ. ಆದರೆ, ಮೆಟ್ರೋ ಅಧಿಕಾರಿಗಳು ಮಾತ್ರ ಶಾಶ್ವತ ಪರಿಹಾರಕ್ಕೆ ಯಾವ ಕ್ರಮವನ್ನೂ ಕೈಗೊಳ್ಳುತ್ತಿಲ್ಲ. ಪ್ರಯಾಣಿಕರು ಟ್ರ್ಯಾಕ್ಗೆ ಹಳಿಗೆ ಇಳಿಯದಂತೆ ಅಥವಾ ಜಿಗಿಯದಂತೆ ಬಿಎಂಆರ್ಸಿಎಲ್ ಕ್ರಮ ಕೈಗೊಳ್ಳಬೇಕು. ಇದಕ್ಕಿರುವ ಏಕೈಕ ಮಾರ್ಗ ಅಂದರೆ ಅದು ಪಿಎಸ್ಡಿ (ಫ್ಲಾಟ್ ಫಾರಂ ಸ್ಕ್ರೀನಿಂಗ್ ಡೋರ್). ಇದು ಮೆಟ್ರೋ ನಿಲ್ದಾಣಕ್ಕೆ ಬಂದಾಗ ಮಾತ್ರ ಬಾಗಿಲು ತೆರೆದುಕೊಳ್ಳುವಂತೆ ಮಾಡುತ್ತದೆ. ಇದರ ಮೂಲಕ ಅವಾಂತರಗಳನ್ನ ತಪ್ಪಿಸಬಹುದು.
ಎಲ್ಲೆಲ್ಲಿ ಇವೆ ಪಿಎಸ್ಡಿ ವ್ಯವಸ್ಥೆ?
ಇನ್ನು ಪಿಎಸ್ಡಿ ಅಳವಡಿಸುವುದು ಭಾರತಕ್ಕೆ ಹೊಸ ವಿಷಯವೇನಲ್ಲ. ಈಗಾಗಲೇ ದೆಹಲಿ, ಚೆನ್ನೈ ಹಾಗೂ ಕೊಚ್ಚಿ ಮೆಟ್ರೋ ನಿಲ್ದಾಣಗಳಲ್ಲಿ ಈ ಡೋರ್ನ ವ್ಯವಸ್ಥೆ ಇದೆ. ಆದರೆ, ನಮ್ಮ ಮೆಟ್ರೋ ಶುರುವಾಗಿ 13 ವರ್ಷ ಕಳೆದರೂ ಪ್ರಯಾಣಿಕರ ಜೀವಕ್ಕೆ ರಕ್ಷಣೆ ಇಲ್ಲದಂತಾಗಿದೆ.
ಬೆಂಗಳೂರಿನ ಮೆಟ್ರೋ ನಿಲ್ದಾಣಗಳಲ್ಲಿ ಕೆಲ ತಿಂಗಳುಗಳಿಂದ ಆಗುತ್ತಿರುವ ಅವಾಂತರಗಳನ್ನ ನೋಡಿದರೆ, ಪಿಎಸ್ಡಿ ಡೋರ್ ಅತ್ಯಂತ ಅಗತ್ಯವಾಗಿದೆ.
ಮೆಟ್ರೋದಲ್ಲಿ ಆಕಸ್ಮಿಕ ದುರ್ಘಟನೆಗಳು ಮತ್ತು ಆತ್ಮಹತ್ಯೆ ಯತ್ನ: ಇಲ್ಲಿದೆ ಟೈಮ್ಲೈನ್
- 1 ಜನವರಿ 2024: ವರ್ಷ ಪ್ರಾರಂಭ ಆದ ದಿನವೇ, ಇಂದಿರಾ ನಗರ ಮೆಟ್ರೋ ನಿಲ್ದಾಣದಲ್ಲಿ ಅವಾಂತರವೊಂದು ಸಂಭವಿಸಿತ್ತು. ಮೆಟ್ರೋಗಾಗಿ ಕಾದು ಕುಳಿತಿದ್ದ ಮಹಿಳೆಯೊಬ್ಬರ ಮೊಬೈಲ್ ಟ್ರ್ಯಾಕ್ಗೆ ಬಿದ್ದಿತ್ತು. ಈ ವೇಳೆ ಮೊಬೈಲ್ ತೆಗೆದುಕೊಳ್ಳಲೆಂದು ಅವರು ಹಳಿಗೆ ಜಿಗಿದಿದ್ದರು. ಅಲ್ಲೇ ನಿಂತಿದ್ದ ಮೆಟ್ರೋ ಸಿಬ್ಬಂದಿ ತಕ್ಷಣವೇ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿ, ದುರಂತ ತಪ್ಪಿಸಿದ್ದರು. ಇದರ ಪರಿಣಾಮ ಅವತ್ತು 15 ನಿಮಿಷಗಳ ಕಾಲ ಮೆಟ್ರೋ ಸಂಚಾರ ಸ್ಥಗಿತಗೊಂಡಿತ್ತು.
- 5 ಜನವರಿ 2024: ಜಾಲಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಮೆಟ್ರೋ ಹಳಿಗೆ ಹಾರಿ ಯುವಕನಿಂದ ಆತ್ಮಹತ್ಯೆಗೆ ಯತ್ನ, ಶೇ 90 ರಷ್ಟು ಸುಟ್ಟ ಗಾಯಗಳಾಗಿದ್ದವು. 23 ವರ್ಷದ ಶ್ಯಾರೊನ್ ಎನ್ನುವ ಕೇರಳ ಮೂಲದ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದ. ಸ್ನೇಹಿತನ ಜೊತೆ ಜಾಲಹಳ್ಳಿ ಮೆಟ್ರೋ ನಿಲ್ದಾಣಕ್ಕೆ ಬಂದಿದ್ದ ಶ್ಯಾರೊನ್ ಮೆಜೆಸ್ಟಿಕ್ಗೆ ಹೋಗಲು ಟಿಕೆಟ್ ಸಹ ಪಡೆದುಕೊಂಡಿದ್ದ. ರೈಲು ಬಂದಾಗ ಏಕಾಏಕಿ ಹಳಿಗೆ ಶ್ಯಾರೊನ್ ಧುಮುಕಿದ್ದ. ಆಗ ಮೆಟ್ರೋ ಟ್ರೈನ್ ಡಿಕ್ಕಿ ಹೊಡೆದಿದ್ದು, ಹಸಿರು ಮಾರ್ಗದಲ್ಲಿ ಕೆಲಕಾಲ ಸಂಚಾರ ಸ್ಥಗಿತವಾಗಿತ್ತು. ಹೀಗಾಗಿ ಯಶವಂತಪುರ ಮೆಟ್ರೋ ನಿಲ್ದಾಣದಲ್ಲಿ ಜನರು ಪರದಾಡುವಂತಾಗಿತ್ತು.
- 6 ಜನವರಿ 2024: ಮೆಟ್ರೋ ಟ್ರ್ಯಾಕ್‌ನಲ್ಲಿ ಕಪ್ಪು ಬಣ್ಣದ ಬೆಕ್ಕು ಕಾಣಿಸಿಕೊಂಡಿದ್ದು, ಪ್ರಯಾಣಿಕರು ಆತಂಕಗೊಂಡ ಘಟನೆ ಜೆ.ಪಿ.ನಗರ ಮೆಟ್ರೋ ನಿಲ್ದಾಣದಲ್ಲಿ ಸಂಭವಿಸಿತ್ತು. ಕೂಡಲೇ ಪ್ರಯಾಣಿಕರು ಸಿಬ್ಬಂದಿ ಗಮನಕ್ಕೆ ತಂದಿದ್ದರು. ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಟ್ರ್ಯಾಕ್ನಲ್ಲಿದ್ದ ಬೆಕ್ಕನ್ನು ಓಡಿಸಲಾಗಿತ್ತು. ಮೆಟ್ರೋ ಸಿಬ್ಬಂದಿ ನಡೆಗೆ ಟ್ವಿಟ್ಟರ್ನಲ್ಲಿ ಆಕ್ರೋಶ ವ್ಯಕ್ತವಾಗಿತ್ತು.
- 12 ಮಾರ್ಚ್ 2024: ಜ್ಞಾನಭಾರತಿ ಮೆಟ್ರೋ ಸ್ಟೇಷನ್ ನಿಂದ ಪಟ್ಟಣಗೆರೆ ಮೆಟ್ರೋ ಸ್ಟೇಷನ್ ನಡುವಿನ ಮೆಟ್ರೋ ಹಳಿಯ ಮೇಲಿನ ವಯಾಡಕ್ಟ್‌ನಲ್ಲಿ ವ್ಯಕ್ತಿಯೊಬ್ಬನ ಚಲನವಲನ ಕಂಡು ಬಂದಿತ್ತು. ಹಲವು ಮೆಟ್ರೋ ರೈಲುಗಳ ಸಂಚಾರವನ್ನೇ ಸ್ಥಗಿತಗೊಳಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ಸಾವಿರಾರು ಜನ ಪರದಾಡಿದ ಘಟನೆ ನಡೆದಿತ್ತು.
- 21 ಮಾರ್ಚ್ 2024: ಅತ್ತಿಗುಪ್ಪೆ ಮೆಟ್ರೋ ಸ್ಟೇಷನ್ನಲ್ಲಿ ಧ್ರುವ್ ಟಕ್ಕರ್ ಎನ್ನುವ 19 ವರ್ಷದ ಯುವಕ ಹಳಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ನ್ಯಾಷನಲ್ ಲಾ ಕಾಲೇಜಿನಲ್ಲಿ ಮೊದಲನೇ ವರ್ಷ ವ್ಯಾಸಂಗ ಮಾಡುತ್ತಿದ್ದ ಆತ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಚಂದ್ರಲೇಔಟ್ ಠಾಣೆಯಲ್ಲಿ ಯುಡಿಆರ್ (ಅಸಹಜ ಸಾವು) ಪ್ರಕರಣ ದಾಖಲು ಮಾಡಲಾಗಿತ್ತು.
- 3 ಆಗಸ್ಟ್ 2024: ದೊಡ್ಡಕಲ್ಲಸಂದ್ರ ಮೆಟ್ರೋ ಸ್ಟೇಷನ್ನಲ್ಲಿ 35 ವರ್ಷದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದ. ರೈಲು ಬರುತ್ತಿದ್ದಂತೆಯೇ ಹಳಿಗೆ ಜಿಗಿದಿದ್ದ. ಹಸಿರು ಮಾರ್ಗದ ನಾಗಸಂದ್ರ ಟು ಸಿಲ್ಕ್ ಇನ್ಸ್ಟಿಟ್ಯೂಟ್ ಮಾರ್ಗದಲ್ಲಿ ಘಟನೆ ಸಂಭವಿಸಿತ್ತು.
- 17 ಸೆಪ್ಟೆಂಬರ್ 2024: ಜ್ಞಾನಭಾರತಿ ಮೆಟ್ರೋ ಸ್ಟೇಷನ್ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಯುವಕ ಟ್ರ್ಯಾಕ್ಗೆ ಜಿಗಿದಿದ್ದ. ನೇರಳೆ ಮಾರ್ಗದ ವೈಟ್ ಫೀಲ್ಡ್ ಟು ಚೆಲ್ಲಘಟ್ಟ ಮಾರ್ಗದಲ್ಲಿ ಘಟನೆ ಸಂಭವಿಸಿತ್ತು. ಯುವಕ ಹಳಿಗೆ ಹಾರಿದ ಬೆನ್ನಲ್ಲೇ ಮೆಟ್ರೋ ಸೆಕ್ಯುರಿಟಿ ಗಾರ್ಡ್ ರಶ್ಮಿ ಇಪಿಎಸ್ (ಎಮರ್ಜೆನ್ಸಿ ಸ್ಟಾಪ್ ಪ್ಲಂಗರ್) ಬಟನ್ ಆಫ್ ಮಾಡಿ ಸಿದ್ದಾರ್ಥ ಜೈನ್ ಪ್ರಾಣ ಉಳಿಸಿದ್ದಾರೆ. ಸಿದ್ದಾರ್ಥ ಜೈನ್ ಬಿಹಾರ ಮೂಲದವನಾಗಿದ್ದು ಕೆಂಗೇರಿಯಲ್ಲಿ ಕುಟುಂಬದ ಜೊತೆಗೆ ವಾಸವಾಗಿದ್ದ. ಎಸ್ಪಿ ರೋಡ್ ಮೊಬೈಲ್ ಶಾಪ್ನಲ್ಲಿ ಸೇಲ್ಸ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ಬ್ಯಾಂಕ್ನಲ್ಲಿ ಮಾಡಿದ್ದ ಮೂರು ಲಕ್ಷ ರುಪಾಯಿ ಸಾಲಕ್ಕಾಗಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸದ್ಯ ಜ್ಞಾನಭಾರತಿ ಸ್ಟೇಷನ್ ಪೋಲಿಸರು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮೆಟ್ರೋ ಟ್ರ್ಯಾಕ್ಗೆ ಹಾರಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ: ಪ್ರಾಣಾಪಾಯದಿಂದ ಪಾರು
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ