ನಮ್ಮ ಮೆಟ್ರೋ ಪಿಂಕ್ ಲೈನ್ ಉದ್ಘಾಟನೆ ಮತ್ತೆ ವಿಳಂಬ: ದಸರಾ ಮುಗಿದರೂ ಸಂಚಾರ ಆರಂಭ ಅನುಮಾನ!

ಬೆಂಗಳೂರು ನಮ್ಮ ಮೆಟ್ರೋ ಪಿಂಕ್ ಲೈನ್ ಚಾಲನೆ ಮತ್ತಷ್ಟು ವಿಳಂಬವಾಗಲಿದ್ದು, ದಸರಾ ವೇಳೆಗೆ ಮಾರ್ಗ ಓಪನ್ ಆಗುವುದು ಅನುಮಾನವಾಗಿದೆ. ರೈಲ್ವೆ ಮಂಡಳಿಯಿಂದ ರೋಲಿಂಗ್ ಸ್ಟಾಕ್ ಅನುಮೋದನೆ ಸಿಗದ ಕಾರಣ ಸಿಎಂಆರ್‌ಎಸ್ ಸುರಕ್ಷತಾ ತಪಾಸಣೆ ಬಾಕಿ ಉಳಿದಿದೆ. 21.3 ಕಿ.ಮೀ ಉದ್ದದ ಈ ಮಾರ್ಗದ ಆರಂಭಕ್ಕಾಗಿ ಕಾಯುತ್ತಿದ್ದ ಪ್ರಯಾಣಿಕರಿಗೆ ನಿರಾಸೆಯಾಗಿದೆ.

ನಮ್ಮ ಮೆಟ್ರೋ ಪಿಂಕ್ ಲೈನ್ ಉದ್ಘಾಟನೆ ಮತ್ತೆ ವಿಳಂಬ: ದಸರಾ ಮುಗಿದರೂ ಸಂಚಾರ ಆರಂಭ ಅನುಮಾನ!
ನಮ್ಮ ಮೆಟ್ರೋ ಪಿಂಕ್ ಲೈನ್ ಉದ್ಘಾಟನೆ ಮತ್ತೆ ವಿಳಂಬ
Edited By:

Updated on: Sep 20, 2026 | 1:33 PM

ಮುಖ್ಯಾಂಶಗಳು

  • ದಸರಾ ಮುಗಿದರೂ ನಮ್ಮ ಮೆಟ್ರೋ ಪಿಂಕ್ ಲೈನ್ ಉದ್ಘಾಟನೆ ಮತ್ತೆ ವಿಳಂಬ.
  • ರೈಲ್ವೆ ಮಂಡಳಿಯಿಂದ ರೋಲಿಂಗ್ ಸ್ಟಾಕ್ ಅನುಮೋದನೆ ಸಿಗದೆ ಸಿಎಂಆರ್‌ಎಸ್ ತಪಾಸಣೆ ಬಾಕಿ.
  • ಕಾಳೇನ ಅಗ್ರಹಾರದಿಂದ ನಾಗವಾರದವರೆಗಿನ ಪಿಂಕ್ ಲೈನ್ ಮಾರ್ಗಕ್ಕೆ ಪ್ರಯಾಣಿಕರ ಕಾಯುವಿಕೆ ಮುಂದುವರಿಕೆ.

ಬೆಂಗಳೂರು, ಸೆಪ್ಟೆಂಬರ್ 20: ನಗರದಲ್ಲಿ ಪಿಂಕ್ ಲೈನ್ ಮೆಟ್ರೋ ಚಾಲನೆಗಾಗಿ ಕಾತರದಿಂದ ಕಾಯುತ್ತಿದ್ದ ಪ್ರಯಾಣಿಕರಿಗೆ ಮತ್ತೊಮ್ಮೆ ತೀವ್ರ ನಿರಾಸೆಯಾಗಿದೆ. ಈ ತಿಂಗಳ ಕೊನೆ ಅಥವಾ ಮುಂಬರುವ ದಸರಾ ಹಬ್ಬದ ವೇಳೆಗೆ ಮೆಟ್ರೋ ರೈಲು ಸಂಚಾರ ಆರಂಭವಾಗಲಿದೆ ಎಂದು ಬಿಎಂಆರ್‌ಸಿಎಲ್ ಭರವಸೆ ನೀಡಿತ್ತು. ಆದರೆ, ತಾಂತ್ರಿಕ ಹಾಗೂ ಆಡಳಿತಾತ್ಮಕ ತೊಡಕುಗಳಿಂದಾಗಿ ದಸರಾ ಹಬ್ಬ ಮುಗಿದರೂ ಪಿಂಕ್ ಲೈನ್ ಸಾರ್ವಜನಿಕ ಸೇವೆಗೆ ಮುಕ್ತವಾಗುವುದು ಅನುಮಾನವಾಗಿದೆ.

ರೈಲ್ವೆ ಮಂಡಳಿಯ ಗ್ರೀನ್ ಸಿಗ್ನಲ್‌ಗೆ ಕಾಯುತ್ತಿರುವ ಬಿಎಂಆರ್‌ಸಿಎಲ್

ಸೆಪ್ಟೆಂಬರ್ ಅಂತ್ಯದಲ್ಲಿ ಪಿಂಕ್ ಲೈನ್‌ನ ಆರು ಎಲಿವೇಟೆಡ್ ಸ್ಟೇಷನ್‌ಗಳನ್ನು ಉದ್ಘಾಟಿಸಲು ಯೋಜನೆ ರೂಪಿಸಲಾಗಿತ್ತು. ಇದಕ್ಕಾಗಿ ಬಿಎಂಆರ್‌ಸಿಎಲ್ ಸೆಪ್ಟೆಂಬರ್ 7 ರಂದು ರೈಲ್ವೆ ಮಂಡಳಿಗೆ ‘ರೋಲಿಂಗ್ ಸ್ಟಾಕ್ ಸ್ಯಾಂಕ್ಷನ್’ಗಾಗಿ ಅರ್ಜಿ ಸಲ್ಲಿಸಿತ್ತು. ಆದರೆ, ರೈಲ್ವೆ ಮಂಡಳಿಯಿಂದ ಇನ್ನೂ ಯಾವುದೇ ಅನುಮೋದನೆ ಸಿಕ್ಕಿಲ್ಲ. ಈ ಅನುಮೋದನೆ ದೊರೆಯದ ಹೊರತು ಮೆಟ್ರೋ ರೈಲು ಸುರಕ್ಷತಾ ಆಯುಕ್ತರು ಅಂತಿಮ ತಪಾಸಣೆ ನಡೆಸಲು ಸಾಧ್ಯವಿಲ್ಲ. ಅನುಮತಿ ಸಿಕ್ಕ ನಂತರ ಬಿಎಂಆರ್‌ಸಿಎಲ್ ಐಎಸ್‌ಎ ಸಿಗ್ನಲಿಂಗ್ ವರದಿ ಸಲ್ಲಿಸಬೇಕಿದ್ದು, ಪರಿಶೀಲನೆ ಹಾಗೂ ಸುರಕ್ಷತಾ ತಪಾಸಣೆ ಪೂರ್ಣಗೊಳ್ಳಲು ಇನ್ನಷ್ಟು ಸಮಯ ತಾಗಲಿದೆ.

ಸಿಎಂಆರ್‌ಎಸ್ ವರ್ಗಾವಣೆ ಹಾಗೂ ಮರುನಾಮಕರಣದ ಗಲಾಟೆ!

ಇಷ್ಟೇ ಅಲ್ಲದೆ, ಸಿಎಂಆರ್‌ಎಸ್ ಕಮಿಷನರ್ ವರ್ಗಾವಣೆಯಾಗಿರುವುದು ಮತ್ತು ನಾಲ್ಕು ಮೆಟ್ರೋ ನಿಲ್ದಾಣಗಳ ಹೆಸರು ಮರುನಾಮಕರಣ ಮಾಡುವ ಕುರಿತು ಎದ್ದಿರುವ ವಿವಾದವೂ ಮೆಟ್ರೋ ಓಪನ್ ಆಗುವುದನ್ನು ಇನ್ನಷ್ಟು ಮುಂದೂಡಲು ಕಾರಣವಾಗಿದೆ.

21.3 ಕಿ.ಮೀ ಉದ್ದದ ಪಿಂಕ್ ಲೈನ್ ಮಾರ್ಗ

ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ ಒಟ್ಟು 21.3 ಕಿ.ಮೀ ಉದ್ದದ ಪಿಂಕ್ ಲೈನ್ ಮಾರ್ಗ ಹೊಂದಿದ್ದು, ಇದರಲ್ಲಿ ಕಾಳೇನ ಅಗ್ರಹಾರದಿಂದ ತಾವರೆಕೆರೆಯವರೆಗೆ7.5 ಕಿ.ಮೀ ವ್ಯಾಪ್ತಿಯಲ್ಲಿ 6 ಎಲಿವೇಟೆಡ್ ನಿಲ್ದಾಣಗಳು ಹಾಗೂ ತಾವರೆಕೆರೆಯಿಂದ ನಾಗವಾರದವರೆಗೆ 12 ಸುರಂಗ (ಅಂಡರ್‌ಗ್ರೌಂಡ್) ಮೆಟ್ರೋ ನಿಲ್ದಾಣಗಳಿವೆ. ಅಧಿಕಾರಿಗಳ ಈ ವಿಳಂಬ ಧೋರಣೆಗೆ ನಮ್ಮ ಮೆಟ್ರೋ ಪ್ರಯಾಣಿಕರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
Loading...
Unable to load recommendations.
Follow Us