ಬೆಂಗಳೂರು, ಫೆಬ್ರವರಿ 13: ನಮ್ಮ ಮೆಟ್ರೋ ಪ್ರಯಾಣ ದರ ಮತ್ತೆ ಪರಿಷ್ಕರಣೆ ಮಾಡುವುದಿಲ್ಲ, ಆದರೆ ಸ್ಟೇಜ್ ಬೈ ಸ್ಟೇಜ್ ರೇಟ್ ಮರ್ಜ್ ಮಾಡುತ್ತೇವೆ ಎಂದು ಬಿಎಂಆರ್ಸಿಎಲ್ ಎಂಡಿ ಮಹೇಶ್ವರ್ ರಾವ್ ಗುರುವಾರ ತಿಳಿಸಿದರು. ನಮ್ಮ ಮೆಟ್ರೋ ಪ್ರಯಾಣದರ ಏರಿಕೆಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ದರ ಏರಿಕೆ ಬೆನ್ನಲ್ಲೇ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆ ಆಗಿರುವ ಬಗ್ಗೆ ಕೂಡ ವರದಿಯಾಗಿತ್ತು. ಈ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಎಂಆರ್ಸಿಎಲ್ ಗೆ ಮಾತ್ರ ಸೂಚನೆ ನೀಡಿರುವ ಬಗ್ಗೆ ವರದಿಯಾಗಿತ್ತು. ಅದರ ಬೆನ್ನಲ್ಲೇ ಇದೀಗ ಬಿಎಂಆರ್ಸಿಎಲ್ ಎಂಡಿ ಮಹೇಶ್ವರ್ ರಾವ್ ಪತ್ರಿಕಾಗೋಷ್ಠಿ ನಡೆಸಿ ಮಹತ್ವದ ಮಾಹಿತಿ ನೀಡಿದ್ದಾರೆ.
ಮೆಟ್ರೋ ಪ್ರಯಾಣ ದರ ಹೆಚ್ಚಳ ಮಾಡುವುದಕ್ಕೆ ಒಂದು ವಿಧಾನ ಇದೆ. ಅದರಂತೆಯೇ ದರ ನಿಗದಿ ಸಮಿತಿ ಅಧ್ಯಯನ ನಡೆಸಿ ಮಾಡಿದ ಶಿಫಾರಸಿನ ಮೇರೆಗೆ ದರ ಹೆಚ್ಚಳ ಮಾಡಲಾಗಿದೆ. ದರ ಏರಿಕೆಗೆ ಪ್ರಯಾಣಿಕರ ವಿರೋಧ ಹಿನ್ನೆಲೆಯಲ್ಲಿ ಸಭೆ ಮಾಡಲಾಗಿದೆ. ಕಳೆದ 3 ದಿನಗಳಿಂದ ಬೋರ್ಡ್ ಜೊತೆ ಸಭೆ ನಡೆಸಿದ್ದೇವೆ. ಸಿಎಂ ಹಾಗೂ ಡಿಸಿಎಂ ಸೂಚನೆ ಮೇರೆಗೆ ಸಭೆ ಮಾಡಿದ್ದೇವೆ. ಎಲ್ಲಿ ಅನಿವಾರ್ಯವೋ ಅಲ್ಲಿ ದರ ಮರ್ಜ್ ಮಾಡಬೇಕಾಗುತ್ತದೆ. ಎಲ್ಲೆಲ್ಲಿ (ಯಾವ ನಿಲ್ದಾಣದಿಂದ ಯಾವ ನಿಲ್ದಾಣಕ್ಕೆ ದುಪ್ಪಟ್ಟು ದರ ಏರಿಕೆಯಾಗಿದೆಯೋ ಅಲ್ಲಿ ಸ್ಟೇಜ್ ಬೈ ಸ್ಟೇಜ್ ಮರ್ಜ್ ಮಾಡುವ ಮೂಲಕ ದರ ಕಡಿಮೆಯಾಗುವಂತೆ ಮಾಡಲು ಪ್ರಯತ್ನಿಸಲಾಗುವುದು ಎಂದು ಅವರು ತಿಳಿಸಿದರು.
ಮೆಟ್ರೋಗೆ ಸಾಕಷ್ಟು ಬಂಡವಾಳ ಹೂಡಿಕೆ ಮಾಡಲಾಗಿದೆ. ಮೆಟ್ರೋ ಸಿಬ್ಬಂದಿ ವೇತನ, ಇತ್ಯಾದಿ ವಿಚಾರಗಳನ್ನೂ ದರ ಏರಿಕೆ ವೇಳೆ ಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.
ದುಪ್ಪಟ್ಟು ದರ ಏರಿಕೆಯಾಗಿರುವ ನಿಲ್ದಾಣಗಳಲ್ಲಿನ ದರವನ್ನು ಮರ್ಜ್ ಮಾಡಲಾಗುವುದು. ಇದರಿಂದ ಪ್ರಯಾಣಿಕರಿಗೆ ಸ್ವಲ್ಪ ಮಟ್ಟಿನ ರಿಲೀಫ್ ದೊರೆಯಲಿದೆ ಎಂದು ಮಹೇಶ್ವರ್ ರಾವ್ ತಿಳಿಸಿದರು. ನಮ್ಮ ಮೆಟ್ರೋ ಪ್ರಯಾಣ ದರ ಸ್ಟೇಜ್ ಆಧಾರದಲ್ಲಿ ಇಳಿಕೆ ಮಾಡಲಾಗುವುದು. ಮೆಟ್ರೋ ದರ ಶೇ 45 ರಿಂದ ಶೇ 50 ರ ವರೆಗೆ ಹೆಚ್ಚಳವಾಗಿರುವ ನಿಲ್ದಾಣಗಳ ಮಧ್ಯೆ ಇಳಿಕೆ ಮಾಡಲಾಗುವುದು. ಶೇ 60 ದರ ಹೆಚ್ಚಳವಾಗಿರುವಲ್ಲಿ ಸ್ಲ್ಯಾಬ್ ಮರ್ಜ್ ಮಾಡುತ್ತೇವೆ ಎಂದು ಅವರು ತಿಳಿಸಿದರು.
ಕೆಲವು ನಿಲ್ದಾಣಗಳಲ್ಲಿ ಪ್ರಯಾಣ ದರ ಶೇ 70 ರಿಂದ 100 ರಷ್ಟು ಹೆಚ್ಚಳವಾಗಿದೆ. ಅಂಥ ಕಡೆಗಳಲ್ಲಿ ಶೇ 30 ರ ವರೆಗೆ ಟಿಕೆಟ್ ದರ ಇಳಿಕೆ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು.
ಇದನ್ನೂ ಓದಿ: ಬಿಎಂಆರ್ಸಿಎಲ್ಗೆ ಸಿಎಂ ಮಹತ್ವದ ಸೂಚನೆ
ನಮ್ಮ ಮೆಟ್ರೋ ಪ್ರಯಾಣ ದರವನ್ನು ಸ್ಟೇಜ್ ಆಧಾರದಲ್ಲಿ ಮರ್ಜ್ ಮಾಡುವ ಮೂಲಕ ಇಳಿಕೆ ಮಾಡಿ ಶೀಘ್ರದಲ್ಲೇ ವಿವರಗಳನ್ನು ಒದಗಿಸುತ್ತೇವೆ ಎಂದು ಅವರು ತಿಳಿಸಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:34 pm, Thu, 13 February 25