ಬೆಂಗಳೂರಿನ ಕಸ ನಿರ್ವಹಣೆಗೆ ಬಂತು ಟೆಕ್ನಾಲಜಿ, ಏನಿದು ‘ನಮ್ಮ ಕಸ’ ತಂತ್ರಜ್ಞಾನ?

ಸಿಲಿಕಾನ್ ಸಿಟಿಯ ರಸ್ತೆಬದಿಯ ಕಸದ ರಾಶಿ ಕಂಡು ಮೂಗು ಮುಚ್ಚಿಕೊಂಡು ಹೋಗುವ ಕಾಲ ಮುಗಿಯಿತು. ಇದೀಗ ಸ್ಮಾರ್ಟ್‌ಫೋನ್ ಮೂಲಕವೇ ಅದನ್ನು ಜನಪ್ರತಿನಿಧಿಗಳ ಗಮನಕ್ಕೆ ತರಬಹುದು. ಅದಕ್ಕಾಗಿ ಬೆಂಗಳೂರಿನ ವ್ಯಕ್ತಿಯೊಬ್ಬರು 'ನಮ್ಮ ಕಸ' ಎಂಬ ಅದ್ಭುತ ಪ್ಲಾಟ್‌ಫಾರ್ಮ್​​ ಒಂದನ್ನು ಸಿದ್ಧಪಡಿಸಿದ್ದಾರೆ. ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರಿನ ಕಸ ನಿರ್ವಹಣೆಗೆ ಬಂತು ಟೆಕ್ನಾಲಜಿ, ಏನಿದು ‘ನಮ್ಮ ಕಸ’ ತಂತ್ರಜ್ಞಾನ?
ನಮ್ಮ ಕಸ
Image Credit source: Indian Tech and Infra

Updated on: Apr 12, 2026 | 11:09 PM

ಬೆಂಗಳೂರು, ಏಪ್ರಿಲ್​ 12: ಸಿಲಿಕಾನ್ ಸಿಟಿಯಲ್ಲಿ ಕಸ ನಿರ್ವಹಣೆ ಮಾಡುವುದೇ ದೊಡ್ಡ ಸವಾಲು. ಇದೀಗ ಬೆಂಗಳೂರು ಮತ್ತೆ ಗಾರ್ಬೇಜ್ ಸಿಟಿಯಾಗುತ್ತಿದೆಯಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಏಕೆಂದರೆ ಕಳೆದ ಒಂದು ತಿಂಗಳಿಂದ ರಸ್ತೆಯಲ್ಲಿಯೇ ಬೃಹತ್ ಕಸದ ರಾಶಿ ಬಿದ್ದು ನಾರುತ್ತಿದ್ದರು ಸ್ಚಚ್ಛ ಮಾಡಿದೆ ಕಸ ನಿರ್ವಹಣೆಯಲ್ಲಿ GBA ಸಂಪೂರ್ಣ ವಿಫಲವಾಗಿದೆ. ಈ ಮಧ್ಯೆ ಬೆಂಗಳೂರಿನ ವ್ಯಕ್ತಿಯೊಬ್ಬರು ಇದಕ್ಕಾಗಿ ‘ನಮ್ಮ ಕಸ’ (NammaKasa) ಎಂಬ ವೇದಿಕೆಯನ್ನೇ ಸೃಷ್ಟಿಸಿದ್ದಾರೆ. ಆ ಮೂಲಕ ಕಸ ನಿರ್ವಹಣೆಗೂ ಟೆಕ್ನಾಲಜಿ ಬಂದಿದೆ.

ಕಸದ ರಾಶಿ ಕಂಡು ಮೂಗು ಮುಚ್ಚಿಕೊಂಡು ಹೋಗುವ ಬದಲು, ಆ ಕಸವನ್ನು ಹಾಕಿದವರನ್ನು ಮತ್ತು ಅದನ್ನು ಎತ್ತದವರನ್ನು ಹೊಣೆಗಾರರನ್ನಾಗಿ ಮಾಡಲು ‘ನಮ್ಮ ಕಸ’ ಎಂಬ ಹೊಸ ವೇದಿಕೆ ಸೃಷ್ಟಿಯಾಗಿದೆ. ಫಿನ್‌ಟೆಕ್ ಸಂಸ್ಥೆಯ ಪ್ರಾಡಕ್ಟ್ ಡಿಸೈನರ್ ಜ್ಯೋತಿಶ್ ವಿ.ಎಂ. ಅವರು ಕೇವಲ ಮೂರು ಸಾವಿರ ರೂ ವೆಚ್ಚದಲ್ಲಿ ಈ ಅದ್ಭುತ ಪ್ಲಾಟ್‌ಫಾರ್ಮ್ ಸಿದ್ಧಪಡಿಸಿದ್ದಾರೆ.

Indian Tech & Infra Tweet

ಏನಿದು ನಮ್ಮ ಕಸ?

ನಮ್ಮ ಕಸ ಎಂಬುದು ಸಾರ್ವಜನಿಕರ ಮೊದಲ ಸರಳ ವೆಬ್‌ಸೈಟ್ ಆಗಿದ್ದು, ರಸ್ತೆಬದಿಯ ಕಸ ಸೇರಿದಂತೆ ನಾಗರಿಕ ಸಮಸ್ಯೆಗಳನ್ನು ಜನಸಾಮಾನ್ಯರು ಆನ್‌ಲೈನ್​​​ ಮೂಲಕ ದೂರು ದಾಖಲಿಸಬಹುದಾದ ವೇದಿಕೆ ಆಗಿದೆ.

‘ನಮ್ಮ ಕಸ’ ವೇದಿಕೆಯ ಕಾರ್ಯ ಹೇಗೆ?

ಇದು ಕೇವಲ ದೂರು ನೀಡುವ ಅಪ್ಲಿಕೇಶನ್ ಅಲ್ಲ, ಬದಲಿಗೆ ಇದೊಂದು ಅಕೌಂಟೆಬಿಲಿಟಿ ಲೀಡರ್‌ಬೋರ್ಡ್. ರಸ್ತೆಬದಿಯಲ್ಲಿ ಕಸ ಕಂಡರೆ ಅದರ ಫೋಟೋ ತೆಗೆದು ಲೊಕೇಶನ್ ಸಮೇತ ಅಪ್‌ಲೋಡ್ ಮಾಡಬಹುದು. ಇಲ್ಲಿ ದೂರು ನೀಡುವವರ ಹೆಸರನ್ನು ಗೌಪ್ಯವಾಗಿಡಲಾಗುತ್ತದೆ.

ಇದನ್ನೂ ಓದಿ: ಕಸದ ರಾಶಿಗೆ ರಸ್ತೆ, ಫುಟ್​ಪಾತ್ ಮಾಯ! ಜಿಬಿಎ ವಿರುದ್ಧ ರೊಚ್ಚಿಗೆದ್ದ ಜನ

ಈ ಪ್ಲಾಟ್‌ಫಾರ್ಮ್‌ನಲ್ಲಿ ನಗರದ 243 ವಾರ್ಡ್‌ಗಳು, 28 ಶಾಸಕರು ಮತ್ತು 4 ಸಂಸದರ ಪಟ್ಟಿ ಇದೆ. ಯಾವ ಕ್ಷೇತ್ರದಲ್ಲಿ ಅತಿ ಹೆಚ್ಚು ಕಸದ ದೂರುಗಳಿವೆಯೋ ಆ ನಾಯಕರು ಲೀಡರ್‌ಬೋರ್ಡ್​​ ಪಟ್ಟಿಯಲ್ಲಿ ಕೆಳಗೆ  ಹೋಗುತ್ತಾರೆ. ಇನ್ನು ದೂರು ದಾಖಲಾದ ಕೂಡಲೇ ಸಂಬಂಧಪಟ್ಟ ಶಾಸಕರ ಎಕ್ಸ್​​ ಖಾತೆಗೆ ಟ್ಯಾಗ್ ಮಾಡುವ ಮೂಲಕ ಎಚ್ಚರಿಸುವ ವ್ಯವಸ್ಥೆ ಕೂಡ ಇದೆ.

230ಕ್ಕೂ ಹೆಚ್ಚು ದೂರುಗಳು

ನಮ್ಮ ಕಸ ವೇದಿಕೆ ಸಿದ್ಧಪಡಿಸಲು ಜಾಸ್ತಿ ಹಣ ಖರ್ಚು ಮಾಡಲಾಗಿಲ್ಲ. ಮುಕ್ತವಾಗಿರುವ ತಂತ್ರಜ್ಞಾನಗಳನ್ನು ಬಳಸಿಕೊಂಡು ಕೆಲವೇ ದಿನಗಳಲ್ಲಿ ಜ್ಯೋತಿಶ್ ಇದನ್ನು ರೂಪಿಸಿದ್ದಾರೆ. ಏಪ್ರಿಲ್ 4 ರಂದು ಪ್ರಾರಂಭವಾಗಿರುವ ಈ ಪ್ಲಾಟ್‌ಫಾರ್ಮ್‌ನಲ್ಲಿ ಈಗಾಗಲೇ 230ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ. ಮಹದೇವಪುರ ಭಾಗದಲ್ಲಿ ಕಸದ ರಾಶಿ ಅತಿ ಹೆಚ್ಚಾಗಿರುವುದು ಸದ್ಯಕ್ಕೆ ಕಂಡುಬಂದಿದೆ.

ಇದನ್ನೂ ಓದಿ: Video: ಬೀದಿ ಬದಿ ಕಸ ಹಾಕುವವರಿಗೆ ವಿಶಿಷ್ಟ ಬ್ಯಾನರ್ ಹಾಕಿ ವಾರ್ನಿಂಗ್ ಕೊಟ್ಟ ವ್ಯಕ್ತಿ

ಇನ್ನು ಸರ್ಕಾರದ ಜೊತೆಗೆ ಪಾಲುದಾರಿಕೆಯಲ್ಲಿ ಕೆಲಸ ಮಾಡುವ ಉದ್ದೇಶ ಹೊಂದಿರು ಜ್ಯೋತಿಶ್, ಬೆಂಗಳೂರಿನಿಂದ ಆರಂಭವಾಗಿರುವ ಈ ಕಸದ ಕ್ರಾಂತಿಯನ್ನು ದೇಶಾದ್ಯಂತ ವಿಸ್ತರಿಸುವ ಗುರಿ ಹೊಂದಿದ್ದಾರೆ. ಹೀಗಾಗಿ ನಾಗರಿಕರು ಮತ್ತು ಸರ್ಕಾರ ಕೈಜೋಡಿಸಿದರೆ ಮಾತ್ರ ಬದಲಾವಣೆ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:05 pm, Sun, 12 April 26

Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
Follow Us