ಮದುವೆ ಇವೆಂಟ್ ಮುಗಿಸಿ ವಾಪಸಾಗುತ್ತಿದ್ದ ವೇಳೆ ಭೀಕರ ಅಪಘಾತ: ಇಬ್ಬರು ಡ್ಯಾನ್ಸರ್ಸ್ ಸ್ಥಳದಲ್ಲೇ ಸಾವು
ನೆಲಮಂಗಲದ ಕುಣಿಗಲ್ ಬೈಪಾಸ್‌ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಬೆಂಗಳೂರಿನ ಶ್ರೀರಾಮಪುರದ ಇಬ್ಬರು ಡ್ಯಾನ್ಸರ್ಸ್ ಲಾರಿ ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕುಣಿಗಲ್‌ನಿಂದ ಬೆಂಗಳೂರಿಗೆ ಮರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ನೆಲಮಂಗಲ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚಾಲಕನನ್ನು ವಶಕ್ಕೆ ಪಡೆಯಲಾಗಿದೆ.

ನೆಲಮಂಗಲ, ಜೂನ್ 16: ಲಾರಿ ಡಿಕ್ಕಿಯಾಗಿ ಬೈಕ್ನಲ್ಲಿದ್ದ ಇಬ್ಬರು ಡ್ಯಾನ್ಸರ್ಸ್ (dancers) ಸ್ಥಳದಲ್ಲೇ ಸಾವನ್ನಪ್ಪಿರುವಂತಹ (death) ಘಟನೆ ನೆಲಮಂಗಲದ ಕುಣಿಗಲ್ ಬೈಪಾಸ್‌ನಲ್ಲಿ ನಡೆದಿದೆ. ಬೆಂಗಳೂರಿನ ಶ್ರೀರಾಮಪುರದ ಪ್ರಜ್ವಲ್(22) ಮತ್ತು ಸಹನಾ(21) ಮೃತರು. ಲಾರಿ ಜಪ್ತಿ ಮಾಡಿ ಚಾಲಕನನ್ನು ವಶಕ್ಕೆ ಪಡೆಯಲಾಗಿದ್ದು, ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಪ್ರಜ್ವಲ್ ಕೆಲವು ಸಿನಿಮಾ ಮತ್ತು ಇವೆಂಟ್ಗಳಲ್ಲಿ ನೃತ್ಯ ಮಾಡಿದ್ದಾರೆ. ಸಹನಾ ಕೂಡ ಡ್ಯಾನ್ಸರ್ ಆಗಿದ್ದಾರೆ. ಇಬ್ಬರು ಮದುವೆ ಇವೆಂಟ್ ಒಂದನ್ನು ಮುಗಿಸಿಕೊಂಡು ಕುಣಿಗಲ್‌ನಿಂದ ಬೆಂಗಳೂರಿಗೆ ವಾಪಸಾಗುತ್ತಿದ್ದರು. ಈ ವೇಳೆ ಭೀಕರ ಅಪಘಾತ ಸಂಭವಿಸಿದೆ.
ಮಳೆ ಅಬ್ಬರ: ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ
ಕಾಫಿನಾಡಲ್ಲಿ ಧಾರಾಕಾರ ಮಳೆ ಮುಂದುವರೆದಿದೆ. ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ ಹೊಡೆದಿರುವಂತಹ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣ ಬಳಿ ನಡೆದಿದೆ. ಕಾರು ಗುದ್ದಿದ ರಭಸಕ್ಕೆ ಮೂರು ವಿದ್ಯುತ್ ಕಂಬಗಳು ಪುಡಿ ಪುಡಿ ಆಗಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಭಾರಿ ಮಳೆಗೆ ತಡರಾತ್ರಿ ಗೋಡೆ ಕುಸಿದು ವೃದ್ಧೆ ಸಾವು
ಭಾರಿ ಮಳೆಗೆ ತಡರಾತ್ರಿ ಗೋಡೆ ಕುಸಿದು ವೃದ್ಧೆ ಸಿದ್ದಮ್ಮ ಸಾವನ್ನಪ್ಪಿರುವಂತಹ ಘಟನೆ ಶಿವಮೊಗ್ಗ ತಾಲೂಕಿನ ಮಂಡಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಡುಗಡಿ ಗ್ರಾಮದಲ್ಲಿ ನಡೆದಿದೆ. ಹೇಮಾವತಿ, ಪರಶುರಾಮ್, ಪಲ್ಲವಿ ಮತ್ತು ಚೇತನ್ ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಐದು ತಿಂಗಳಲ್ಲಿ 203 ಜನಕ್ಕೆ ಹಾವು ಕಡಿತ
ದಾವಣಗೆರೆ ಜಿಲ್ಲೆಯಲ್ಲಿ ಜನವರಿ ತಿಂಗಳಿಂದ ಮೇ 25ರವರೆಗೆ ಐದು ತಿಂಗಳಲ್ಲಿ 203 ಜನಕ್ಕೆ ಹಾವು ಕಡಿದಿರುವಂತಹ ಘಟನೆ ನಡೆದಿದೆ. ದಾವಣಗೆರೆ 163, ಹರಿಹರ 26, ಚನ್ನಗಿರಿ 10, ಹೊನ್ನಾಳಿ 3, ಜಗಳೂರ ತಾಲೂಕಿನಲ್ಲಿ ಓರ್ವನಿಗೆ ಹಾವು ಕಡಿದಿದೆ.
ಇದನ್ನೂ ಓದಿ: ಮಹಿಳೆಯ ಬೆತ್ತಲೆ ವಿಡಿಯೋ ಮಾಡಿ ಬ್ಲ್ಯಾಕ್ಮೇಲ್, ಅತ್ಯಾಚಾರ ಯತ್ನ: ಕೇರಳದ ಪೆರಿಂಗೋಟ್ಟುಕ್ಕಾರದ ಅರ್ಚಕ ಬೆಂಗಳೂರಿನಲ್ಲಿ ಬಂಧನ
ಜೂನ್ ತಿಂಗಳಲ್ಲಿ ಜಗಳೂರು ತಾಲೂಕಿನ ಗಡಿಮಾಕುಂಟೆ ಗ್ರಾಮದಲ್ಲಿ 12 ವರ್ಷದ ಬಾಲಕಿ ಹಾವು ಕಡಿದು ಸಾವನ್ನಪ್ಪಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.








