
ಬೆಂಗಳೂರು, ಆಗಸ್ಟ್ 27: ನೇಪಾಳ ಹಾಗೂ ಟಿಬೆಟ್ ಗಡಿಭಾಗದಲ್ಲಿ ಭೀಕರ ಪ್ರವಾಹ ಹಿನ್ನೆಲೆ ಹಲವಾರು ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಕಚೇರಿಯಿಂದ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದ್ದು, ನೇಪಾಳದಲ್ಲಿ ಸಿಲುಕಿರುವ ಕನ್ನಡಿಗರ ಮಾಹಿತಿ ಸಂಗ್ರಹಿಸ್ತಿದ್ದೇವೆ. ತೊಂದರೆಗೆ ಒಳಗಾಗಿರುವ ವ್ಯಕ್ತಿಗಳು, ಅವರ ಸಂಬಂಧಿಕರು ಮತ್ತು ಪ್ರವಾಸ ಆಯೋಜಕರು ಅಗತ್ಯ ವಿವರಗಳನ್ನು ಗೂಗಲ್ ಫಾರ್ಮ್ನಲ್ಲಿ ಸಲ್ಲಿಸಲು ಕೋರಲಾಗಿದೆ. ಈ ಮಾಹಿತಿಯ ಆಧಾರದಡಿ ಮೇಲೆ ವಿದೇಶಾಂಗ ಇಲಾಖೆ ನೇಪಾಳದಲ್ಲಿರುವ ಭಾರತೀಯ ರಾಯಭಾರ ಕಚೇರಿ ಹಾಗೂ ಬೀಜಿಂಗ್‌ನ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಮನ್ವಯ ಸಾಧಿಸಿ ರಕ್ಷಣಾ ಕಾರ್ಯಾಚರಣೆ, ಸ್ಥಳಾಂತರ ಮತ್ತು ಇತರ ಅಗತ್ಯ ನೆರವು ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ನೆರವಿಗೆ ಹೆಲ್ಪ್‌ಲೈನ್ 1070 / 080-22253707 ಸಂಪರ್ಕಿ ಎಂದು ಪ್ರಕಟಣೆ ತಿಳಿಸಿದೆ.
ನೇಪಾಳ ಪ್ರವಾಹದಲ್ಲಿ ಕೆಲವರು ನಾಪತ್ತೆಯಾಗಿದ್ದು, ಇನ್ನು ಕೆಲವರ ಬಗ್ಗೆ ನಮಗೆ ನಿಖರ ಮಾಹಿತಿ ಸಿಗುತ್ತಿಲ್ಲ. ತೊಂದರೆಗೆ ಸಿಲುಕಿರುವ ಎಲ್ಲರನ್ನೂ ಆದಷ್ಟು ಬೇಗ ಪತ್ತೆಹಚ್ಚಿ ಕರೆತರುತ್ತೇವೆ. ಕನ್ನಡಿಗರನ್ನ ರಕ್ಷಣೆ ಮಾಡಲು ಏನು ಮಾಡ್ಬೇಕೋ ಮಾಡ್ತೇವೆ ಎಂದು ಕರ್ನಾಟಕ ಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ನೇಪಾಳ ಪ್ರವಾಹದಲ್ಲಿ ಸತ್ತವರ ಬಗ್ಗೆ ಯಾವುದೇ ಮಾಹಿತಿ ಸದ್ಯಕ್ಕಿಲ್ಲ. ನೇಪಾಳದ ಕಠ್ಮಂಡುಗೆ ಹಿರಿಯ ಅಧಿಕಾರಿಯನ್ನು ಕಳುಹಿಸಿದ್ದೇವೆ. ಚೀನಾ ರಾಯಭಾರಿ ಸಂಪರ್ಕ ಮಾಡುವ ಪ್ರಯತ್ನ ಮಾಡ್ತಿದ್ದೇವೆ. ಅವಶ್ಯಕತೆ ಇದ್ದರೆ ಸಿಎಂ ಜೊತೆ ಚರ್ಚಿಸಿ ಮಂತ್ರಿ ಕಳುಹಿಸುತ್ತೇವೆ ಎಂದು ಡಿಸಿಎಂ ಡಾ. ಜಿ. ಪರಮೇಶ್ವರ್ ಕೂಡ ತಿಳಿಸಿದ್ದಾರೆ.
ಇದನ್ನೂ ಓದಿ: ನೇಪಾಳ ಜಲಪ್ರಳಯದಲ್ಲಿ ಕೈಲಾಸ ಯಾತ್ರಿಕರು ನಾಪತ್ತೆ: ಇಶಾ ಫೌಂಡೇಶನ್‌ನ 77 ಮಂದಿ ಹಾಗೂ ಕೋಲ್ಕತ್ತಾದ 32 ಯಾತ್ರಿಕರ ಸಂಪರ್ಕ ಕಟ್
ಈ ನಡುವೆ ನೇಪಾಳ ಪ್ರವಾಸಕ್ಕೆ ಹೋಗಿದ್ದ ಹಲವು ಕುಟುಂಬಗಳು ಸೇಫ್ ಆಗಿರುವ ಮಾಹಿತಿ ಲಭ್ಯವಾಗಿದೆ. ಪ್ರವಾಸಕ್ಕೆ ತೆರಳಿದ್ದ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿಯ ಪಟ್ಟಣದ 6 ಕುಟುಂಬಗಳ 15 ಜನ ಸುರಕ್ಷಿತವಾಗಿದ್ದು, ಪೋಖರಾದಿಂದ 50 ಕಿ.ಮೀ ದೂರದಲ್ಲಿ ಇವರಿದ್ದಾರೆ.ನೇಪಾಳದ ಸೋನಾಲಿಗೆ ಬಂದು ಕರ್ನಾಟಕಕ್ಕೆ ವಾಪಸಾಗುವ ವಿಶ್ವಾಸವನ್ನು ಇವರು ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:14 pm, Thu, 27 August 26