ಗೃಹಲಕ್ಷ್ಮಿ ಯೋಜನೆಗೆ ಹೊಸ ಮಾರ್ಗಸೂಚಿ: ಫಲಾನುಭವಿ ಮಹಿಳೆ ಜೊತೆಗೆ ಪತಿ ಆಧಾರ್​​ ಲಿಂಕ್​​ ಕೂಡ ಕಡ್ಡಾಯ

ಗೃಹಲಕ್ಷ್ಮಿ ಯೋಜನೆಗೆ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟಿಸಿದ್ದು, ಫಲಾನುಭವಿ ಮಹಿಳೆಯ ಜೊತೆಗೆ ಪತಿಯ ಆಧಾರ್ ಲಿಂಕ್ ಕಡ್ಡಾಯಗೊಳಿಸಲಾಗಿದೆ. ಸರ್ಕಾರದ ಈ ನಡೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ವಿಪಕ್ಷ ನಾಯಕ ಆರ್. ಅಶೋಕ್, ನಯವಂಚಕ ಕಾಂಗ್ರೆಸ್​​ ಸರ್ಕಾರ ತಾಯಂದಿರನ್ನೇ ಶಂಕಿಸಿ, ಹೊಸ ಷರತ್ತುಗಳ ಮೂಲಕ ಕಿರುಕುಳ ನೀಡಲು ಹೊರಟಿದೆ ಎಂದು ಆರೋಪಿಸಿದ್ದಾರೆ.

ಗೃಹಲಕ್ಷ್ಮಿ ಯೋಜನೆಗೆ ಹೊಸ ಮಾರ್ಗಸೂಚಿ: ಫಲಾನುಭವಿ ಮಹಿಳೆ ಜೊತೆಗೆ ಪತಿ ಆಧಾರ್​​ ಲಿಂಕ್​​ ಕೂಡ ಕಡ್ಡಾಯ
ಗೃಹಲಕ್ಷ್ಮಿ ಯೋಜನೆ
Image Credit source: wcd.karnataka.gov.in

Updated on: Sep 23, 2026 | 11:41 AM

ಬೆಂಗಳೂರು, ಸೆಪ್ಟೆಂಬರ್​​ 23: ಗೃಹಲಕ್ಷ್ಮಿ ಯೋಜನೆ ಪರಿಷ್ಕರಣೆ ಸಂಬಂಧ ಹಲವು ಪ್ರಮುಖ ಅಂಶಗಳನ್ನು ಒಳಗೊಂಡ ಹೊಸ ಮಾರ್ಗಸೂಚಿಯನ್ನು ಕರ್ನಾಟಕ ಸರ್ಕಾರ ರೂಪಿಸಿದೆ. ಫಲಾನುಭವಿ ಮಹಿಳೆಯ ಆಧಾರ್​​ ಮಾತ್ರವಲ್ಲದೆ ಆಕೆಯ ಪತಿಯ ಆಧಾರ್​​ ಲಿಂಕ್​​ ಕೂಡ ಕಡ್ಡಾಯಗೊಳಿಸಲಾಗಿದೆ. ಎಸ್​​ಐರ್​​ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮರುಪರಿಶೀಲನಾ ಪ್ರಕ್ರಿಯೆ ಆರಂಭವಾಗಲಿದೆ ಎನ್ನಲಾಗಿದ್ದು, ರಾಜ್ಯದ ಫಲಾನುಭವಿಗಳಿಗೆ ಮಾತ್ರ ಯೋಜನೆ ಸೀಮಿತಗೊಳಿಸುವ ನಿಟ್ಟಿನಲ್ಲಿಯೂ ಸರ್ಕಾರ ಅಗತ್ಯ ಕ್ರಮಕ್ಕೆ ಮುಂದಾಗಿದೆ.

ಗೃಹಲಕ್ಷ್ಮಿ ಯೋಜನೆ ಪರಿಷ್ಕರಣೆ ಸಂಬಂಧ ಹೊಸ ಮಾರ್ಗಸೂಚಿಯಲ್ಲೇನಿದೆ?

    • ಮನೆಯ ಯಜಮಾನಿಯ ಆಧಾರ್ ಜೊತೆಗೆ ಯಜಮಾನನ (ಪತಿಯ) ಆಧಾರ್ ಲಿಂಕ್ ಕಡ್ಡಾಯ
    • ಬ್ಯಾಂಕ್ ಖಾತೆಯಲ್ಲಿ ಯಾವುದೇ ಸಾಲ ಇರಬಾರದು
    • ಆಧಾರ್ ಕಾರ್ಡ್‌ನಲ್ಲಿರುವಂತೆ ಹೆಸರು ಮತ್ತು ವಿಳಾಸ ಇರಬೇಕು
    • ಪಡಿತರ ಚೀಟಿ ಮತ್ತು ಆಧಾರ್ ಪರಿಶೀಲನೆ ಕಡ್ಡಾಯ
    • ಮುಖದ ದೃಢೀಕರಣ (Facial Authentication) ಕಡ್ಡಾಯ

ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಗೆ ಮೇಜರ್ ಸರ್ಜರಿ: ಮಹತ್ವದ ಅಪ್ಡೇಟ್ ನೀಡಿದ ಸಿಎಂ ಡಿಕೆ ಶಿವಕುಮಾರ್

ಕರ್ನಾಟಕ ಸರ್ಕಾರದ ವಿರುದ್ಧ ಆರ್​​. ಅಶೋಕ್​​ ಕಿಡಿ

ಇನ್ನು ಗೃಹಲಕ್ಷ್ಮಿ ಯೋಜನೆ ಪರಿಷ್ಕರಣೆ ಸಂಬಂಧ ಹೊಸ ಮಾರ್ಗಸೂಚಿಯ ಬಗ್ಗೆ ವಿಪಕ್ಷ ನಾಯಕ ಆರ್​​. ಅಶೋಕ್​​ ಕಿಡಿ ಕಾರಿದ್ದಾರೆ. ಕರ್ನಾಟಕದ ಸ್ವಾಭಿಮಾನಿ ತಾಯಂದಿರ ಮೇಲೆ ಈ ಕಾಂಗ್ರೆಸ್ ಸರ್ಕಾರಕ್ಕೆ ಏಕೆ ಇಷ್ಟೊಂದು ಅನುಮಾನ? ಕೊಡುವ 2,000ಕ್ಕೆ ಏಕಿಷ್ಟು ಕಿರುಕುಳ? ಚುನಾವಣೆ ಸಮಯದಲ್ಲಿ ಎಲ್ಲಾ ತಾಯಂದಿರಿಗೂ ಪ್ರತಿ ತಿಂಗಳು ತಪ್ಪದೇ ಖಟಾಖಟ್ 2,000 ಕೊಡುತ್ತೇವೆ ಎಂದು ಓಟು ಗಿಟ್ಟಿಸಿಕೊಂಡ ಈ ನಯವಂಚಕ ಕಾಂಗ್ರೆಸ್​​ ಸರ್ಕಾರ, ಈಗ ಹಣ ನೀಡಲಾಗದೆ ತಾಯಂದಿರನ್ನೇ ಶಂಕಿಸಿ, ಹೊಸ ಷರತ್ತುಗಳ ಮೂಲಕ ಕಿರುಕುಳ ನೀಡಲು ಹೊರಟಿದೆ ಎಂದವರು ಆರೋಪಿಸಿದ್ದಾರೆ.

ಈಗ ‘ಗೃಹಲಕ್ಷ್ಮಿ’ ಯೋಜನೆಯಡಿ ಫಲಾನುಭವಿಗಳ ಮರುಪರಿಶೀಲನೆ ನೆಪದಲ್ಲಿ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದ್ದು, ಯಜಮಾನಿಯ ಆಧಾರ್ ಜೊತೆಗೆ ‘ಪತಿಯ ಆಧಾರ್ ಲಿಂಕ್’ ಅನ್ನು ಕಡ್ಡಾಯಗೊಳಿಸಲಾಗಿದೆ. ಸಾಲದ್ದಕ್ಕೆ 17 ಪ್ರಶ್ನೆಗಳ ಹೊಸ ಅರ್ಜಿಯನ್ನಿಟ್ಟು, ಮನೆಮನೆಗೆ ಗಣತಿದಾರರನ್ನು ಕಳುಹಿಸಿ ಬಯೋಮೆಟ್ರಿಕ್ ಅಥವಾ ಫೇಶಿಯಲ್ ದೃಢೀಕರಣ ಮಾಡುವ ಹುನ್ನಾರ ನಡೆಸಲಾಗುತ್ತಿದೆ. ಬೊಕ್ಕಸ ಖಾಲಿಯಾಗಿ, ಯೋಜನೆಯ ಹಣ ಪಾವತಿಸಲು ದಾರಿಕಾಣದೆ, ತಾಯಂದಿರಿಗೆ ನೀಡುವ ಹಣವನ್ನು ಕಡಿತಗೊಳಿಸಲು ಈ ರೀತಿಯ ಹಿಂಬಾಗಿಲ ‘ಫಿಲ್ಟರ್’ ತಂತ್ರ ರೂಪಿಸಲಾಗಿದೆ ಎನ್ನುವುದು ಸುಸ್ಪಷ್ಟ. ಚುನಾವಣೆಗೆ ಮುನ್ನ “ಷರತ್ತು ರಹಿತ ಗ್ಯಾರಂಟಿ” ಎಂದವರು ಈಗ ತಾಯಂದಿರನ್ನು ಅಪರಾಧಿಗಳಂತೆ ನೋಡಿ ಪದೇ ಪದೇ ತನಿಖೆಗೆ ಒಳಪಡಿಸುತ್ತಿರುವುದು ಸ್ವಾಭಿಮಾನಿ ಮಹಿಳೆಯರಿಗೆ ಮಾಡುವ ಘೋರ ಅಪಮಾನ. ಕೊಡುವ ಚಿಲ್ಲರೆ ಹಣಕ್ಕೆ ತಾಯಂದಿರನ್ನು ಅನುಮಾನದಿಂದ ನೋಡಿ, ಪದೇ ಪದೇ ಮನೆ ಮನೆಗೆ ಬಂದು, ದಿನಕ್ಕೊಂದು ಹೊಸ ದಾಖಲೆ ಕೇಳಿ, ಕಚೇರಿ ಅಲೆಸಿ ಕಿರುಕುಳ ನೀಡುವುದನ್ನು ತಕ್ಷಣವೇ ನಿಲ್ಲಿಸಿ. ಈ ನಿರರ್ಥಕ ಮಾರ್ಗಸೂಚಿಗಳನ್ನು ಹಿಂಪಡೆಯದಿದ್ದರೆ, ಕನ್ನಡ ತಾಯಂದಿರ ಪರವಾಗಿ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ನಡೆಸಿ ಈ ಸರ್ಕಾರದ ‘ಅಸಲಿ ಮುಖ’ವನ್ನು ಬಟಾಬಯಲು ಮಾಡುತ್ತೇವೆ ಎಂದವರು ಎಚ್ಚರಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 11:39 am, Wed, 23 September 26

Loading...
Unable to load recommendations.
Follow Us