ಇರಾನ್​-ಇಸ್ರೇಲ್ ಯುದ್ಧದ ತೀವ್ರತೆ ಕಡಿಮೆಯಾದ್ರೂ ತಪ್ಪದ ಸಂಕಷ್ಟ: 6 ತಿಂಗಳಿಂದ ಸಿಗುತ್ತಿಲ್ಲ ಹೊಸ ಎಲ್​​​ಪಿಜಿ ಸಂಪರ್ಕ

ಕಳೆದ ಆರು ತಿಂಗಳಿಂದ ಹೊಸ ಎಲ್‌ಪಿಜಿ ಸಂಪರ್ಕಗಳು ಸ್ಥಗಿತಗೊಂಡಿದ್ದು, ಗ್ರಾಹಕರು ತೀವ್ರ ಪರದಾಟ ನಡೆಸಿದ್ದಾರೆ. ಹೊಸ ಸಿಲಿಂಡರ್‌ಗೆ ಭಾರೀ ಬೇಡಿಕೆಯಿದ್ದರೂ, ಕೇಂದ್ರ ಸರ್ಕಾರದಿಂದ ಇನ್ನೂ ಅನುಮೋದನೆ ದೊರೆತಿಲ್ಲ. ಮಾರ್ಚ್‌ನಿಂದ ಸ್ಥಗಿತಗೊಂಡಿರುವ ಪ್ರಕ್ರಿಯೆ ಪುನರಾರಂಭಗೊಳ್ಳದಿರುವುದರಿಂದ ಸಾವಿರಾರು ಅರ್ಜಿಗಳು ಬಾಕಿ ಉಳಿದಿದ್ದು, ಜನರಿಗೆ ತೀವ್ರ ಅನಾನುಕೂಲವಾಗಿದೆ.

ಇರಾನ್​-ಇಸ್ರೇಲ್ ಯುದ್ಧದ ತೀವ್ರತೆ ಕಡಿಮೆಯಾದ್ರೂ ತಪ್ಪದ ಸಂಕಷ್ಟ: 6 ತಿಂಗಳಿಂದ ಸಿಗುತ್ತಿಲ್ಲ ಹೊಸ ಎಲ್​​​ಪಿಜಿ ಸಂಪರ್ಕ
ಗ್ಯಾಸ್​ ಸಿಲಿಂಡರ್​
Image Credit source: tv9 kannada
Edited By:

Updated on: Aug 28, 2026 | 11:17 PM

ಬೆಂಗಳೂರು, ಆಗಸ್ಟ್​​ 28: ಇಸ್ರೇಲ್-ಇರಾನ್ ನಡುವಿನ ಯುದ್ಧದ ಪರಿಣಾಮ ದೇಶದಲ್ಲಿ ಎದುರಾಗಿದ್ದ ಎಲ್‌ಪಿಜಿ ಗ್ಯಾಸ್ (LPG cylinder) ಅಭಾವ ಸಾರ್ವಜನಿಕರನ್ನು ಇನ್ನಿಲ್ಲದಂತೆ ಕಾಡಿತ್ತು. ಸದ್ಯ ಹಳೆಯ ಗ್ರಾಹಕರಿಗೆ ಸಿಲಿಂಡರ್ ಪೂರೈಕೆ ಕೊಂಚ ನಿರಾಳತೆ ತಂದಿದ್ದರೂ, ಹೊಸದಾಗಿ ಗೃಹಬಳಕೆಯ ಎಲ್‌ಪಿಜಿ ಸಂಪರ್ಕ ಪಡೆಯಲು ಅರ್ಜಿ ಸಲ್ಲಿಸಿರುವ ಗ್ರಾಹಕರ ಪಾಡು ಮಾತ್ರ ಹೇಳತೀರದಾಗಿದೆ. ಕಳೆದ ಆರು ತಿಂಗಳಿಂದ ಹೊಸ ಸಂಪರ್ಕಗಳ ಹಂಚಿಕೆ ಸಂಪೂರ್ಣ ಸ್ಥಗಿತಗೊಂಡಿದ್ದು, ದಿನಬಳಕೆಯ ಅತ್ಯಗತ್ಯ ವಸ್ತುವಿಗಾಗಿ ಜನಸಾಮಾನ್ಯರು ಕಚೇರಿಗಳಿಗೆ ಅಲೆಯುವ ದುಸ್ಥಿತಿ ನಿರ್ಮಾಣವಾಗಿದೆ.

ಹೊಸ ಎಲ್‌ಪಿಜಿ ಸಂಪರ್ಕ ಸಿಗದೆ ಜನರು ಪರದಾಟ

ಹಲವು ತಿಂಗಳ ಹಿಂದೆ ರಾಜ್ಯದಲ್ಲಿ ಎದುರಾಗಿದ್ದ ಎಲ್​​ಪಿಜಿ ಗ್ಯಾಸ್ ಅಭಾವದಿಂದ ನರಳಾಡದ ಜನರಿಲ್ಲ. ಕೊನೆಗೂ ಹೇಗೋ ನಿಧಾನಗತಿಯಲ್ಲಿ ಬೇಡಿಕೆಗೆ ತಕ್ಕಂತೆ ಎಲ್​​​ಪಿಜಿ ಸಿಲಿಂಡರ್ ಪೂರೈಕೆ ಮಾಡಲಾಗುತ್ತಿದೆ. ಆದರೆ ಮತ್ತೊಂದೆಡೆ ಹೊಸ ಗೃಹ ಬಳಕೆ ಎಲ್​​ಪಿಜಿ ಸಿಲಿಂಡರ್​ಗಳಿಗೆ ಅರ್ಜಿ ಸಲ್ಲಿಸುವ ಗ್ರಾಹಕರು ಕಳೆದ 6 ತಿಂಗಳಿಂದ ತೀವ್ರ ನಿರಾಶೆಯಿಂದಲೇ ಕಾಲ ದೂಡುತ್ತಿದ್ದಾರೆ.

ಕೇಂದ್ರದ ಅನುಮೋದನೆಗೆ ಬ್ರೇಕ್: ರಾಶಿ ಬಿದ್ದ ಅರ್ಜಿಗಳು

ಹೊಸ ಗೃಹಬಳಕೆಯ ಸಿಲಿಂಡರ್‌ಗಳಿಗೆ ದಿನೇ ದಿನೆ ಬೇಡಿಕೆ ಹೆಚ್ಚುತ್ತಿದ್ದರೂ, ಕೇಂದ್ರ ಸರ್ಕಾರದಿಂದ ಹೊಸ ಸಂಪರ್ಕಗಳ ಹಂಚಿಕೆಗೆ ಅಗತ್ಯ ಅನುಮೋದನೆ ದೊರೆತಿಲ್ಲ. ಕಳೆದ ಮಾರ್ಚ್ ತಿಂಗಳಿಂದ ಸ್ಥಗಿತಗೊಂಡಿರುವ ಅನುಮೋದನೆ ಪ್ರಕ್ರಿಯೆ ಈವರೆಗೂ ಪುನರಾರಂಭವಾಗಿಲ್ಲ.

ಇದನ್ನೂ ಓದಿ: ಗ್ಯಾಸ್ ಸಿಲಿಂಡರ್ ಬಳಸುವವರಿಗೆ ಹೊಸ ರೂಲ್ಸ್‌: ಗ್ರಾಹಕರು ಮಾಡಬೇಕಾಗಿದ್ದಿಷ್ಟೇ!

ಇದರ ಪರಿಣಾಮವಾಗಿ ನಗರದ ಬಹುತೇಕ ಪ್ರತಿ ಗ್ಯಾಸ್ ಏಜೆನ್ಸಿಗಳಲ್ಲಿ 200ರಿಂದ 300ಕ್ಕೂ ಅಧಿಕ ಅರ್ಜಿಗಳು ವಿಲೇವಾರಿಯಾಗದೆ ಧೂಳು ಹಿಡಿಯುತ್ತಿವೆ. ನಿತ್ಯ ಗ್ಯಾಸ್ ಏಜೆನ್ಸಿಗಳಿಗೆ ಜನರು ಎಡತಾಕುತ್ತಿದ್ದಾರೆ.

ಹೊಸದಾಗಿ ಮದುವೆಯಾದ ಕುಟುಂಬಗಳ ಪರದಾಟ

ಕಳೆದ ಆರು ತಿಂಗಳ ಅವಧಿಯಲ್ಲಿ ಮದುವೆಯಾಗಿ ಪ್ರತ್ಯೇಕ ಮನೆ ಮಾಡಿಕೊಂಡವರು ಹಾಗೂ ಉದ್ಯೋಗ ಅರಸಿ ನಗರಕ್ಕೆ ಬಂದು ಹೊಸ ಸಂಸಾರ ಹೂಡಿದ ಕುಟುಂಬಗಳು ಇದರಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಗ್ಯಾಸ್ ಸಂಪರ್ಕವಿಲ್ಲದೆ ಅಡುಗೆ ಮಾಡಲು ಹೆಣಗಾಡುತ್ತಿರುವ ಗ್ರಾಹಕರು ದಿಕ್ಕು ತೋಚದಂತಾಗಿದ್ದಾರೆ. ಸಂಕಷ್ಟದಲ್ಲಿರುವ ಈ ಕುಟುಂಬಗಳ ಪರಿಸ್ಥಿತಿಯನ್ನು ಅರಿತು, ಕೇಂದ್ರ ಸರ್ಕಾರವು ಕೂಡಲೇ ಈ ನಿಲುವನ್ನು ಸಡಿಲಿಸಿ ಹೊಸ ಸಂಪರ್ಕಗಳ ವಿತರಣೆಗೆ ಹಸಿರು ನಿಶಾನೆ ತೋರಬೇಕೆಂಬ ಕೂಗು ಸಾರ್ವಜನಿಕ ವಲಯದಲ್ಲಿ ಬಲವಾಗಿ ಕೇಳಿಬರುತ್ತಿದೆ.

Domestic LPG Connection: 6 ತಿಂಗಳಿಂದ ಸಿಗ್ತಿಲ್ಲ ಹೊಸ ಎಲ್ ಪಿಜಿ ಸಂಪರ್ಕ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:52 pm, Fri, 28 August 26

ಲಕ್ಷ್ಮಿ ನರಸಿಂಹ ಸ್ವಾಮಿ ಎಲ್.

ಲಕ್ಷ್ಮಿ ನರಸಿಂಹ ಸ್ವಾಮಿ. ಎಲ್ ಆದ ನಾನು ಮೂಲತಃ ಬೆಂಗಳೂರಿನವಾಗಿದ್ದು, ಪೂರ್ವ ತಾಲೂಕಿನ ದೊಡ್ಡಗುಬ್ಬಿ ಎಂಬ ಗ್ರಾಮದಲ್ಲಿ ವಾಸವಿದ್ದೇನೆ. ಕಳೆದ 6 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಬೆಂಗಳೂರು ವರದಿಗಾರನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಐತಿಹಾಸಿಕ ಸರ್ಕಾರಿ ಕಲಾ ಕಾಲೇಜಿನಲ್ಲಿ ಸ್ನಾತಕ ಪದವಿ ಪೂರೈಸಿದ ಬಳಿಕ ಬೆಂಗಳೂರು ವಿಶ್ವವಿದ್ಯಾಲಯ (ಜ್ಞಾನಭಾರತಿ) ದಲ್ಲಿ M.A (ಪತ್ರಿಕೋದ್ಯಮ ಮತ್ತು ಸಂವಹನ) ಸ್ನಾತಕೋತ್ತರ ಪದವಿ ಪೂರೈಸಿದ್ದೇನೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಡಿಯ ನಗರ ಪಾಲಿಕೆಗಳು, ಬೆಸ್ಕಾಂ, ಜಲಮಂಡಳಿ, ಆಹಾರ, ಆರೋಗ್ಯ, ಶಿಕ್ಷಣ ಸೇರಿ ವಿವಿಧ ಕ್ಷೇತ್ರಗಳಲ್ಲಿ ನಾಗರಿಕರಿಗೆ ಎದುರಾಗುವ ಸಮಸ್ಯೆಗಳಿಗೆ, ಸಂಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಈವರೆಗೂ ಶ್ರಮವಹಿಸಿದ್ದು, ಮುಂದಿನ ದಿನಗಳಲ್ಲೂ ನಾಗರಿಕರ ಸೇವೆಯನ್ನೂ ಮುಂದುವರೆಸುವ ಗುರಿಯೊಂದಿಗೆ ಉತ್ತಮ ಸಮಾಜಕ್ಕಾಗಿ ಬದ್ಧನಾಗಿದ್ದೇನೆ..

Read More
Loading...
Unable to load recommendations.
Follow Us