
ಬೆಂಗಳೂರು, ಜೂನ್ 17: ರಾಜ್ಯದ ಆನೆ ಶಿಬಿರಗಳು, ಸೆರೆಯಲ್ಲಿರುವ ಆನೆಗಳ ನಿರ್ವಹಣಾ ಕೇಂದ್ರಗಳು ಹಾಗೂ ಸಾರ್ವಜನಿಕ ವೀಕ್ಷಣಾ ಕೇಂದ್ರಗಳಿಗಾಗಿ ಕರ್ನಾಟಕ ಅರಣ್ಯ ಇಲಾಖೆ ಮೊದಲ ಬಾರಿಗೆ ಕರ್ನಾಟಕ ಆನೆ ಶಿಬಿರ ಸುರಕ್ಷತಾ ನಿಯಮಾವಳಿ (Karnataka Elephant Camp Safety Protocol) ಜಾರಿಗೊಳಿಸಿದೆ. ಇದರನ್ವಯ ಇನ್ನು ಮುಂದೆ ಪ್ರವಾಸಿಗರು ಆನೆಗಳನ್ನು ವೀಕ್ಷಿಸಲು ಕನಿಷ್ಠ 30 ಅಡಿ ಅಂತರ ಕಾಯ್ದುಕೊಳ್ಳಬೇಕು. ಆನೆಗಳಿಗೆ ಸ್ನಾನ ಮಾಡಿಸುವುದು, ಮುಟ್ಟುವುದು ಅಥವಾ ಆಹಾರ ನೀಡುವುದು ಸಂಪೂರ್ಣ ನಿಷೇಧವಾಗಿರಲಿದೆ.
ಪ್ರವಾಸಿಗರು ಗುರುತಿಸಲಾದ ಗ್ರೀನ್ ಝೋನ್ (ವೀಕ್ಷಣಾ ಪ್ರದೇಶ)ನಲ್ಲೇ ನಿಂತು ಆನೆಗಳನ್ನು ವೀಕ್ಷಿಸಬೇಕು. ಆನೆಗಳು ಹಾಗೂ ಪ್ರವಾಸಿಗರ ಚಟುವಟಿಕೆಗಳನ್ನು ಸಿಸಿಟಿವಿ ಕ್ಯಾಮೆರಾಗಳ ಮೂಲಕ ಮೇಲ್ವಿಚಾರಣೆ ಮಾಡಿ ದಾಖಲಿಸಲಾಗುತ್ತದೆ.ಸಾರ್ವಜನಿಕ ವೀಕ್ಷಣೆಗಾಗಿ ಯಾವುದೇ ಶಿಬಿರದಲ್ಲಿ 10ಕ್ಕಿಂತ ಹೆಚ್ಚು ಆನೆಗಳನ್ನು ಪ್ರದರ್ಶಿಸಲು ಅವಕಾಶ ಇರುವುದಿಲ್ಲ.
ಇದನ್ನೂ ಓದಿ: ದುಬಾರೆ ಶಿಬಿರದಲ್ಲಿ ಸಾಕಾನೆಗಳ ಕಾದಾಟದ ವೇಳೆ ಅವುಗಳ ನಡುವೆ ಸಿಲುಕಿ ಮಹಿಳೆ ಸಾವು
ಮೇ 19ರಂದು ದುಬಾರೆ ಆನೆ ಶಿಬಿರದಲ್ಲಿ ತಮಿಳುನಾಡಿನ ಪ್ರವಾಸಿಗರೊಬ್ಬರು ಮೃತಪಟ್ಟಿದ್ದ ಘಟನೆ ಹಿನ್ನೆಲೆಯಲ್ಲಿ ಈ ಸುರಕ್ಷತಾ ನಿಯಮಾವಳಿಯನ್ನು ಜಾರಿಗೊಳಿಸಲಾಗಿದೆ. ಶಿಬಿರಗಳಿಗೆ ನಿಯಮಗಳನ್ನು ಪಾಲಿಸಲು 15 ದಿನಗಳ ಗಡುವು ನೀಡಲಾಗಿದೆ. ಬಳಿಕ ಪರಿಶೀಲನೆ ನಡೆಸಿ ಪ್ರಮಾಣೀಕರಣ ನೀಡಲಾಗುವುದು. ಅನುಮತಿ ಸಿಗುವವರೆಗೆ ಶಿಬಿರಗಳ ಕಾರ್ಯಾಚರಣೆಗೆ ಅವಕಾಶ ಇರುವುದಿಲ್ಲ ಎಂದು ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಕುಮಾರ್ ಪುಷ್ಕರ್ ಅವರು, ತಿಳಿಸಿದ್ದಾರೆ.
ಹೊಸ ನಿಯಮಗಳ ಅನ್ವಯ ಶಿಬಿರದ ಸಾಮರ್ಥ್ಯ, ಆನೆಗಳ ಸಂಖ್ಯೆ ಹಾಗೂ ಪ್ರವಾಸಿಗರ ದಟ್ಟಣೆ ಆಧರಿಸಿ ಪ್ರವಾಸಿಗರ ಬ್ಯಾಚ್‌ಗಳು ಹಾಗೂ ಸಮಯ ನಿಗದಿಪಡಿಸಲಾಗುತ್ತದೆ. ಗ್ರೀನ್ ಝೋನ್‌ನಲ್ಲಿ ಒಂದೇ ಸಮಯದಲ್ಲಿ 50 ರಿಂದ 75 ಪ್ರವಾಸಿಗರಿಗೆ ಮಾತ್ರ ಅವಕಾಶ ಇರಲಿದ್ದು, ವೀಕ್ಷಣಾ ಅವಧಿ 20 ರಿಂದ 30 ನಿಮಿಷಕ್ಕೆ ಸೀಮಿತವಾಗಿರಲಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.