ದುಬಾರೆ ಶಿಬಿರದಲ್ಲಿ ಸಾಕಾನೆಗಳ ಕಾದಾಟದ ವೇಳೆ ಅವುಗಳ ನಡುವೆ ಸಿಲುಕಿ ಮಹಿಳೆ ಸಾವು
ಕೊಡಗು ಜಿಲ್ಲೆಯ ದುಬಾರೆ ಆನೆ ಶಿಬಿರದಲ್ಲಿ ಸಾಕಾನೆಗಳ ಕಾದಾಟದ ವೇಳೆ ಪ್ರವಾಸಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಚೆನ್ನೈ ಮೂಲದ 33 ವರ್ಷದ ಮಹಿಳೆ ಕುಟುಂಬ ಸಮೇತ ಪ್ರವಾಸಕ್ಕೆ ಬಂದಿದ್ದ ವೇಳೆ, ಕಾವೇರಿ ನದಿಯಲ್ಲಿ ಆನೆಗಳು ಕಾದಾಟ ನಡೆಸಿವೆ. ಈ ಸಂದರ್ಭ ಆನೆ ಬಿದ್ದ ಪರಿಣಾಮ ಮಹಿಳೆ ಅಡಿಗೆ ಸಿಲುಕಿ ಗಂಭೀರ ಗಾಯಗೊಂಡು ನಿಧನರಾಗಿದ್ದಾರೆ. ಘಟನೆ ಸಂಬಂಧ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ.

ಮಡಿಕೇರಿ, ಮೇ 18: ಸಾಕಾನೆಗಳ ಕಾದಾಟದ ವೇಳೆ ಅವುಗಳ ನಡುವೆ ಸಿಲುಕಿ ಮಹಿಳೆಯೋರ್ವರು ದಾರುಣವಾಗಿ ಮೃತಪಟ್ಟಿರುವ ಘಟನೆ ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ನಂಜರಾಯಪಟ್ಟಣದ ದುಬಾರೆ ಶಿಬಿರದಲ್ಲಿ ನಡೆದಿದೆ. ಒಂದು ಆನೆ ದಂತದಿಂದ ತಿವಿದ ಪರಿಣಾಮ ಮತ್ತೊಂದು ಆನೆ ನೆಲಕ್ಕುರಿಳಿದೆ. ಈ ವೇಳೆ ಅಲ್ಲೇ ಇದ್ದ ಮಹಿಳೆ ಆನೆಯಡಿ ಸಿಲುಕಿದ್ದಾರೆ. ಗಂಭೀರ ಗಾಯಗೊಂಡಿದ್ದ ಆಕೆಯನ್ನು ಕುಶಾಲನಗರ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ. ಮೃತರನ್ನು ಚೆನ್ನೈ ಮೂಲದ ಜಿನ್ಶು(33) ಎಂದು ಗುರುತಿಸಲಾಗಿದೆ.
ಮುಖ್ಯಾಂಶಗಳು
- ಸಾಕಾನೆಗಳ ಕಾದಾಟದ ವೇಳೆ ಅವುಗಳ ನಡುವೆ ಸಿಲುಕಿ ಮಹಿಳೆ ಸಾವು
- ಕುಶಾಲನಗರ ತಾಲೂಕಿನ ನಂಜರಾಯಪಟ್ಟಣದ ದುಬಾರೆ ಶಿಬಿರದಲ್ಲಿ ಘಟನೆ
- ಪ್ರವಾಸಕ್ಕೆಂದು ಬಂದು ಪ್ರಾಣ ಕಳೆದುಕೊಂಡ ಚೆನ್ನೈ ಮೂಲದ ಜಿನ್ಶು (33)
ಆಗಿದ್ದೇನು?
ಚೆನ್ನೈ ಮೂಲದ ಜಿನ್ಶು ಎಂಬ ಮಹಿಳೆ ಕುಟುಂಬ ಸಮೇತ ನಂಜರಾಯಪಟ್ಟಣದ ದುಬಾರೆ ಆನೆ ಶಿಬಿರಕ್ಕೆ ಪ್ರವಾಸಕ್ಕೆ ಬಂದಿದ್ದರು. ಅವರು ಕಾವೇರಿ ನೀರಲ್ಲಿ ಆಟವಾಡುತ್ತಿರುವ ಸಂದರ್ಭ ಮಾವುತರು ಕಂಜನ್ ಮತ್ತು ಮಾರ್ತಾಂಡ ಆನೆಗಳನ್ನು ಸ್ನಾನಕ್ಕೆಂದು ಕರೆತಂದಿದ್ದರು. ಈ ವೇಳೆ ಆನೆಗಳ ನಡುವೆ ಕಾದಾಟ ಶುರುವಾಗಿದೆ. ದುರ್ದೈವ ಎಂಬಂತೆ ಅಲ್ಲೇ ಇದ್ದ ಪ್ರವಾಸಿ ಮಹಿಳೆಯ ಮೇಲೆ ಮಾರ್ತಾಂಡ ಆನೆ ಬಿದ್ದಿದ್ದು, ನೆಲಕ್ಕೆ ಅಪ್ಪಳಿಸಿದ ಜಿನ್ಶು ಅವರ ತಲೆಗೆ ಗಂಭೀರ ಗಾಯವಾದ ಪರಿಣಾಮ ಅವರು ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಪ್ರವಾಸಿಗರೇ ಎಚ್ಚರ! 2000ಕ್ಕೂ ಹೆಚ್ಚು ಅಕ್ರಮ ಹೋಂಸ್ಟೇಗಳ ಕಪಿಮುಷ್ಠಿಯಲ್ಲಿ ಕೊಡಗು; ಕಠಿಣ ಕ್ರಮಕ್ಕೆ ಆಗ್ರಹ
ರಕ್ಷಣೆಗೆ ಹರಸಾಹಸ
ಆನೆಗಳ ಕಾದಾಟದ ವೇಳೆ ಅವುಗಳ ಕಾಲಿನ ಸಮೀಪ ಸಿಲುಕಿಕೊಂಡಿದ್ದ ಮಹಿಳೆ ಜಿನ್ಶು ರಕ್ಷಣೆಗೆ ಶಕ್ತಿಮೀರಿ ಪ್ರಯತ್ನಿಸಿದರೂ ಅದು ಸಾಧ್ಯವಾಗಿಲ್ಲ. ಆನೆಗಳ ನಿಯಂತ್ರಣಕ್ಕೆ ಮಾವುತರು ಸತತ ಪ್ರಯತ್ನ ನಡೆಸಿರುವ ಹೊರತಾಗಿ, ಮಹಿಳೆಯ ರಕ್ಷಣೆಗೆ ಮಗುವನ್ನು ಕೈನಲ್ಲಿ ಹಿಡಿದ್ದ ವ್ಯಕ್ತಿ ಸೇರಿ ಕೆಲವರು ಯತ್ನಿಸಿದರಾದರೂ ಅದು ಫಲಪ್ರದವಾಗಿಲ್ಲ. ಅಲ್ಲೇ ಇದ್ದ ಇನ್ನು ಕೆಲ ಪ್ರವಾಸಿಗರು ಆನೆಗಳ ಕಾದಾಟಕ್ಕೆ ಬೆದರಿ ಕಾಲ್ಕಿತ್ತು ಓಡಿದ್ದು, ಅದೃಷ್ಟವಶಾತ್ ಎಂಬಂತೆ ಅವರೆಲ್ಲ ಬಚಾವ್ ಆಗಿದ್ದಾರೆ. ಆದರೆ ಪ್ರವಾಸಕ್ಕೆಂದು ಬಂದಿದ್ದ ಅಮಾಯಕ ಮಹಿಳೆಯ ಜೀವವನ್ನು ಸಾಕಾನೆಗಳು ಬಲಿ ಪಡೆದಿವೆ. ಘಟನೆ ಸಂಬಂಧ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:32 pm, Mon, 18 May 26
