
ಬೆಂಗಳೂರು, ಅಕ್ಟೋಬರ್ 12: ವಿಬಿ-ಜಿ ರಾಮ್‌ಜಿ (ಉದ್ಯೋಗ ಖಾತ್ರಿ) ಯೋಜನೆಯ ಕಾರ್ಮಿಕರಿಗೆ ಕೂಲಿ ಹಣ ಪಾವತಿಸುವಲ್ಲಿ ವಿಳಂಬ ಹಾಗೂ ನಿರ್ಲಕ್ಷ್ಯ ತೋರಿದ 308 ಪಿಡಿಒ, 74 ಇಒ, 12 ಉಪ ಕಾರ್ಯದರ್ಶಿಗಳಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದಾರೆ. ಇಲಾಖೆಯ ಕಾರ್ಯದರ್ಶಿ ಮತ್ತು 12 ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಈ ಸಂಬಂಧ ಲಿಖಿತ ಸೂಚನೆ ನೀಡಲಾಗಿದೆ.
ವಿಬಿ-ಜಿ ರಾಮ್‌ಜಿ ಅಡಿ ಕೆಲಸ ಮಾಡುವ ಫಲಾನುಭವಿಗಳಿಗೆ 15 ದಿನಗಳ ಒಳಗಾಗಿ ಕೂಲಿ ಹಣ ಪಾವತಿಸದಿದ್ದರೆ ಸಂಬಂಧಿತ ಪಿಡಿಓಗಳನ್ನೇ ಹೊಣೆ ಮಾಡಲಾಗುವುದು ಎಂಬ ಸ್ಪಷ್ಟ ಸೂಚನೆ ಇದೆ. ಹೀಗಿದ್ದರೂ 12 ಜಿಲ್ಲೆಗಳ 311 ಗ್ರಾಮ ಪಂಚಾಯತಿಗಳಲ್ಲಿ ವಿಳಂಬ ಆಗಿರುವ ಬಗ್ಗೆ ಸಚಿವ ಈಶ್ವರ್ ಖಂಡ್ರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗ್ರಾಮ ಪಂಚಾಯತಿಗಳಿಗೆ ವಿಬಿ-ಜಿ ರಾಮ್‌ಜಿ ಕೂಲಿ ಹಣ ಬಿಡುಗಡೆ ಆಗಿದ್ದರೂ, ಕೆಲಸ ಮಾಡಿದ ಅಕುಶಲ ಕಾರ್ಮಿಕರಿಗೆ ಕೂಲಿ ಹಣ ಪಾವತಿಸದಿರುವುದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಈಶ್ವರ್ ಖಂಡ್ರೆ, ಅಧಿಕಾರಿಗಳ ಈ ನಿರ್ಲಕ್ಷ್ಯದಿಂದಾಗಿ, ಬರ ಪರಿಸ್ಥಿತಿಯಲ್ಲೂ ಜನ ವಿಬಿ-ಜಿ ರಾಮ್‌ಜಿ ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದು, ಗುಳೆ ಹೋಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯಲ್ಲಿ 23, ಬೆಳಗಾವಿಯಲ್ಲಿ 52, ಚಾಮರಾಜನಗರದಲ್ಲಿ 13, ಚಿಕ್ಕಮಗಳೂರು ಜಿಲ್ಲೆಯಲ್ಲಿ 14, ದಕ್ಷಿಣ ಕನ್ನಡದಲ್ಲಿ 15, ಹಾಸನ ಜಿಲ್ಲೆಯಲ್ಲಿ 47, ಕೊಡಗು ಜಿಲ್ಲೆ 25, ಮಂಡ್ಯ ಜಿಲ್ಲೆ 13, ಮೈಸೂರು ಜಿಲ್ಲೆಯಲ್ಲಿ 53, ಶಿವಮೊಗ್ಗ ಜಿಲ್ಲೆ 14, ಉಡುಪಿ ಜಿಲ್ಲೆಯಲ್ಲಿ 23, ವಿಜಯಪುರ ಜಿಲ್ಲೆಯಲ್ಲಿ 16 ಸೇರಿ ಒಟ್ಟು 311 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೆಲಸ ಮಾಡಿದ ಅಕುಶಲ ಕಾರ್ಮಿಕರಿಗೆ ಕೂಲಿ ಹಣ ಪಾವತಿಸುವಲ್ಲಿ ವಿಳಂಬ ಮತ್ತು ನಿರ್ಲಕ್ಷ್ಯವಹಿಸಲಾಗಿದೆ.
ಇದನ್ನೂ ಓದಿ: ವಿಬಿ-ಜಿ-ರಾಮ್ ಜಿ ಜಾರಿ: 125 ದಿನ ಕೆಲಸದ ಗ್ಯಾರಂಟಿ ಜೊತೆ ವೇತನ ಹೆಚ್ಚಳ, ಕರ್ನಾಟಕದಲ್ಲಿ ಎಷ್ಟು?
ಈ ಹಿನ್ನೆಲೆಯಲ್ಲಿ ಎಲ್ಲಾ ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಗಳು, ಮೇಲ್ವಿಚಾರಣೆ ಮಾಡಬೇಕಾದ ಜವಾಬ್ದಾರಿ ಹೊತ್ತ ತಾಲೂಕು ಕಾರ್ಯನಿರ್ವಹಣಾಧಿಕಾರಿಗಳು ಹಾಗೂ 12 ಜಿಲ್ಲಾ ಪಂಚಾಯತಿಗಳ ಉಪ ಕಾರ್ಯದರ್ಶಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.