ವೈದ್ಯರ ಸಮ್ಮೇಳನದಲ್ಲಿ ಭಾಗಿಯಾದ ಬಳಿಕ ನನಗೆ ರೋಗ ಲಕ್ಷಣ ಪತ್ತೆಯಾಗಿತ್ತು, ಒಮಿಕ್ರಾನ್ ಸೋಂಕಿತ ವೈದ್ಯ ಬಿಚ್ಚಿಟ್ಟ ಮಾಹಿತಿ
ಕರ್ನಾಟಕದ ಇಬ್ಬರಲ್ಲಿ ಒಮಿಕ್ರಾನ್ ಸೋಂಕು ಇರುವುದು ದೃಢಪಟ್ಟಿದೆ. 66 ವರ್ಷದ ವೃದ್ಧ, 46 ವರ್ಷದ ವ್ಯಕ್ತಿಗೆ ಒಮಿಕ್ರಾನ್ ಸೋಂಕು ತಗುಲಿದೆ ಅಂತ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿತ್ತು. ಸದ್ಯ ಒಮಿಕ್ರಾನ್ ವೈರಸ್‌ಗೆ ಚಿಕಿತ್ಸೆ ಪಡೆಯುತ್ತಿರುವ 46 ವರ್ಷದ ವೈದ್ಯ ಸೋಂಕಿನ ಲಕ್ಷಣದ ಬಗ್ಗೆ ಮಾಹಿತಿ ನೀಡಿದ್ದಾರೆ.
ಬೆಂಗಳೂರು: ದಕ್ಷಿಣ ಆಫ್ರಿಕಾದಲ್ಲಿ ಹುಟ್ಟಿ ಜಗತ್ತನ್ನೇ ನಡುಗಿಸಿರೋ ಒಮಿಕ್ರಾನ್, ಕರ್ನಾಟಕಕ್ಕೂ ವಕ್ಕರಿಸಿದೆ. ರಾಜ್ಯದಲ್ಲಿ ಎರಡು ಕೇಸ್ ಪತ್ತೆಯಾಗಿದೆ ಅನ್ನೋದು ಗೊತ್ತಾಗ್ತಿದ್ದಂತೆ ಸರ್ಕಾರ ಅಲರ್ಟ್ ಆಗಿದೆ. ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಸಚಿವರು, ತಜ್ಞರು ಮತ್ತು ಅಧಿಕಾರಿಗಳ ಸಭೆ ನಡೆಸಿದ್ದು, ಮತ್ತೆ ಕಟ್ಟುಪಾಡುಗಳನ್ನ ಬಿಗಿಗೊಳಿಸೋಕೆ, ಹಳೇ ನಿಯಮಗಳನ್ನ ಜಾರಿಗೆ ತರೋಕೆ ಹೊಸ ಅಸ್ತ್ರ ಪ್ರಯೋಗಿಸಿದೆ. ಸದ್ಯ ಒಮಿಕ್ರಾನ್ ವೈರಸ್ ಕಂಡು ಬಂದವರಲ್ಲಿ ಒಬ್ಬರಾದ ವೈದ್ಯ ಸೋಂಕಿನ ಲಕ್ಷಣಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಕರ್ನಾಟಕದ ಇಬ್ಬರಲ್ಲಿ ಒಮಿಕ್ರಾನ್ ಸೋಂಕು ಇರುವುದು ದೃಢಪಟ್ಟಿದೆ. 66 ವರ್ಷದ ವೃದ್ಧ, 46 ವರ್ಷದ ವ್ಯಕ್ತಿಗೆ ಒಮಿಕ್ರಾನ್ ಸೋಂಕು ತಗುಲಿದೆ ಅಂತ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿತ್ತು. ಸದ್ಯ ಒಮಿಕ್ರಾನ್ ವೈರಸ್‌ಗೆ ಚಿಕಿತ್ಸೆ ಪಡೆಯುತ್ತಿರುವ 46 ವರ್ಷದ ವೈದ್ಯ ಸೋಂಕಿನ ಲಕ್ಷಣದ ಬಗ್ಗೆ ಮಾಹಿತಿ ನೀಡಿದ್ದಾರೆ. ನನಗೆ ಸೋಂಕು ಬಂದು 13 ದಿನ ಆಗಿದೆ. ಸದ್ಯಕ್ಕೆ ನಾನು ಆರೋಗ್ಯವಾಗಿದ್ದೇನೆ ನನ್ನಲ್ಲಿ ಸಣ್ಣ ಪುಟ್ಟ ರೋಗ ಲಕ್ಷಣಗಳಿವೆ. ನನಗೆ ಯಾರಿಂದ ಸೋಂಕು ಬಂತೆಂದು ಗೊತ್ತಿಲ್ಲ. ನಾನು ಯಾವುದೇ ವಿದೇಶ ಪ್ರಯಾಣ ಮಾಡಿಲ್ಲ. ನವೆಂಬರ್‌ನಲ್ಲಿ ವೈದ್ಯರ ಸಮ್ಮೇಳನದಲ್ಲಿ ಭಾಗಿಯಾಗಿದ್ದೆ. ಆ ಸಭೆಗೆ ದೇಶ, ವಿದೇಶದ ವೈದ್ಯರು ಬಂದಿದ್ದರು. ಆ ಸಭೆಯ ಬಳಿಕ ನನಗೆ ರೋಗ ಲಕ್ಷಣ ಪತ್ತೆಯಾಗಿತ್ತು ಎಂದು ಒಮಿಕ್ರಾನ್ ಸೋಂಕಿತ ವೈದ್ಯ ತಿಳಿಸಿದ್ದಾರೆ.
ನವೆಂಬರ್ 20ರಂದು ವೈದ್ಯರ ಸಮ್ಮೇಳನ ನಡೆದಿತ್ತು. ನವೆಂಬರ್ 21ರ ಸಂಜೆ ನನಗೆ ಮೈಕೈ ನೋವು ಕಾಣಿಸಿತು.ಚಳಿ ಮತ್ತು ಜ್ವರ ಮಾತ್ರ ಕಾಣಿಸಿಕೊಂಡಿತ್ತು. ನವೆಂಬರ್ 22ರಂದು ನಾನು ಟೆಸ್ಟ್ ಮಾಡಿಸಿದೆ. ಟೆಸ್ಟ್‌ನಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು. ಆಗ ಕೊಠಡಿಯಲ್ಲೇ ನಾನು ಸ್ವಯಂ ಐಸೋಲೇಷನ್ ಆಗಿದ್ದೆ. ನನ್ನ ಜೊತೆಗಿದ್ದವರೂ ಟೆಸ್ಟ್ ಮಾಡಿಸಿದ್ದರು. ಸದ್ಯ ಅವರಿಗೂ ಕೊರೊನಾ ಸೋಂಕು ದೃಢಪಟ್ಟಿದೆ. ಜಿನೋಮಿಕ್ ಸೀಕ್ವೆನ್ಸ್‌ನಲ್ಲಿ ನನಗೆ ಒಮಿಕ್ರಾನ್ ದೃಢವಾಗಿದೆ. ಒಮಿಕ್ರಾನ್ ದೃಢವಾದ ಬಳಿಕ ಚಿಕಿತ್ಸೆ ಪಡೆಯುತ್ತಿದ್ದೇನೆ. ಒಮಿಕ್ರಾನ್‌ಗೆ ವಿಶೇಷವಾದ ಟ್ರೀಟ್ಮೆಂಟ್ ಏನೂ ಇಲ್ಲ. ನಿತ್ಯ ವೈದ್ಯರ ನಿಗಾ ಇದೆ, ಚೇತರಿಸಿಕೊಳ್ಳುತ್ತಿದ್ದೇನೆ ಎಂದರು.
ಒಮಿಕ್ರಾನ್ನಿಂದ ಜೀವಕ್ಕೆ ಅಪಾಯ ಇಲ್ಲ ಇನ್ನು ಒಮಿಕ್ರಾನ್ನಿಂದ ಜೀವಕ್ಕೆ ಅಪಾಯ ಎಂದು ನನಗೆ ಅನಿಸುತ್ತಿಲ್ಲ ಎಂದು ಟಿವಿ9ಗೆ ಒಮಿಕ್ರಾನ್ ಸೋಂಕಿತ ವೈದ್ಯ ಹೇಳಿಕೆ ನೀಡಿದ್ದಾರೆ. ನನಗೆ ಬಂದಿರುವ ಲಕ್ಷಣ ಗಮನಿಸಿ ಇದನ್ನು ಹೇಳುತ್ತಿದ್ದೇನೆ. ನನಗೆ ಮೈ ಕೈ ನೋವು, ಜ್ವರ ಮಾತ್ರ ಕಾಣಿಸಿಕೊಂಡಿದೆ. ಇದರಿಂದ ಯಾವುದೇ ಆತಂಕ ಪಡಬೇಕಾದ ಅಗತ್ಯವಿಲ್ಲ. ಒಮಿಕ್ರಾನ್ ಸೋಂಕಿಗೆ ಯಾರೂ ಭಯಪಡುವ ಅಗತ್ಯವಿಲ್ಲ. ಜೀವಕ್ಕೆ ಯಾವುದೇ ರೀತಿಯ ಅಪಾಯ ಇಲ್ಲ ಅನಿಸುತ್ತಿದೆ. ಹೀಗಾಗಿ ಇದಕ್ಕೆ ಹೆದರುವ ಅವಶ್ಯಕತೆ ಇಲ್ಲ. ನಾನು ಈಗ ಬಹುತೇಕ ನಾರ್ಮಲ್ ಆಗಿ ಇದ್ದೇನೆ ಎಂದರು.
ಇದನ್ನೂ ಓದಿ: ಕರ್ನಾಟಕಕ್ಕೆ ಕಾಲಿಟ್ಟ ಒಮಿಕ್ರಾನ್! ಭಾರತದಲ್ಲಿ ಇದೇ ಮೊದಲ ಬಾರಿಗೆ ಎರಡು ಕೇಸ್ ಪತ್ತೆ
Published On - 9:34 am, Sat, 4 December 21