
ಬೆಂಗಳೂರು, ಜೂನ್ 28: ಓಣಂ ಹಬ್ಬಕ್ಕೆ ಊರಿಗೆ ತೆರಳುವು ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಬೆಂಗಳೂರು–ಎರ್ನಾಕುಲಂ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಸಾಮರ್ಥ್ಯವನ್ನು ದ್ವಿಗುಣಗೊಳಿಸಲು ಸೌತರ್ನ್ ರೈಲ್ವೆ ನಿರ್ಧರಿಸಿದೆ. ಆ ಮೂಲಕ ಪ್ರಸ್ತುತ 8 ಬೋಗಿಗಳಿರುವ ರೈಲನ್ನು 16 ಬೋಗಿಗಳಿಗೆ ಹೆಚ್ಚಿಸಲಾಗುತ್ತಿದ್ದು, ಪ್ರತಿ ಪ್ರಯಾಣದಲ್ಲಿ 598 ಹೆಚ್ಚುವರಿ ಆಸನಗಳು ಲಭ್ಯವಾಗಲಿವೆ. ರೈಲಿಗೆ ಹೊಸ 16 ಬೋಗಿಗಳ ರೇಕ್ ಅನ್ನು ಜುಲೈ ಮೊದಲ ವಾರದಲ್ಲಿ ಪರಿಚಯಿಸುವ ಸಾಧ್ಯತೆ ಇದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ. ಕಳೆದ ವರ್ಷದ ನವೆಂಬರ್‌ನಲ್ಲಿ ಈ ರೈಲು ಸೇವೆ ಆರಂಭವಾದ ಸುಮಾರು ಏಳು ತಿಂಗಳ ಬಳಿಕ ಈ ಬದಲಾವಣೆ ಜಾರಿಗೆ ಬರುತ್ತಿದೆ.
ಓಣಂ ಹಬ್ಬದ ಹಿನ್ನೆಲೆಯಲ್ಲಿ ಆಗಸ್ಟ್ 21 ಮತ್ತು 22ರ ಪ್ರಯಾಣದ ಟಿಕೆಟ್‌ಗಳು ಬುಕ್ಕಿಂಗ್ ಆರಂಭವಾದ ತಕ್ಷಣವೇ ವೇಟಿಂಗ್ ಲಿಸ್ಟ್ಗೆ ತಲುಪಿದ್ದವು. ಹಬ್ಬದ ದಿನಗಳು ಹಾಗೂ ದೀರ್ಘ ವಾರಾಂತ್ಯಗಳಲ್ಲಿ ಈ ರೈಲಿನಲ್ಲಿ ಪ್ರಯಾಣಿಕರ ದಟ್ಟಣೆ ತೀವ್ರವಾಗಿ ಹೆಚ್ಚಿದೆ ಎನ್ನಲಾಗಿದೆ. ರೈಲ್ವೆಯ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಕೇರಳ ಮೂಲದ ಪ್ರಯಾಣಿಕರಿಂದ ಈ ರೈಲಿಗೆ ನಿರಂತರವಾಗಿ ಉತ್ತಮ ಸ್ಪಂದನೆ ದೊರೆಯುತ್ತಿದೆ. ಹೆಚ್ಚುವರಿ ಬೋಗಿಗಳ ಸೇರ್ಪಡೆಯಿಂದ ಹಬ್ಬದ ಸಮಯದ ಪ್ರಯಾಣಿಕರ ಒತ್ತಡ ಗಣನೀಯವಾಗಿ ಕಡಿಮೆಯಾಗಲಿದೆ. ಈ ಬದಲಾವಣೆಯೊಂದಿಗೆ ರೈಲಿನ ಆಸನ ಸಾಮರ್ಥ್ಯ 530ರಿಂದ 1,128ಕ್ಕೆ ಏರಿಕೆಯಾಗಲಿದ್ದು, ಪ್ರತಿ ಪ್ರಯಾಣದಲ್ಲಿ 598 ಹೆಚ್ಚುವರಿ ಪ್ರಯಾಣಿಕರು ಸಂಚರಿಸಲು ಅವಕಾಶ ಸಿಗಲಿದೆ.
ವಾರದಲ್ಲಿ ಆರು ದಿನ ಈ ರೈಲು ಸಂಚರಿಸುವುದರಿಂದ, ಒಂದು ದಿಕ್ಕಿನಲ್ಲಿ ವಾರಕ್ಕೆ 6,768 ಹೆಚ್ಚುವರಿ ಪ್ರಯಾಣಿಕರು ಪ್ರಯಾಣಿಸಲು ಸಾಧ್ಯವಾಗಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. 630 ಕಿಲೋಮೀಟರ್ ದೂರದ ಬೆಂಗಳೂರು–ಎರ್ನಾಕುಲಂ ಮಾರ್ಗವನ್ನು ಈ ವಂದೇ ಭಾರತ್ ರೈಲು 8 ಗಂಟೆ 40 ನಿಮಿಷಗಳಲ್ಲಿ ಕ್ರಮಿಸುತ್ತಿದ್ದು, ಮಾರ್ಗ ಮಧ್ಯೆ ಕೇವಲ ಒಂಬತ್ತು ನಿಲ್ದಾಣಗಳಲ್ಲಿ ಮಾತ್ರ ನಿಲುಗಡೆ ಇರಲಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.