ಮೆಟ್ರೋದಲ್ಲಿ ಯುವತಿಯರ ವೀಡಿಯೋ ರೆಕಾರ್ಡ್ ಮಾಡಿ ವಿಕೃತಿ ಮರೆದಿದ್ದವ ಅರೆಸ್ಟ್!
ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಯುವತಿಯರ ಆಕ್ಷೇಪಾರ್ಹ ವಿಡಿಯೋಗಳನ್ನು ಮಾಡಿ ಇನ್ಸ್ಟಾಗ್ರಾಂ ಖಾತೆಯಲ್ಲಿ ಅಪ್‌ಲೋಡ್ ಮಾಡಿರುವ ಸುದ್ದಿ ಭಾರೀ ಸಂಚಲನ ಮೂಡಿಸಿತ್ತು. ಈ ಸಂಬಂಧ ಅಪರಿಚಿತನ ವಿಕೃತಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದರಿಂದ ಎಚ್ಚೆತ್ತ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ವಿಕೃತಿ ಮೆರೆದಿದ್ದವನ ಹೆಡೆಮುರಿಕಟ್ಟಿದ್ದಾರೆ.

ಬೆಂಗಳೂರು, (ಮೇ 23): ನಮ್ಮ ಮೆಟ್ರೋದಲ್ಲಿ (Namma Metro) ಪ್ರಯಾಣಿಸುವ ಯುವತಿಯರ ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ವಿಕೃತಿ ಮೆರೆದಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ. metro_chicks ಖಾತೆಯಿಂದ 13ಕ್ಕೂ ಹೆಚ್ಚು ವಿಡಿಯೋ ಅಪ್‌ಲೋಡ್ ಮಾಡಿದ್ದ ದಿಗಂತ್ ಎಂಬಾತನನ್ನ ಬನಶಂಕರಿ ಪೊಲೀಸರು (Banashankari Police) ಬಂಧಿಸಿದ್ದಾರೆ. ಹಾಸನದ ಹೊಳೆನರಸೀಪುರದ ಮೂಲದ ದಿಗಂತ್ನನ್ನು ಇಂದು (ಮೇ 23) ಬೆಂಗಳೂರಿನ (Bengaluru) ಪೀಣ್ಯ ಬಳಿ ಬಂಧನ ಮಾಡಲಾಗಿದೆ.
ಈ ಬಗ್ಗೆ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಯುವತಿಯರ ವಿಡಿಯೋ ಸೆರೆಹಿಡಿಯುತ್ತಿದ್ದವನನ್ನ ಬಂಧಿಸಿದ್ದೇವೆ. ಆರೋಪಿ ಮೆಟ್ರೋದಲ್ಲಿ ಯುವತಿಯರ ವಿಡಿಯೋ ಮಾಡುತ್ತಿದ್ದ. ಬಳಿಕ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದ. ಈ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಆರೋಪಿಯನ್ನು ಬಂಧಿಸಿ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಬಂಧಿತ ಆರೋಪಿ ಹಾಸನದ ಹೊಳೆನರಸೀಪುರದವನಾಗಿದ್ದು, ಬೆಂಗಳೂರಿನ ತಿಗಳರ ಪಾಳ್ಯವಾಸವಾಗಿದ್ದ. ಮುರುಗೇಶ್ ಪಾಳ್ಯದ ಖಾಸಗಿ ಕಂಪೆನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡ್ತಿದ್ದ. ಕೆಲಸಕ್ಕೆ ತಿಗಳರ ಪಾಳ್ಯದಿಂದ ಮುರುಗೇಶ್ ಪಾಳ್ಯ ನಡುವೆ ಮೇಟ್ರೋದಲ್ಲಿ ಪ್ರಯಾಣ ಮಾಡುವಾಗ ರೆಕಾರ್ಡ್ ಮಾಡುತ್ತಿದ್ದ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ನಮ್ಮ ಮೆಟ್ರೋದಲ್ಲಿ ಹುಡುಗಿಯರ ಆಕ್ಷೇಪಾರ್ಹ ವಿಡಿಯೋ ಮಾಡಿ ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್: ವ್ಯಾಪಕ ಆಕ್ರೋಶ
metro_chicks ಖಾತೆಯಿಂದ 13ಕ್ಕೂ ಹೆಚ್ಚು ವಿಡಿಯೋ ಅಪ್‌ಲೋಡ್ ಮಾಡಲಾಗಿತ್ತು. ಈ ಖಾತೆಯನ್ನು 5,538 ಮಂದಿ ಫಾಲೋ ಮಾಡುತ್ತಿದ್ದು, ಮೆಟ್ರೋ ರೈಲಿನ ಒಳಗೆ, ನಿಲ್ದಾಣದಲ್ಲಿ ಹುಡುಗಿಯರ ಆಕ್ಷೇಪಾರ್ಹ ರೀತಿಯ ವಿಡಿಯೋಗಳನ್ನು ರೆಕಾರ್ಡ್ ಮಾಡಲಾಗಿತ್ತು. ಈ ಖಾತೆಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ವಿಡಿಯೋಗಳು ಡಿಲೀಟ್ ಆಗಿದೆ. ಈ ಸಂಬಂಧ ಇನ್‌ಸ್ಟಾ ಪೇಜ್ ವಿರುದ್ಧ ಬನಶಂಕರಿ ಠಾಣೆ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲು ಮಾಡಿಕೊಂಡು ವಿಡಿಯೋ ಅಪ್ಲೋಡ್ ಮಾಡಿದವರ ಪತ್ತೆಗೆ ಬಲೆ ಬೀಸಿದ್ದರು.
ಐಟಿ ಆ್ಯಕ್ಟ್ 2008 ಸೆಕ್ಷನ್ 67, ಬಿಎನ್ಎಸ್ 78(2)ರಡಿ ಬನಶಂಕರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇನ್ನು ಈ ಘಟನೆ ಬಗ್ಗೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಧ್ವನಿ ಎತ್ತಿ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅಪರಿಚಿತನೋರ್ವ ಇನ್ಸ್ಟಾಗ್ರಾಂನಲ್ಲಿ ಹುಡುಗಿಯರ ಆಕ್ಷೇಪಾರ್ಹ ವಿಡಿಯೋಗಳನ್ನು ಮಾಡಿ ಅಪ್ಲೋಡ್ ಮಾಡುತ್ತಿದ್ದಾನೆ. ನಾಳೆ ಈ ವಿಡಿಯೋಗಳಲ್ಲಿ ನಮ್ಮ ಅಕ್ಕ, ತಂಗಿಯರು ಇರಬಹುದು ಹುಷಾರಾಗಿರಿ. ಮೊದಲು ಈ ಖಾತೆಯನ್ನು ರಿಪೋರ್ಟ್ ಮಾಡಿ. ಬೆಂಗಳೂರು ನಗರ ಪೊಲೀಸರಿಗೂ ಟ್ಯಾಗ್ ಮಾಡಿ. ಆದಷ್ಟು ಬೇಗ ಈ ಖಾತೆಯನ್ನು ತೆಗೆಸಲೇಬೇಕು’ ಎಂದು ಒಬ್ಬರು ಹೇಳಿದ್ದರು.
ಅಲ್ಲದೇ ಈ ಬಗ್ಗೆ ಕೇಂದ್ರ ಬಿಜೆಪಿ ಸಂಸದ ಪಿಸಿ ಮೋಹನ್ ಟ್ವೀಟ್ ಮಾಡಿದ್ದು, ಇದು ಆಘಾತಕಾರಿ ಸಂಗತಿಯಾಗಿದೆ. ಇದು ಭಯಾನಕ ಅಪರಾಧ ಮಾತ್ರವಲ್ಲ, ಗಂಭೀರ ಅಪರಾಧವೂ ಆಗಿದೆ. ತಕ್ಷಣ ಬೆಂಗಳೂರು ಪೊಲೀಸರು ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದರು. ಇದರಿಂದ ಎಚ್ಚೆತ ಬನಶಂಕರಿ ಠಾಣೆ ಪೊಲೀಸರು ಸುಮಟೋ ಕೇಸ್ ದಾಖಲಿಸಿಕೊಂಡಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:18 pm, Fri, 23 May 25







