
ಬೆಂಗಳೂರು, ನವೆಂಬರ್ 16: ವಿಯೆಟ್ನಾಂ ಮೂಲದ ಕಂಪನಿ ವಿನ್‌ಗ್ರೂಪ್‌ನ ‘ಗ್ರೀನ್ ಎಸ್‌ಎಂ’ ಸೇವೆ ಆರಂಭಕ್ಕೆ ಕರ್ನಾಟಕದ ಖಾಸಗಿ ಸಾರಿಗೆ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದ ಬೆನ್ನಲ್ಲೇ ಈ ಬಗ್ಗೆ ಸಾರಿಗೆ ಸಚಿವ ಭೈರತಿ ಸುರೇಶ್ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ರಾಜ್ಯದಲ್ಲಿ 100 ಗ್ರೀನ್ ಎಸ್‌ಎಂ ಟ್ಯಾಕ್ಸಿಗಳು ಮಾತ್ರ ನೋಂದಣಿಯಾಗಿದ್ದು, ಸಾವಿರಾರು ಕ್ಯಾಬ್ಗಳಿಗೆ ಅನುಮತಿ ನೀಡಿಲ್ಲ. ಅಲ್ಲದೆ, ಇನ್ಮುಂದೆ ಅವುಗಳ ನೋಂದಣಿ ಮಾಡದಂತೆ ಸಾರಿಗೆ ಇಲಾಖೆ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ಆಟೋಗಳ ರೀತಿ ಗ್ರೀನ್ ಎಸ್‌ಎಂ ಟ್ಯಾಕ್ಸಿಗಳಲ್ಲಿಯೂ ಮೀಟರ್ ಅಳವಡಿಸಬೇಕು. ಮೀಟರ್ ಇದ್ದರೆ ಮಾತ್ರ ಅನುಮತಿ ನೀಡಲಾಗುತ್ತೆ. ಈ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುವುದಾಗಿ ಅವರು ತಿಳಿಸಿದ್ದಾರೆ.
ಎಲೆಕ್ಟ್ರಿಕ್ ಕಾರುಗಳ ಮೂಲಕ ಕ್ಯಾಬ್ ಸೇವೆ ಒದಗಿಸುವ ಈ ಕಂಪನಿಯ ದರ ನೀತಿಯಿಂದ ಸ್ಥಳೀಯ ಕ್ಯಾಬ್ ಮತ್ತು ಆಟೋ ಚಾಲಕರ ಜೀವನೋಪಾಯಕ್ಕೆ ಹೊಡೆತ ಬೀಳಲಿದೆ ಎಂದು ಕರ್ನಾಟಕದ ಖಾಸಗಿ ಸಾರಿಗೆ ಸಂಘಟನೆಗಳು ಆತಂಕ ವ್ಯಕ್ತಪಡಿಸಿದ್ದವು. ಇತ್ತೀಚೆಗಷ್ಟೇ ಗ್ರೀನ್ ಎಸ್‌ಎಂ ಕಂಪನಿಯು ಕರ್ನಾಟಕ ಬೇಡಿಕೆ ಆಧಾರಿತ ಸಾರಿಗೆ ತಂತ್ರಜ್ಞಾನ ಅಗ್ರಿಗೇಟರ್ ನಿಯಮಗಳು-2016ರ ಅಡಿಯಲ್ಲಿ 2031ರ ಸೆಪ್ಟೆಂಬರ್‌ವರೆಗೆ ರಾಜ್ಯ ಸಾರಿಗೆ ಇಲಾಖೆಯಿಂದ ಅಗ್ರಿಗೇಟರ್ ಪರವಾನಗಿ ಪಡೆದುಕೊಂಡ ಬೆನ್ನಲ್ಲೇ ವಿವಿಧ ಪ್ರಮುಖ ಅಂಶಗಳನ್ನು ಉಲ್ಲೇಖಿಸಿ ಸಿಎಂಗೆ ಪತ್ರ ಕೂಡ ಬರೆದಿದ್ದವು.
ಇದನ್ನೂ ಓದಿ: ಗ್ರೀನ್ ಎಸ್‌ಎಂ ಕ್ಯಾಬ್ ಸೇವೆಗೆ ವಿರೋಧ: ಸಿಎಂಗೆ ಪತ್ರ ಬರೆದ ಕರ್ನಾಟಕ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ
2026ರ ಜೂನ್‌ನಲ್ಲಿ ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಲಿಮೋ ಸೇವೆಯ ಮೂಲಕ ಗ್ರೀನ್ ಎಸ್‌ಎಂ ಭಾರತಕ್ಕೆ ಪ್ರವೇಶಿಸಿತ್ತು. ಬಳಿಕ ಹೈದರಾಬಾದ್ ಸೇರಿದಂತೆ ಇತರ ನಗರಗಳಿಗೂ ತನ್ನ ಸೇವೆಯನ್ನು ವಿಸ್ತರಿಸಿದೆ. ಕಂಪನಿಯು ಏಳು ಆಸನಗಳ ಎಲೆಕ್ಟ್ರಿಕ್ ಮಲ್ಟಿ-ಪರ್ಪಸ್ ವಾಹನವಾದ ವಿನ್ಫಾಸ್ಟ್ ಲಿಮೋ ಗ್ರೀನ್ ಅನ್ನು ಬಳಸುತ್ತಿದ್ದು, ಪ್ರತಿ ಕಿಲೋಮೀಟರ್‌ಗೆ ಸುಮಾರು 8 ರೂಪಾಯಿ ದರದಲ್ಲಿ ಪ್ರಯಾಣ ಸೇವೆ ಒದಗಿಸುತ್ತಿದೆ. ತರಬೇತಿ ಪಡೆದ ಚಾಲಕರು ಹಾಗೂ ವಾಹನದ ಒಳಭಾಗ ಮತ್ತು ಹೊರಭಾಗದಲ್ಲಿ ಅಳವಡಿಸಿರುವ ಕ್ಯಾಮೆರಾಗಳು, ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಜ್ಞಾನ ಮತ್ತು ತುರ್ತು ಸಹಾಯ ಬಟನ್‌ಗಳಂತಹ ಸುರಕ್ಷತಾ ಸೌಲಭ್ಯಗಳೊಂದಿಗೆ ಸೇವೆ ಒದಗಿಸುವುದಾಗಿ ಕಂಪನಿ ಹೇಳಿಕೊಂಡಿದ್ದು, ಬೆಂಗಳೂರಲ್ಲಿಯೂ ಕ್ಯಾಬ್ಗಳನ್ನು ರಸ್ತೆಗಿಳಿಸುವ ಸಿದ್ಧತೆ ನಡೆಸಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.