ರಾಜಕಾಲುವೆಯಲ್ಲಿ ಮಗುವಿಗಾಗಿ ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ, ಪೋಷಕರ ಹೇಳಿಕೆಯಿಂದ ಶುರುವಾಯ್ತು ಗೊಂದಲ
ವರ್ತೂರಿನಲ್ಲಿ ರಾಜ ಕಾಲುವೆಗೆ ಬಿದ್ದು ಮೂರು ವರ್ಷದ ಮಗು ನಾಪತ್ತೆಯಾಗಿದೆ. ಮೂರು ದಿನ ಹುಡುಕಿದರೂ ಮಗು ಪತ್ತೆಯಾಗಿಲ್ಲವೆಂದರೆ ಮಗುವನ್ನು ಯಾರಾದರೂ ಕಿಡ್ನಾಪ್ ಮಾಡಿರಬಹುದಾ ಎಂಬ ಶಂಕೆಯನ್ನು ಪೋಷಕರು ಹೊರ ಹಾಕಿದ್ದಾರೆ.
ಬೆಂಗಳೂರು: ನಗರದ ವರ್ತೂರಿನಲ್ಲಿ ರಾಜ ಕಾಲುವೆಗೆ ಬಿದ್ದು ಮಗು ನಾಪತ್ತೆಯಾಗಿ(Child Missing) ಮೂರು ದಿನಗಳಾದರೂ ಮಗುವಿನ ಬಗ್ಗೆ ಚಿಕ್ಕ ಸುಳಿವು ಕೂಡ ಸಿಕ್ಕಿಲ್ಲ. ಇದರ ನಡುವೆ ಪೋಷಕರು ಗೊಂದಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದರಿಂದ ಪೊಲೀಸರು ತಲೆ ಕೆಡಿಸಿಕೊಳ್ಳುವಂತಾಗಿದೆ. ಮಗು ನಾಪತ್ತೆಗೆ ಸಂಬಂಧಿಸಿ ಪೋಷಕರು ಎರಡು ರೀತಿಯ ಹೇಳಿಕೆಯನ್ನು ನೀಡಿದ್ದಾರೆ. ಪೋಷಕರು ಒಮ್ಮೆ, ಮಗು ನೀರಿನಲ್ಲಿ ಬಿದ್ದಿದೆ ಎಂದರೆ, ಮತ್ತೊಮ್ಮೆ ಕಿಡ್ನಾಪ್ ಮಾಡಿ ಕರೆದೊಯ್ದಿರಬಹುದು ಎನ್ನುತ್ತಿದ್ದಾರೆ. ಈ ರೀತಿಯ ಹೇಳಿಕೆಯಿಂದ ಅಗ್ನಿಶಾಮಕ ಸಿಬ್ಬಂದಿ ಗೊಂದಲಕ್ಕೊಳಗಾಗಿದ್ದಾರೆ. ಆದರೆ ನಿಖರ ಸಂಗತಿ ಗೊತ್ತಿಲ್ಲದಿಂದರೂ ಅಗ್ನಿಶಾಮಕ ಸಿಬ್ಬಂದಿ ರಕ್ಷಣ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಈಗಾಗಲೇ ಹತ್ತು ಕಿಲೋ ಮೀಟರ್ ವರೆಗೆ ಶೋಧ ನಡೆಸಲಾಗಿದೆ. ಆದ್ರೂ, ಬಾಲಕ ಕಬೀರ್ ಪತ್ತೆಯಾಗಿಲ್ಲ. ಮತ್ತೊಂದೆಡೆ ಮಿಸ್ಸಿಂಗ್ ಕೇಸ್ ದಾಖಲಿಸಿಕೊಂಡಿರುವ ವರ್ತೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸ್ಥಳದಲ್ಲಿನ ಸಿಸಿಟಿವಿಯಲ್ಲಿ ದಾಖಲಾಗಿರುವ ದೃಶ್ಯಾವಳಿಗಳನ್ನ ಪಡೆದು ಪತ್ತೆಗೆ ಮುಂದಾಗಿದ್ದಾರೆ.
ಘಟನೆ ಹಿನ್ನೆಲೆ ಅ.16ರ ಭಾನುವಾರ ಬಳಗೆರೆಯ ಅಪಾರ್ಟ್‌ಮೆಂಟ್ ಬಳಿ ಮಕ್ಕಳೊಂದಿಗೆ ಆಟವಾಡುವಾಗ ಆಯಾತಪ್ಪಿ ರಾಜಕಾಲುವೆಗೆ ಬಿದ್ದು ಮೂರು ವರ್ಷದ ಮಗು ನಾಪತ್ತೆಯಾಗಿತ್ತು. ಪ್ರಕರಣ ಸಂಬಂಧ ಅಗ್ನಿಶಾಮಕ ದಳ ಸಿಬ್ಬಂದಿ ಕಳೆದ ಮೂರು ದಿನಗಳಿಂದ ಹುಡುಕಾಟ ನಡೆಸುತ್ತಿದ್ದಾರೆ. ಆದ್ರೆ ಮಗು ಪತ್ತೆಯಾಗಿಲ್ಲ.
ನಾಪತ್ತೆಯಾಗಿರುವ ಮೂರು ವರ್ಷದ ಕಬೀರ್, ನೇಪಾಳ ಮೂಲದ ಬಿನೋದ್ ಸೌದ್ ಹಾಗೂ ಸ್ವಪ್ನ ದಂಪತಿಯ ಪುತ್ರ. ಈತ ಭಾನುವಾರ ಮಕ್ಕಳೊಂದಿಗೆ ಆಟವಾಡುತ್ತಿದ್ದ. ಸ್ವಲ್ಪ ಸಮಯದ ಬಳಿಕ ಪೋಷಕರು ಮಕ್ಕಳೊಂದಿಗೆ ತಮ್ಮ ಮಗ ಕಾಣುತ್ತಿಲ್ಲವೆಂದು ಓಡಿ ಬಂದು ಮಕ್ಕಳನ್ನು ವಿಚಾರಿಸಿದ್ದಾರೆ. ಆಗ ಮಕ್ಕಳು ರಾಜಕಾಲುವೆಯತ್ತ ಬೆರಳು ಮಾಡಿದ್ದಾರೆ. ಇದರಿಂದ ಆತಂಕಗೊಂಡ ಪೋಷಕರು ವರ್ತೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರೊಂದಿಗೆ ಸ್ಥಳಕ್ಕೆ ಬಂದ ಅಗ್ನಿಶಾಮಕದಳ ಸಿಬ್ಬಂದಿ ಬಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕಿಮ್ಸ್ನಲ್ಲಿ ಮಗು ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; 40 ದಿನದ ಹೆಣ್ಣು ಮಗುವಿಗೆ ಅನಾರೋಗ್ಯ, ಮಗುವನ್ನು ತಾನೇ ಕೊಟ್ಟು ಕದ್ದರೆಂದು ಡ್ರಾಮ ಮಾಡಿದ ತಾಯಿ
ಇದರ ನಡುವೆ ಪೋಕಷರು ಈಗ ಮತ್ತೊಂದು ರೀತಿಯ ಹೇಳಿಕೆ ನೀಡಿದ್ದಾರೆ. ಮೂರು ದಿನ ಹುಡುಕಿದರೂ ಮಗು ಪತ್ತೆಯಾಗಿಲ್ಲವೆಂದರೆ ಮಗುವನ್ನು ಯಾರಾದರೂ ಕಿಡ್ನಾಪ್ ಮಾಡಿರಬಹುದಾ ಎಂಬ ಶಂಕೆ ಹೊರ ಹಾಕಿದ್ದಾರೆ. ಇದರಿಂದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ಪೊಲೀಸರು ಈ ಆಯಾಮದಲ್ಲೂ ತನಿಖೆ ನಡೆಸುತ್ತಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:22 pm, Tue, 18 October 22