Peenya Flyover: ವಾಹನ ಸವಾರರಿಗೆ ಸಿಹಿ ಸುದ್ದಿ, ಪೀಣ್ಯ ಮೇಲ್ಸೇತುವೆ ಎಲ್ಲಾ ವಾಹನಗಳ ಸಂಚಾರಕ್ಕೆ ಮುಕ್ತ
ಕಳೆದ 2 ವರ್ಷಗಳಿಂದ ಭಾರೀ ವಾಹನಗಳಿಗೆ ಕ್ಲೋಸ್ ಆಗಿದ್ದ ಬೆಂಗಳೂರು ನಗರದ ತುಮಕೂರು ರಸ್ತೆಯ ಪೀಣ್ಯ ಮೇಲ್ಸೇತುವೆ ಇಂದಿನಿಂದ ಎಲ್ಲಾ ಮಾದರಿಯ ವಾಹನಗಳ ಸಂಚಾರಕ್ಕೆ ಮುಕ್ತವಾಗಿದೆ. ಬೆಂಗಳೂರಿನಿಂದ 25 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಈ ಮೇಲ್ಸೇತುವೆ ಸಂಚಾರಕ್ಕೆ ಮುಕ್ತ.
ಬೆಂಗಳೂರು, ಜುಲೈ.29: 2 ವರ್ಷಗಳಿಂದ ಭಾರಿ ವಾಹನಗಳಿಗೆ ಕ್ಲೋಸ್ ಆಗಿದ್ದ ಪೀಣ್ಯ ಮೇಲ್ಸೇತುವೆ (Peenya Flyover) ಇಂದಿನಿಂದ ಎಲ್ಲಾ ರೀತಿಯ ವಾಹನಗಳ ಸಂಚಾರಕ್ಕೆ ಮುಕ್ತವಾಗಿದೆ. ಸುಮಾರು 25 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪೀಣ್ಯ ಫ್ಲೈಓವರ್ ಅನ್ನು ಮುಕ್ತಗೊಳಿಸಿ ರಾ.ಹೆದ್ದಾರಿ ಪ್ರಾಧಿಕಾರ, ಟ್ರಾಫಿಕ್ ಪೊಲೀಸರು ಹಸಿರು ನಿಶಾನೆ ತೋರಿಸಿದ್ದಾರೆ.
ವಾರದಲ್ಲಿ 6 ದಿನ ಪೀಣ್ಯ ಮೇಲ್ಸೇತುವೆಯಲ್ಲಿ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು ವಿಶೇಷ ದುರಸ್ತಿ ಕಾಮಗಾರಿ ಇನ್ನೂ ಪ್ರಗತಿಯಲ್ಲಿರುವುದರಿಂದ ಪ್ರತಿ ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ ಶನಿವಾರ ಬೆಳಗ್ಗೆ 6 ಗಂಟೆವರೆಗೂ ಭಾರಿ ವಾಹನಗಳ ಓಡಾಟ ನಿಷೇಧಿಸಲಾಗಿದೆ. ಭಾರಿ ವಾಹನಗಳು ಮಾತ್ರ ಮೇಲ್ಸೇತುವೆ ಎಡಪಥದಲ್ಲಿ ಗರಿಷ್ಠ 40 ಕಿ.ಮೀ ವೇಗ ಮಿತಿಯಲ್ಲಿ ಸಂಚರಿಸಬೇಕು ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೂಚಿಸಿದೆ.
ಕಳೆದ 2 ವರ್ಷಗಳಿಂದ ಭಾರಿ ವಾಹನಗಳ ಸಂಚಾರಕ್ಕೆ ತಡೆ ನೀಡಲಾಗಿತ್ತು. ಕೊನೆಗೂ ಈಗ ಭಾರಿ ವಾಹನಗಳ ಓಡಾಟಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಬಸ್, ಲಾರಿ, ಟ್ರಕ್ಗಳಿಗೆ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ನಗರದ ತುಮಕೂರು ರಸ್ತೆಯಲ್ಲಿರುವ 15 ಮೀಟರ್ ಅಗಲದ, 4.2 ಕಿಮೀ ಉದ್ದದ ಮೇಲ್ಸೇತುವೆಯಲ್ಲಿ 2021ರ ಡಿಸೆಂಬರ್ನಿಂದಲೂ ಪೀಣ್ಯ ಮೇಲ್ಸೇತುವೆಯಲ್ಲಿ ಸಮಸ್ಯೆ ಎದುರಾಗಿತ್ತು. ಇದರಿಂದ ತುಮಕೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗುತ್ತಿತ್ತು. ಹೀಗಾಗಿ ಬಸ್‌ಗಳು ಮತ್ತು ಟ್ರಕ್‌ಗಳಂತಹ ಭಾರೀ ವಾಹನಗಳ ಸಂಚಾರ ನಿರ್ಬಂಧಿಸಲಾಗಿತ್ತು. ಫ್ಲೈಓವರ್‌ನಲ್ಲಿ ಪ್ರಿಸ್ಟ್ರೆಸ್ಡ್ ಕೇಬಲ್‌ಗಳು ತುಕ್ಕು ಹಿಡಿದ ಹಿನ್ನೆಲೆಯಲ್ಲಿ ರಿಪೇರಿ ಮಾಡುವ ಅಗತ್ಯವಿತ್ತು. ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ 38.5 ಕೋಟಿ ರೂ. ವೆಚ್ಚದಲ್ಲಿ ಹೊಸದಾಗಿ ಕೇಬಲ್‌ಗಳ ಅಳವಡಿಕೆ ಕಾರ್ಯ ನಡೆದಿದೆ. ಇದೀಗ ಪೀಣ್ಯ ಮೇಲ್ಸೇತುವೆ ಎಲ್ಲಾ ವಾಹನಗಳ ಸಂಚಾರಕ್ಕೆ ಮುಕ್ತವಾಗಿದೆ.
ಇದನ್ನೂ ಓದಿ: Peenya flyover: ಪೀಣ್ಯ ಫ್ಲೈಓವರ್ ಮೇಲೆ ಸ್ಪೀಡ್ ಬ್ರೇಕ್, ಅತಿ ವೇಗವಾಗಿ ವಾಹನ ಸಂಚರಿಸಿದರೆ ದಂಡ
ಇನ್ನು ಪೀಣ್ಯ ಫ್ಲೈಓವರ್ ಮೇಲೆ ನಿರ್ಬಂಧವಿದ್ದರಿಂದ ಕಳೆದ ಮೂರು ವರ್ಷಗಳಿಂದ ಕೆಳಗಿನ ರಸ್ತೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿತ್ತು. ದಿನ ನಿತ್ಯದ ವಾಹನ ದಟ್ಟಣೆಯಿಂದ ವಾಹನ ಸವಾರರು ಪರದಾಡುತ್ತಿದ್ದರು. ಎನ್‌ಎಚ್‌ಎಐ ಕಳೆದ ವರ್ಷ 38.5 ಕೋಟಿ ರೂಪಾಯಿಯಲ್ಲಿ ರಿಪೇರಿ ಕಾರ್ಯವನ್ನು ಪ್ರಾರಂಭಿಸಿತು. ಪ್ರತಿ ಸ್ಪ್ಯಾನ್‌ನಲ್ಲಿ ಎರಡು ಕೇಬಲ್‌ಗಳನ್ನು ಹೆಚ್ಚುವರಿ ಸ್ಲಾಟ್‌ಗಳಲ್ಲಿ ಸೇರಿಸಲು ಮತ್ತು ಮೇಲ್ಸೇತುವೆಯನ್ನು ಬಲಪಡಿಸಲು ಒತ್ತು ನೀಡಿತ್ತು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ