'ಪ್ರಜಾಸೇವಾ' ಯೋಜನೆಯ ಸಂಪೂರ್ಣ ವಿವರ ಇಲ್ಲಿದೆ
ಮುಖ್ಯಾಂಶಗಳು
- ಪ್ರಜಾಸೇವಾ ಯೋಜನೆಗೆ ವಿಜಯನಗರದ ಕೂಡ್ಲಿಗಿಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ.
- ಸಚಿವರು ಹಾಗೂ ಶಾಸಕರು ನೇರವಾಗಿ ಜನರ ಮನೆಬಾಗಿಲಿಗೆ ತೆರಳಿ ಅಹವಾಲು ಸ್ವೀಕಾರ.
- ಸಾರ್ವಜನಿಕರ ಅರ್ಜಿಗಳನ್ನು ನಿಗದಿತ ಕಾಲಮಿತಿಯಲ್ಲಿ ಪರಿಶೀಲಿಸಿ ತ್ವರಿತವಾಗಿ ಬಗೆಹರಿಸುವ ವ್ಯವಸ್ಥೆ.
ಬೆಂಗಳೂರು, ಸೆಪ್ಟೆಂಬರ್ 05: ಕರ್ನಾಟಕ ಸರ್ಕಾರವು ಸಾರ್ವಜನಿಕರ ಕುಂದುಕೊರತೆಗಳನ್ನು ತ್ವರಿತವಾಗಿ ಮತ್ತು ಮನೆಬಾಗಿಲಲ್ಲೇ ಪರಿಹರಿಸುವ ಉದ್ದೇಶದಿಂದ ಜಾರಿಗೆ ತಂದಿರುವ ಪ್ರಮುಖ ಯೋಜನೆಯೇ ‘ಪ್ರಜಾಸೇವಾ ಇಲಾಖೆ’ ಹಾಗೂ ‘ಪ್ರಜಾಸೇವಾ ಅಭಿಯಾನ’. ಇಂದು ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ ‘ಪ್ರಜಾಸೇವಾ ಅಭಿಯಾನ’ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಚಾಲನೆ ನೀಡಿದರು.
ಈ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, “ಸರ್ಕಾರವೇ ಜನರ ಮನೆ ಬಾಗಿಲಿಗೆ ತೆರಳಿ ಸಮಸ್ಯೆ ಆಲಿಸುವ ವ್ಯವಸ್ಥೆ ರೂಪಿಸಲಾಗುತ್ತಿದೆ. ಎಲ್ಲ ಸಮಸ್ಯೆಗಳನ್ನು ತಕ್ಷಣವೇ ಬಗೆಹರಿಸದಿದ್ದರೂ, ನೇರವಾಗಿ ಜನರ ಭಾವನೆಗಳನ್ನು ಅರಿತು ಪರಿಹಾರ ಕಂಡುಕೊಳ್ಳಲು ಇದರಿಂದ ಉತ್ತಮ ಅವಕಾಶ ದೊರೆಯಲಿದೆ” ಎಂದು ತಿಳಿಸಿದರು.
1. ಏನಿದು ಪ್ರಜಾಸೇವಾ ಯೋಜನೆ?
ಜನಸಾಮಾನ್ಯರು ತಮ್ಮ ಸಣ್ಣಪುಟ್ಟ ಕೆಲಸಗಳು, ಪಿಂಚಣಿ, ಪಹಣಿ, ಪಡಿತರ ಚೀಟಿ ಸೇರಿದಂತೆ ನಾನಾ ಇಲಾಖೆಗಳ ಸಮಸ್ಯೆಗಳಿಗೆ ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿ, ಮನೆಬಾಗಿಲಲ್ಲೇ ಅಹವಾಲುಗಳನ್ನು ಆಲಿಸಿ ಕಾಲಮಿತಿಯಲ್ಲಿ ಪರಿಹರಿಸಲು ಸರ್ಕಾರ ರೂಪಿಸಿರುವ ಹೊಸ ವ್ಯವಸ್ಥೆಯೇ ಪ್ರಜಾಸೇವಾ.
2. ಪ್ರಜಾಸೇವಾ ಯೋಜನೆಯ ಮುಖ್ಯ ಉದ್ದೇಶಗಳೇನು?
- ತ್ವರಿತ ಪರಿಹಾರ: ಸರ್ಕಾರಿ ಕಚೇರಿಗಳ ಸುತ್ತ ಜನ ಅಲೆದಾಡುವುದನ್ನು ತಪ್ಪಿಸುವುದು.
- ಆಡಳಿತದಲ್ಲಿ ಪಾರದರ್ಶಕತೆ: ಸಾರ್ವಜನಿಕರ ದೂರುಗಳಿಗೆ ಉತ್ತರದಾಯಿತ್ವ ತರುವುದು.
- ನೇರ ಸಂಪರ್ಕ: ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳು ನೇರವಾಗಿ ಜನರ ಬಳಿಗೇ ತೆರಳಿ ಸಮಸ್ಯೆ ಆಲಿಸುವುದು.
3. ಪ್ರಜಾಸೇವಾ ಯೋಜನೆ ಕಾರ್ಯನಿರ್ವಹಿಸುವ ವಿಧಾನ ಹೇಗೆ?
- ಮೊದಲ ಮತ್ತು 3ನೇ ಶನಿವಾರ: ಜಿಲ್ಲಾ ಉಸ್ತುವಾರಿ ಸಚಿವರು ಕಡ್ಡಾಯವಾಗಿ ತಾಲೂಕು ಮಟ್ಟದ ಸಭೆ ನಡೆಸಿ ಅಹವಾಲು ಸ್ವೀಕರಿಸುವುದು (ಮುಂದಿನ ಹಂತದಲ್ಲಿ ಹೋಬಳಿ ಮಟ್ಟಕ್ಕೂ ವಿಸ್ತರಣೆ).
- 2ನೇ ಮತ್ತು 4ನೇ ಶನಿವಾರ: ಶಾಸಕರು ಹಾಗೂ ಅಧಿಕಾರಿಗಳು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಭೆ ನಡೆಸಿ ಸಾರ್ವಜನಿಕರ ಅಹವಾಲು ಆಲಿಸುವುದು.
4. ದೂರು ಸಲ್ಲಿಕೆ ಮತ್ತು ತಂತ್ರಜ್ಞಾನ ಬಳಕೆಯ ರೂಪುರೇಷೆ ಏನು?
- ಮುಂಚಿತ ಮಾಹಿತಿ: ಸಭೆಗೆ 15 ದಿನಗಳ ಮುಂಚಿತವಾಗಿ ಮನೆಮನೆಗೆ ಅರ್ಜಿ ನಮೂನೆ ತಲುಪಿಸಲಾಗುತ್ತದೆ.
ಸಹಾಯವಾಣಿ (1902) ಮತ್ತು AI: ಸಾರ್ವಜನಿಕರಿಗೆ ಮಾಹಿತಿ ತಲುಪಿಸಲು AI ಆಧಾರಿತ ಕಾಲ್ ಸೆಂಟರ್ ಮತ್ತು ಸಹಾಯವಾಣಿ ಇರಲಿದೆ.
- ಆನ್‌ಲೈನ್ ಟ್ರ್ಯಾಕಿಂಗ್: ಸಾರ್ವಜನಿಕರು ತಮ್ಮ ಅರ್ಜಿಯ ನೈಜ-ಸಮಯದ ಸ್ಥಿತಿಯನ್ನು ಆನ್‌ಲೈನ್ ಮೂಲಕ ಪರಿಶೀಲಿಸಬಹುದು.
5. ಪ್ರಜಾಸೇವಾ ಯೋಜನೆಗೆ ಅರ್ಜಿಗಳ ಸಲ್ಲಿಸುವುದು ಹೇಗೆ?
ಪ್ರಜಾಸೇವಾ ಸಭೆ ನಡೆಯುವ 15 ದಿನಗಳ ಮುಂಚಿತವಾಗಿ ಮನೆಮನೆಗೆ ತಲುಪಿಸಲಾಗುವ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಸೂಕ್ತ ದಾಖಲೆಗಳ ಪ್ರತಿಯನ್ನು ಲಗತ್ತಿಸಿ ಅಧಿಕಾರಿಗಳಿಗೆ ಅಥವಾ ಸಭೆಯ ದಿನ ನೇರವಾಗಿ ಸಲ್ಲಿಸಬಹುದು. ಪ್ರಜಾಸೇವಾ ಅಭಿಯಾನ ಅಥವಾ ಇಲಾಖೆಯಡಿ ವಿವಿಧ ಸರ್ಕಾರಿ ಸೇವೆಗಳು ಹಾಗೂ ಅಹವಾಲುಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಸಾರ್ವಜನಿಕರು ತಮ್ಮ ಅರ್ಜಿಯ ಜೊತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಬೇಕಾಗುತ್ತದೆ.
- ಮೂಲ ಗುರುತಿನ ಮತ್ತು ವಿಳಾಸ ಪುರಾವೆಗಳು (ಕಡ್ಡಾಯ): ಆಧಾರ್ ಕಾರ್ಡ್, ವೋಟರ್ ಐಡಿ / ಪಡಿತರ ಚೀಟಿ, ಮೊಬೈಲ್ ಸಂಖ್ಯೆ
- ಕುಂದುಕೊರತೆ / ಸಮಸ್ಯೆಗೆ ಸಂಬಂಧಿಸಿದ ದಾಖಲೆಗಳು (ವಿಷಯ ಆಧಾರಿತ): ಖಾತೆ / ಪಹಣಿ / ಜಮೀನು ಸಂಬಂಧಿತ ಸಮಸ್ಯೆಗಳಿದ್ದರೆ ಆಸ್ತಿ ಅಥವಾ ಜಮೀನಿನ ಪಹಣಿ (RTC), ಸ್ವತ್ತಿನ ನೋಂದಣಿ ಪತ್ರ / ಕ್ರಯಪತ್ರ, ವಂಶವೃಕ್ಷ
- ಸಾಮಾಜಿಕ ಭದ್ರತಾ ಯೋಜನೆಗಳು ಮತ್ತು ಪಿಂಚಣಿಗಳಿಗೆ: ಆದಾಯ ಮತ್ತು ಜಾತಿ ಪ್ರಮಾಣಪತ್ರ, ವಿಕಲಚೇತನರಾಗಿದ್ದರೆ ವೈದ್ಯಕೀಯ ಪ್ರಮಾಣಪತ್ರ , ವಿಧವಾ ಪಿಂಚಣಿ / ಹಿರಿಯ ನಾಗರಿಕರ ಪಿಂಚಣಿಗೆ ಸಂಬಂಧಿಸಿದ ದಾಖಲೆಗಳು, ಬ್ಯಾಂಕ್ ಪಾಸ್‌ಬುಕ್ ಪ್ರತಿ
- ರೇಷನ್ ಕಾರ್ಡ್ ತಿದ್ದುಪಡಿ / ಹೊಸ ಕಾರ್ಡ್‌ಗೆ: ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್, ಮಕ್ಕಳ ಜನನ ಪ್ರಮಾಣಪತ್ರ (ಹೊಸ ಹೆಸರು ಸೇರ್ಪಡೆಗೆ)
- ಇತರ ಮೂಲಸೌಕರ್ಯ / ಇಲಾಖೆ ದೂರುಗಳಿಗೆ: ಕಂದಾಯ, ವಿದ್ಯುತ್, ಕುಡಿಯುವ ನೀರು ಹಾಗೂ ಚರಂಡಿ ಸಮಸ್ಯೆಗಳಿದ್ದರೆ ಸಂಬಂಧಿಸಿದ ಹಳೆಯ ರಶೀದಿ ಅಥವಾ ಫೋಟೋ/ಬರಹದ ಮೂಲಕ ಸಿದ್ಧಪಡಿಸಿದ ಅರ್ಜಿ
ಪ್ರತಿ ಬುಧವಾರ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಅರ್ಜಿಗಳ ಪರಿಶೀಲನೆ ನಡೆಯುತ್ತದೆ. ನಿಗದಿತ ಅವಧಿಯಲ್ಲಿ ಕೆಲಸವಾಗದಿದ್ದರೆ ಅರ್ಜಿ ಸ್ವಯಂಚಾಲಿತವಾಗಿ ಮೇಲಾಧಿಕಾರಿಗಳ ಗಮನಕ್ಕೆ ವರ್ಗಾವಣೆಯಾಗುತ್ತದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ