1ಕಿ.ಮೀ ಚಾಲೆಂಜ್ ಹಾಕಿ ಸಾರ್ವಜನಿಕರಿಂದ ಛೀಮಾರಿ ಹಾಕಿಸಿಕೊಂಡ ಜಿಬಿಎ!
ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ನಾಗರಿಕರಿಗೆ ಹೊಸ ಚಾಲೆಂಜ್ವೊಂದನ್ನ ನೀಡಿತ್ತು. 1 ಕಿಲೋ ಮೀಟರ್ ಚಾಲೆಂಜ್ ನೀಡಿ ಪಾದಾಚಾರಿ ಮಾರ್ಗಗಳನ್ನ ಬಳಸುವಂತೆ ಕರೆ ನೀಡಿತ್ತು. ಆದರೆ ಜಿಬಿಎ ಕೊಟ್ಟ ಈ ಬಿಟ್ಟಿ ಸಂದೇಶದ ಮೂಲಕ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ಹಾಗೂ ಟೀಕೆ ವ್ಯಕ್ತವಾಗಿದೆ. ಹಾಗಾದ್ರೆ, ಏನಿದು 1 ಕಿಲೋ ಮೀಟರ್ ಚಾಲೆಂಜ್? ನಾಗರಿಕರಿಂದ ಅಪಹಾಸ್ಯಕ್ಕೀಡಾಗಿದ್ಯಾಕೆ ಎನ್ನುವ ವಿವರ ಇಲ್ಲಿದೆ.

ಬೆಂಗಳೂರು, (ಜೂನ್ 02): ಗ್ರೇಟರ್ ಬೆಂಗಳೂರು ಪ್ರಾಧಿಕಾರ (Greater Bengaluru Authority) ನಾಗರಿಕರಿಗೆ 1 ಕಿಲೋಮೀಟರ್ ಚಾಲೆಂಜ್ ನೀಡಿ, 1 ಕಿಲೋಮೀಟರ್ ವರೆಗಿನ ದೂರ ಕ್ರಮಿಸಲು ವಾಹನಗಳ ಬದಲು ಕಾಲ್ನಡಿಗೆಯನ್ನು ಆಯ್ಕೆ ಮಾಡಬೇಕು ಎಂದು ಸಾಮಾಜಿಕ ಜಾಲತಾಣ X ನಲ್ಲಿ ಪೋಸ್ಟ್ ಮಾಡಿತ್ತು. ಫುಟ್‌ಪಾತ್‌ಗಳನ್ನು ಬಳಸಿಕೊಂಡು ಪರಿಸರ ಸ್ನೇಹಿಯಾಗಿ ನಡೆದುಕೊಳ್ಳಿ ಎಂಬ ಸಂದೇಶವನ್ನು ನೀಡಿದ್ದ GBA, ಈ ಅಭಿಯಾನದ ಮೂಲಕ ವಾಹನ ಬಳಕೆಯನ್ನು ಕಡಿಮೆ ಮಾಡಿ ಪರಿಸರ ಸಂರಕ್ಷಣೆಗೆ ಉತ್ತೇಜನ ನೀಡುವ ಉದ್ದೇಶ ಹೊಂದಿತ್ತು. ಆದರೆ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿ, ನಾಗರಿಕರಿಂದ ತೀವ್ರ ಟೀಕೆಗೆ ಗುರಿಯಾಗಿದೆ.
ಮುಖ್ಯಾಂಶಗಳು
- ನಾಗರಿಕರಿಗೆ ಚಾಲೆಂಜ್ ಹಾಕಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಯಡವಟ್ಟು
- ಫುಟ್ ಪಾತ್ ಬಳಸುವಂತೆ 1ಕಿ.ಮೀ ಚಾಲೆಂಜ್
- ಜಿಬಿಎ ಪೋಸ್ಟ್ ವಿರುದ್ಧ ಛೀಮಾರಿ ಹಾಕಿದ ಜನ
ಹೌದು.. GBA ನೀಡಿದ ಸಲಹೆಗೆ ಪ್ರತಿಕ್ರಿಯಿಸಿದ ಸಾರ್ವಜನಿಕರು, “ಮೊದಲು ನಡೆಯಲು ಯೋಗ್ಯವಾದ ಫುಟ್‌ಪಾತ್‌ಗಳನ್ನು ನಿರ್ಮಿಸಿ, ನಂತರ ಇಂತಹ ಚಾಲೆಂಜ್‌ಗಳನ್ನ ನೀಡಿ ಎಂದು ಪ್ರಶ್ನಿಸಿದರು. ನಗರದಲ್ಲಿ ನೆಟ್ಟಗೆ 100 ಮೀಟರ್ ಕೂಡ ಸುರಕ್ಷಿತವಾಗಿ ನಡೆಯಬಹುದಾದ ಫುಟ್‌ಪಾತ್ ಸಿಗದ ಪರಿಸ್ಥಿತಿ ಇದೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಟಿವಿ9 ಕನ್ನಡ ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ ನಗರದ ಹಲವು ಭಾಗಗಳ ಫುಟ್‌ಪಾತ್‌ಗಳ ದುಸ್ಥಿತಿ ಬಯಲಾಗಿದ್ದು, ಜೆ.ಸಿ ರಸ್ತೆ ಬಳಿ ಕೂಡ ಪಾದಾಚಾರಿ ಮಾರ್ಗ ಹಾಳಾಗಿದೆ.
ಇದನ್ನೂ ಓದಿ: ಧಾರಾಕಾರ ಮಳೆಗೆ ಹೊಳೆಯಂತಾದ ಬೆಂಗಳೂರಿನ ರಸ್ತೆಗಳು: ಲ್ಯಾಂಡಿಂಗ್ ಸಾಧ್ಯವಾಗದೆ ಆಗಸದಲ್ಲೇ ಸುತ್ತಿದ ವಿಮಾನ!
ಕೆಲವೆಡೆ ಪಾದಚಾರಿಗಳು ರಸ್ತೆ ಮೇಲೆ ನಡೆದು ಜೀವ ಪಣಕ್ಕಿಡುವ ಪರಿಸ್ಥಿತಿ ಕಂಡುಬಂದರೆ, ಇನ್ನೂ ಕೆಲವು ಕಡೆಗಳಲ್ಲಿ ಫುಟ್‌ಪಾತ್‌ಗಳು ಅಪಾಯಕಾರಿಯಾಗಿ ಮಾರ್ಪಟ್ಟಿರುವುದು ಬೆಳಕಿಗೆ ಬಂದಿದೆ. ನಾಗರಿಕರ ಮೂಲಭೂತ ಸಮಸ್ಯೆಗಳನ್ನು ಪರಿಹರಿಸದೇ ಬಿಟ್ಟಿ ಸಲಹೆ ನೀಡುವುದಕ್ಕಿಂತ ಮೊದಲು ಸುರಕ್ಷಿತ ಮತ್ತು ಸುಗಮ ಪಾದಚಾರಿ ಮಾರ್ಗಗಳನ್ನು ಕಲ್ಪಿಸಬೇಕು ಎಂಬ ಒತ್ತಾಯ ಸಾರ್ವಜನಿಕ ವಲಯದಲ್ಲಿ ಮತ್ತಷ್ಟು ಗಟ್ಟಿಯಾಗುತ್ತಿದೆ.
ವರದಿ: ಲಕ್ಷ್ಮಿ ನರಸಿಂಹ ಟಿವಿ9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:52 pm, Tue, 2 June 26




