ಬೆಂಗಳೂರು: ನಗರದಲ್ಲಿ ಹೊಸವರ್ಷ ಆಚರಣೆಗೆ ನೈಟ್ ಕರ್ಫ್ಯೂ, ನಿಷೇಧಾಜ್ಞೆ ನಿಯಮಾವಳಿಗಳ ಬೆನ್ನಲ್ಲೇ ಮಳೆರಾಯ ಅಡ್ಡಿಯಾಗಿದ್ದಾನೆ. ಬೆಂಗಳೂರಿನ ಕೆಲವೆಡೆ ಹಾಗೂ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮಳೆ ಸುರಿದಿದೆ. ಕೆಲವೆಡೆ ತುಂತುರು ಮಳೆ ಆದರೆ ಇನ್ನೂ ಕೆಲವು ಕಡೆ ಸಾಧಾರಣ ಮಳೆ ಆಗಿದೆ. ಇದಿರಂದ ಹೊಸ ವರ್ಷ ಆಚರಣೆಯಲ್ಲಿ ತೊಡಗಿದ್ದ ಮಂದಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಇದ್ದಕ್ಕಿದ್ದಂತೆ ಮಳೆ ಶುರುವಾಗಿದೆ. ಹೊಸ ವರ್ಷದ ಖುಷಿಯಲ್ಲಿ ಜನರ ಖರೀದಿ ಭರಾಟೆ ನಡುವೆ ವರುಣ ಅಡ್ಡಿಪಡಿಸಿದ್ದಾನೆ. 10 ಗಂಟೆಗೆ ಸರ್ಕಾರ ನೈಟ್ ಕರ್ಫ್ಯೂ ಹೇರಿರುವ ಕಾರಣ ಜನರು ಬಟ್ಟೆ, ಬರೆ, ಕೇಕ್ ಖರೀದಿಸಲು ಹೊರ ಬಂದಿದ್ದರು. ಸಂಜೆಯಿಂದಲೇ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಓ ಮಧ್ಯೆ, ನಗರದಲ್ಲಿ ಸಂಜೆಯಿಂದಲೇ ಮೋಡ ಕವಿದ ವಾತಾವರಣ ಇತ್ತು. ಚೆನೈ ಸೈಕ್ಲೋನ್ ಪರಿಣಾಮವಾಗಿ ಹೀಗಾಗಿದೆ ಎನ್ನಲಾಗಿತ್ತು. ಸೈಕ್ಲೋನ್ ಬಿಸಿ ಎಲೆಕ್ಟ್ರಾನಿಕ್ ಸಿಟಿಗೂ ತಟ್ಟಿದೆ.
ಬೆಂಗಳೂರಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ವರುಣನ ಸಿಂಚನವಾಗಿದೆ. ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ ಸೇರಿದಂತೆ ಹಲವೆಡೆ ತುಂತುರು ಮಳೆ ಆಗಿದೆ. ಜನರು ತುಂತುರು ಮಳೆಯಲ್ಲಿ ನೆನೆದುಕೊಂಡು ಓಡಾಡುತ್ತಿರುವ ದೃಶ್ಯ ಕಂಡುಬಂದಿದೆ. ಕೋರಮಂಗಲದಲ್ಲಿ ಕೂಡ ತುಂತುರು ಮಳೆಯಿಂದ ಸೆಲೆಬ್ರೇಷನ್ ಮೂಡ್ಗೆ ಅಡ್ಡಿ ಆಗಿದೆ.
ಇಂದು ಮತ್ತು ನಾಳೆ ರಾಜ್ಯಾದ್ಯಂತ ಮಳೆಯಾಗುವ ಸಾಧ್ಯತೆ ಶ್ರೀಲಂಕಾದ ಕರಾವಳಿ, ನೈರುತ್ಯದ ಬಂಗಾಳಕೊಲ್ಲಿಯಲ್ಲಿ ಸುಳಿಗಾಳಿ ಉಂಟಾಗಿದೆ. ನೈರುತ್ಯದ ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಹಿನ್ನೆಲೆ ಕರ್ನಾಟಕದ ಪೂರ್ವ ಭಾಗದ ಕೆಲವು ಜಿಲ್ಲೆಗಳಲ್ಲಿ ಮಳೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇಂದು ಮತ್ತು ನಾಳೆ ರಾಜ್ಯಾದ್ಯಂತ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ದಕ್ಷಿಣ ಒಳನಾಡು, ಬೆಂಗಳೂರು, ಮಂಡ್ಯ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ತುಮಕೂರು ಜೆಲ್ಲೆಯಲ್ಲಿಯೂ ಮಳೆ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಮುಂದಿನ 2 ದಿನ ಸಾಧಾರಣ ಮಳೆ ಸಾಧ್ಯತೆ ಇದೆ ಎಂದು ಟಿವಿ9ಗೆ ಹವಾಮಾನ ಇಲಾಖೆ ತಜ್ಞ ಸದಾನಂದ ಅಡಿಗ ಮಾಹಿತಿ ನೀಡಿದ್ದಾರೆ.
ಮೈಸೂರು: ವರ್ಷಾಂತ್ಯದ ಆಚರಣೆಗೆ ಮಳೆರಾಯನ ಅಡ್ಡಿ ಮೈಸೂರಿನಲ್ಲಿ ಕೂಡ ವರ್ಷಾಂತ್ಯದ ಆಚರಣೆಗೆ ಮಳೆರಾಯನ ಅಡ್ಡಿ ಉಂಟಾಗಿದೆ. ಮೈಸೂರಿನಲ್ಲಿ ದಿಢೀರ್ ಮಳೆ ಸುರಿದಿದೆ. ಮೈಸೂರು ಅರಮನೆಗೆ ಆಗಮಿಸಿದ್ದ ಜನರಿಗೆ ಸಮಸ್ಯೆ ಉಂಟಾಗಿದೆ. ಅರಮನೆ ಫಲಪುಷ್ಪ ಪ್ರದರ್ಶನ ನೋಡಲು ಸಾವಿರಾರು ಜನರು ಬಂದಿದ್ದರು. ಇದೀಗ ದಿಢೀರ್ ಸುರಿದ ಮಳೆಯಿಂದ ಜನರು ವಾಪಸ್ಸಾಗುತ್ತಿದ್ದಾರೆ. ಕ್ಷಣಾರ್ಧದಲ್ಲಿ ಫಲಪುಷ್ಪ ಪ್ರದರ್ಶನದ ಆವರಣ ಖಾಲಿ ಆಗಿದೆ. ಅರಮನೆ ದ್ವಾರಗಳು ದೇವಸ್ಥಾನದ ಬಳಿ ಜನರು ಆಶ್ರಯ ಪಡೆದಿದ್ದಾರೆ.
ಕೋಲಾರದಲ್ಲಿ ಮಳೆ ರಾಯನ ಸಿಂಚನ ಕೋಲಾರ ಜಿಲ್ಲೆಯ ಹಲವೆಡೆ ತುಂತುರು ಮಳೆ ಆಗಿದೆ. ಕಳೆದ ಒಂದು ಗಂಟೆಯಿಂದ ಜಿಲ್ಲೆಯ ಹಲವೆಡೆ ಮಳೆಯ ಸಿಂಚನವಾಗಿದೆ. ಹೊಸ ವರ್ಷದ ಸಂಭ್ರಮದಲ್ಲಿದ್ದ ಜನಕ್ಕೆ ಮಳೆ ಅಡ್ಡಿ ಆಗಿದೆ. ವರ್ಷವಿಡೀ ಸುರಿದಿದ್ದ ಮಳೆ ವರ್ಷದ ಕೊನೆಯ ದಿನವೂ ಬಂದಿದೆ. ಬೆಳಗಿನಿಂದ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಇತ್ತು, ಇದೀಗ ಮಳೆ ಸುರಿದಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಸಂಜೆ 6 ರಿಂದ ಶನಿವಾರ ಬೆಳಗ್ಗೆ 5 ಗಂಟೆ ವರೆಗೆ ನಿಷೇಧಾಜ್ಞೆ ಜಾರಿ: ಕಮಲ್ ಪಂತ್ ಆದೇಶ
ಇದನ್ನೂ ಓದಿ: ಬೆಂಗಳೂರು: ಹೊಸವರ್ಷ ಆಚರಣೆಗೆ ಬ್ರೇಕ್: ಗಲ್ಲಿಗಲ್ಲಿಗಳಲ್ಲಿ ನಾಕಾಬಂದಿ ಹಾಕಿ ಪೊಲೀಸರ ಬಿಗಿ ಬಂದೊಬಸ್ತ್