
ಬೆಂಗಳೂರು, (ಸೆಪ್ಟೆಂಬರ್ 28): ಕೆಂಗೇರಿ ಸಮೀಪದ ಆರ್.ಆರ್ ವೈದ್ಯಕೀಯ ಕಾಲೇಜು ಹಿಂಭಾಗದಲ್ಲಿ ಆನೆ ದಾಳಿಗೆ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಅಂಚೆಪಾಳ್ಯ ಗ್ರಾಮದ ನಾಗರಾಜ್ ಮೃತ ದುರ್ದೈವಿ. ಇಂದು (ಸೆಪ್ಟೆಂಬರ್ 28) ಬೆಳಗ್ಗಿನ ಜಾವ 5 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಸ್ಥಳೀಯ ನಿವಾಸಿಗಳು ಅವರನ್ನು ತಕ್ಷಣವೇ ಮೈಸೂರು ರಸ್ತೆಯಲ್ಲಿರುವ ಆರ್.ಆರ್. ವೈದ್ಯಕೀಯ ಕಾಲೇಜಿಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ವಾಕಿಂಗ್‌ಗೆ ಹೋಗಿದ್ದ ವ್ಯಕ್ತಿ ಮೇಲೆ ಆನೆ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಇನ್ನು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ಮೃತ ನಾಗರಾಜ್ ಅವರ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವಾನ ಹೇಳಿದರು. ಜೊತೆಗೆ 20 ಲಕ್ಷ ರೂಪಾಯಿ ಪರಿಹಾರ ಘೋಷಿಸಿದರು.
ಇನ್ನು ಘಟನಾ ಸ್ಥಳದಲ್ಲಿ ಆನೆ ದಾಳಿಯಿಂದಾಗಿ ಎರಡೂ ಕಾಂಪೌಂಡ್‌ಗಳೂ ಸಹ ಉರುಳಿಬಿದ್ದಿದೆ. ಸಿಸಿಟಿವಿಯಲ್ಲಿ ರಸ್ತೆಯಲ್ಲಿ ಆನೆ ಓಡಾಟ ಮಾಡಿರೋದು ಬೆಳಕಿಗೆ ಬಂದಿದೆ. ಬೆಳಗ್ಗೆ 5 ಗಂಟೆ 11 ನಿಮಿಷಕ್ಕೆ ಆನೆ ರಸ್ತೆಯಲ್ಲಿ ವೇಗವಾಗಿ ಓಡುವ ಸಿಸಿಟಿವಿ ದೃಶ್ಯ ಲಭ್ಯವಾಗಿದೆ. ಇನ್ನು ಅದೇ ರಸ್ತೆಯಲ್ಲಿ ಜಾಗಿಂಗ್ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಕೆಲವೇ ಸೆಕೆಂಡ್‌ಗಳಲ್ಲಿ ಆನೆದಾಳಿಯಿಂದ ಬಚಾವಾಗಿದ್ದಾರೆ.
ಈ ಘಟನೆಯು ಕಗ್ಗಲಿಪುರ ಅರಣ್ಯ ವಲಯದ ವ್ಯಾಪ್ತಿಯಲ್ಲಿ ನಡೆದಿದೆ ಮತ್ತು ಆನೆಯು ಬನ್ನೇರುಘಟ್ಟ ಪ್ರದೇಶದಿಂದ ಬಂದಿರಬಹುದು ಎಂದು ಶಂಕಿಸಲಾಗಿದೆ . ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಆನೆಯನ್ನು ಪತ್ತೆಹಚ್ಚಿ ಸೆರೆಹಿಡಿಯಲು ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ನಾಗರಾಜ್ ಅವರು ತಮ್ಮ ಪತ್ನಿ ಮತ್ತು ನಾಲ್ವರು ಹೆಣ್ಣುಮಕ್ಕಳೊಂದಿಗೆ ವಾಸಿಸುತ್ತಿದ್ದರು ಹಾಗೂ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಈ ಘಟನೆ ಅಂಚೆಪಾಳ್ಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ನಿವಾಸಿಗಳಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಈ ಭಾಗದಲ್ಲಿ ಕಳೆದ ಕೆಲ ದಿನಗಳಿಂದಲೂ ಕಾಡು ಪ್ರಾಣಿಗಳ ಸಂಚಾರದ ಬಗ್ಗೆ ಮಾಹಿತಿ ಇದ್ದರೂ ಸಹ ಅರಣ್ಯ ಇಲಾಖೆಯ ಅಧಿಕಾರಿಗಳು ಯಾವುದೇ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯವೇ ನಾಗರಾಜು ಅವರ ಸಾವಿಗೆ ನೇರ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೊಸದಾಗಿ ರಸ್ತೆ ಆದ ಬಳಿಕ ಆನೆಗಳ ಓಡಾಟ ಹೆಚ್ಚಾಗಿದೆ. ಬನ್ನೇರುಘಟ್ಟದಿಂದ ಬಿಎಂಕಾವಲ್ ಭಾವಗವಾಗಿ ಓಡಾಡುತ್ತಿದ್ದು, ಕಾಡು ಬಿಟ್ಟು 5 ಕಿ.ಮೀ ಒಳಗಡೆ ಬಂದಿದೆ. ಇನ್ನು ನಾಗರಾಜ್ ಅವರು ವಾಕಿಂಗ್ ಮಾಡುತ್ತಿದ್ದಾಗ ಆನೆ ಸೊಂಡಿಲಿನಲ್ಲಿ ಎತ್ತಿ ಬಿಸಾಡಿದೆ. ಆನೆ ಸೆರೆಗೆ ಅರಣ್ಯ ಇಲಾಖೆಯ ತಂಡ ಕಾರ್ಯನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಸೂಕ್ತ ಕ್ರಮ ವಹಿಸಲಾಗುತ್ತದೆ. ಮೃತರ ಕುಟುಂಬಸ್ಥರಿಗೆ 20 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಅರಣ್ಯ ಸಚಿವ ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ.