ಬೆಂಗಳೂರು: ನಗರದಲ್ಲಿ ರಸ್ತೆ ಗುಂಡಿ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಹಣ ಪೋಲಾಗುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಆರೋಪ ಮಾಡಿದರು. ಬೆಂಗಳೂರಿನಲ್ಲಿ ಪ್ರಮುಖ ರಸ್ತೆಗಳೇ ಹಾಳಾಗಿ ಹೋಗಿದೆ. ಬಿಜೆಪಿ ಸರ್ಕಾರ ಬಂದು 2 ವರ್ಷ 4 ತಿಂಗಳು ಆಗಿದೆ. ಆದರೆ ಇವರಿಂದ ರಸ್ತೆ ಗುಂಡಿ ಮುಚ್ಚುವುದಕ್ಕೆ ಆಗುತ್ತಿಲ್ಲ. ಬಿಜೆಪಿಯವರು ಸ್ವತಃ ಅಭಿವೃದ್ಧಿ ಕೆಲಸ ಮಾಡುವುದಿಲ್ಲ, ಬೇರೆಯವರು ಮಾಡಿದರೆ ಅದಕ್ಕೆ ಟೀಕೆ ಮಾಡುತ್ತಾರೆ. ಅಭಿವೃದ್ಧಿ ಕೆಲಸ ಮಾಡಿದರೆ ಅದಕ್ಕೆ ಟೀಕೆ ಮಾಡುತ್ತಾರೆ ಎಂದು ವಿಷಾದಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ರಸ್ತೆ ನಮ್ಮ ವಿರುದ್ಧ ಅಕ್ರಮ ನಡೆಸಿರುವ ಆರೋಪ ಮಾಡುತ್ತಿದ್ದರು. ಈಗ ಬೆಂಗಳೂರು ನಗರದಲ್ಲಿಯೇ 7 ಮಂದಿ ಸಚಿವರಿದ್ದಾರೆ. ಮುಖ್ಯಮಂತ್ರಿ ಬಳಿಯೇ ಬೆಂಗಳೂರು ನಗರ ಉಸ್ತುವಾರಿ ಖಾತೆ ಇದೆ. ನಾನು ಉಸ್ತುವಾರಿಯಾಗಿದ್ದಾಗ ವಾರಕ್ಕೆ 3 ಬಾರಿ ಸಿಟಿ ರೌಂಡ್ಸ್ ಮಾಡುತ್ತಿದ್ದೆ. ಆದರೆ ಇವರೇನು ಮಾಡುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದರು.
ಟಿವಿಗಳಲ್ಲಿ ಪತ್ರಿಕೆಗಳಲ್ಲಿ ಪ್ರತಿನಿತ್ಯ ರಸ್ತೆ ಗುಂಡಿ ಬಗ್ಗೆ ಸುದ್ದಿ ಬರುತ್ತಲೇ ಇದೆ. ಮಳೆ ಬಂದಾಗ ಯಾವಾಗಲೂ ಸಮಸ್ಯೆ ಆಗಿದೆ. ನಮ್ಮ ಸರ್ಕಾರದ ಇದ್ದಾಗ ರಸ್ತೆಗಳು ಅಭಿವೃದ್ಧಿ ಆಗಿದ್ದವು. ಬಿಜೆಪಿ ಅವರಿಗೆ ಆಡಳಿತ ಮಾಡಲು ಬರುವುದಿಲ್ಲ. ಯಾರಾದರೂ ಆಡಳಿತ ಮಾಡಿದ್ರೆ ದೂರೋಕೆ ಮಾತ್ರ ಚೆನ್ನಾಗಿ ಬರುತ್ತೆ. ಹೈಕೋರ್ಟ್ ಸಹ ಬಿಜೆಪಿ ಸರ್ಕಾರಕ್ಕೆ ಛೀಮಾರಿ ಹಾಕಿದೆ. ರಸ್ತೆಗಳು ಕಿತ್ತು ಹೋಗಿವೆ, ದೂಳು ಹೆಚ್ಚಾಗಿದೆ. ನಾವು ಅಧಿಕಾರದಲ್ಲಿದ್ದಾಗ ರಸ್ತೆ ಅಭಿವೃದ್ಧಿಗಾಗಿ 2ರಿಂದ 3 ಸಾವಿರ ಕೋಟಿ ಅನುದಾನ ಕೊಟ್ಟಿದ್ದೆವು. ಟೆಂಡರ್ ಶ್ಯೂರ್ ನೀತಿ ಜಾರಿ ಮಾಡಿದ್ದೆವು. ಬಿಜೆಪಿ ಸರ್ಕಾರ ಅದ್ಯಾವುದನ್ನೂ ಮಾಡುತ್ತಿಲ್ಲ ಎಂದು ಹೇಳಿದರು.
ಬಿಜೆಪಿಯವರು ಯಾವ ಪುರುಷಾರ್ಥಕ್ಕೆ ಸರ್ಕಾರ ನಡೆಸ್ತಿದ್ದಾರೆ ಎನ್ನುವುದೇ ಗೊತ್ತಾಗುತ್ತಿಲ್ಲ. ಸಿದ್ದರಾಮಯ್ಯ ಆಡಳಿತ ಅವಧಿ ಮತ್ತು ಮೈತ್ರಿ ಸರ್ಕಾರದಲ್ಲಿ ಮಾತ್ರ ನಗರಾಭಿವೃದ್ಧಿಗೆ 7 ಸಾವಿರ ಕೋಟಿ ಅನುದಾನ ಸಿಕ್ಕಿದೆ. ಈ ಹಿಂದೆ ಕೊಟ್ಟ ಅನುದಾನ ಬಿಟ್ಟೆ ಬೇರೆ ಯಾವುದೂ ಬಂದಿಲ್ಲ. ಘೋಷಣೆ ಮಾಡಿದ್ದಾರೆ, ಅನುದಾನ ಬಿಡುಗಡೆಯಾಗಿಲ್ಲ. ಅನುದಾನ ಕೊಟ್ಟಿದ್ದೇವೆ ಎನ್ನುವುದಾದರೆ ಅವರೇ ಹೇಳಿಬಿಡಲಿ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಗರ ಪ್ರದಕ್ಷಿಣಿ ಮಾಡಿದರೂ ಪ್ರಯೋಜನವಾಗಿಲ್ಲ. ಬೆಂಗಳೂರು ನಗರದಲ್ಲಿ ರಸ್ತೆ ಗುಂಡಿ ಮುಚ್ಚಲು ಆಗಲಿಲ್ಲ. ನನಗೆ ಜವಾಬ್ದಾರಿ ಕೊಟ್ಟು ನೋಡಿ, ನಾನು ಮಾಡಿ ತೋರಿಸುತ್ತೇನೆ ಎಂದು ಸವಾಲು ಹಾಕಿದರು.
ಬಿಟ್ ಕಾಯಿನ್ ಪ್ರಕರಣದ ಮಾಹಿತಿ ಪ್ರಧಾನಿ ಕಚೇರಿಗೆ ಹೋಗಿದೆ. ಅದು ಹೊರಬಂದ್ರೆ ಸರ್ಕಾರಕ್ಕೆ ಕಂಟಕವಿದೆ. ಪ್ರಧಾನಿ ಕಚೇರಿಯಿಂದ ಟಿಪ್ಪಣಿ ಬಂದ ಬಳಿಕ ಶ್ರೀಕಿಯನ್ನು ಬಂಧಿಸಲಾಗಿದೆ. ಇದರಲ್ಲಿ ಪ್ರಭಾವಿ ನಾಯಕರು ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಭಾವಿಗಳು ಅಂದ್ರೆ ಸಹಜವಾಗಿ ಆಡಳಿತ ಪಕ್ಷದವರೇ ಇರ್ತಾರೆ. ಈ ಕೇಸ್‌ನಲ್ಲಿ ಆಡಳಿತ ಪಕ್ಷದ ನಾಯಕರ ಹೆಸರು ಹೊರಬಂದರೆ ಬೊಮ್ಮಾಯಿ ಸರ್ಕಾರಕ್ಕೆ ಕಂಟಕವಾಗುತ್ತೆ ಎಂದು ಅಭಿಪ್ರಾಯಪಟ್ಟರು. ಬಿಟ್ ಕಾಯಿನ್ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು. ರಾಜ್ಯ ಸರ್ಕಾರ ನಡೆಸುವ ತನಿಖೆಯಲ್ಲಿ ನನಗೆ ನಂಬಿಕೆಯಿಲ್ಲ ಎಂದು ರಾಮಲಿಂಗಾರೆಡ್ಡಿ ನುಡಿದರು.
ಇದನ್ನೂ ಓದಿ: ಗಡಿ ಭಾಗದಲ್ಲಿ ಮಧ್ಯರಾತ್ರಿ ಡ್ರೋಣ್ ಹಾರಾಟ; ಬಿಎಸ್ಎಫ್ ಯೋಧರಿಂದ ಗುಂಡಿನ ದಾಳಿ
ಇದನ್ನೂ ಓದಿ: ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಿಸುವಂತೆ ಸಿಎಂ ಬೊಮ್ಮಾಯಿಗೆ ಬಾಲಕಿ ಮನವಿ; ವಿಡಿಯೋ ವೈರಲ್