ಬೆಂಗಳೂರಿನ ಪ್ರಾಣಿ ಪ್ರಿಯರಿಗೆ, ಶ್ವಾನ ಮಾಲೀಕರಿಗೆ ವೈದ್ಯರಿಂದ ಮಹತ್ವದ ಎಚ್ಚರಿಕೆ
ಬೆಂಗಳೂರಿನ ಪ್ರಾಣಿ ಪ್ರಿಯರು, ಶ್ವಾನ ಮಾಲೀಕರಿಗೆ ಆರೋಗ್ಯದ ವಿಚಾರವಾಗಿ ವೈದ್ಯರು ಮಹತ್ವದ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಇದನ್ನು ನಿರ್ಲಕ್ಷಿಸಿದಲ್ಲಿ ಗಂಭೀರ ಅಪಾಯ ಎದುರಾಗುವ ಸಾಧ್ಯತೆ ಇದೆ. ಹಾಗಾದರೆ ವೈದ್ಯರು ನೀಡಿದ ಎಚ್ಚರಿಕೆ ಏನು? ಯಾಕಾಗಿ ನೀಡಿದ್ದಾರೆ? ಎಲ್ಲ ವಿವರಗಳಿಗೆ ಮುಂದೆ ಓದಿ.
ಬೆಂಗಳೂರು, ಮೇ 28: ಬೆಂಗಳೂರಿನ (Bengaluru) ಪ್ರಾಣಿ ಪ್ರಿಯರು, ಶ್ವಾನ ಮಾಲೀಕರು (Dog Owners) ಎಚ್ಚರಿಕೆ ಇರಬೇಕು ಎಂದು ಪಶು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಅತಿಯಾದ ಪ್ರೀತಿ ಮುಳುವಾಗಬಹುದು. ಜಾಗರೂತೆಯಿಂದ ಇರಿ ಎಂದು ಅವರು ಸಲಹೆ ನೀಡಿದ್ದಾರೆ. ಬೆಂಗಳೂರಿನ ನಾಯಿಗಳಲ್ಲಿ ಇತ್ತೀಚೆಗೆ ಇಲಿಜ್ವರ (Rat Fever / Leptospirosis) ಪ್ರಕರಣಗಳು ಹೆಚ್ಚಾಗಿರುವುದೇ ಇದಕ್ಕೆ ಕಾರಣ. ನಗರದ ನಾಯುಗಳಲ್ಲಿ ಕಳೆದ ಕೆಲವು ದಿನಗಳಲ್ಲಿ ಇಲಿ ಜ್ವರ ಪ್ರಕರಣಗಳು ಶೇ 10 ರಿಂದ 15 ರಷ್ಟು ಜಾಸ್ತಿಯಾಗಿವೆ.
ಇತ್ತೀಚಿಗೆ ನಾಯಿಗಳು ಹಾಗೂ ಬೆಕ್ಕುಗಳನ್ನು ಸಾಕುವವರ ಸಂಖ್ಯೆ ನಗರದಲ್ಲಿ ಹೆಚ್ಚಾಗಿದೆ. ಜತೆಗೆ, ಈ ಪ್ರಾಣಿಗಳಲ್ಲಿ ರೋಗಗಳು ಕೂಡ ಹೆಚ್ಚಾಗುತ್ತಿವೆ. ಇಷ್ಟು ದಿನ ಇಲಿಗಳಿಂದ ಇಲಿಜ್ವರ ಬರುತ್ತಿತ್ತು. ಆದರೆ ಈಗ ಇಲಿಗಳಿಂದ ನಾಯಿಗಳಿಗೆ ಇಲಿಜ್ವರ ಹರಡಿ ನಂತರ ಆ ಮೂಲಕ ಜನರಿಗೆ ಹರಡುತ್ತಿದೆ ಎನ್ನಲಾಗಿದೆ. ಹೀಗಾಗಿ ಜನರು ಎಚ್ಚರಿಕೆಯಿಂದ ಇರಬೇಕಾಗಿದೆ.
ಇಲಿಗಳಿಂದ ಹರಡುವ ರೋಗಗಳಲ್ಲಿ ಪ್ರಮುಖವಾಗಿ ಲೆಪ್ಟೋಸ್ಪೇಯರ್ ಅಂದರೆ, ಇಲಿಜ್ವರ ಹೆಚ್ಚಾಗಿ ಹರಡುತ್ತದೆ. ಇದು ಇಲಿಗಳ ಮೂತ್ರದಿಂದ ಹರಡುತ್ತಿದ್ದು, ಇಲಿಗಳಿಂದ ಪ್ರಾಣಿಗಳಿಗೆ – ಪ್ರಾಣಿಗಳಿಂದ – ಮನುಷ್ಯನಿಗೆ ಹರಡುತ್ತದೆ. ಸದ್ಯ ಈ ಇಲಿಜ್ವರಕ್ಕೆ ಪ್ರಾಣಿಗಳಿಗೆ ಮಾತ್ರ ಲಸಿಕೆ ಇದೆ. ಆದರೆ ಮನುಷ್ಯರಿಗೆ ಯಾವುದೇ ಲಸಿಕೆ ಇಲ್ಲ. ಹೀಗಾಗಿ ಇಲಿ ಜ್ವರದ ಬಗ್ಗೆ ಜನರು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸಬಾರದು ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.
ನಾಯಿಗಳನ್ನು ವಾಕಿಂಗ್ ಕರೆದುಕೊಂಡು ಹೋಗುವಾಗ ಎಚ್ಚರ
ನಾಯಿಗಳನ್ನು ವಾಕಿಂಕ್ ಕರೆದುಕೊಂಡು ಹೋಗುವಾಗ ಅಥವ ನಾಯಿಗಳನ್ನು ಆಟ ಆಡಲು ಬಿಟ್ಟಾಗ ಅವುಗಳು ಇಲಿಗಳ ಮೂತ್ರದ ಮೇಲೆ ಓಡಾಡಿದ ಸಂದರ್ಭದಲ್ಲಿ ಈ ಇಲಿಜ್ವರ ಹರಡುವ ಸಾಧ್ಯತೆ ಇದೆ. ಹೀಗಾಗಿ ನಾಯಿಗಳನ್ನು ವಾಕಿಂಗ್ ಕರೆದುಕೊಂಡು ಹೋಗಿ ಬಂದ ನಂತರ ಸ್ನಾನ ಮಾಡಿಸುವುದು ಉತ್ತಮ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಈ ಕುರಿತು ಪಶುವೈದ್ಯ ಮೋಹನ್ ಶೆಟ್ಟರ್ ಕೂಡ ಸಲಹೆ ಸೂಚನೆಗಳನ್ನು ನೀಡಿದ್ದಾರೆ.
ನಾಯಿಗಳಲ್ಲಿ ಇಲಿ ಜ್ವರದ ಲಕ್ಷಣಗಳೇನು?
- ನಾಯಿಗಳಿಗೆ ಅತೀವ ಜ್ವರ ಬರುವುದು
- ನಾಯಿಗಳ ಕಣ್ಣುಗಳು ಹಳದಿಯಾಗುವುದು
- ನಾಯಿಗಳಿಗೆ ವಾಂದಿ ಬೇಧಿ
- ಜಾಂಡೀಸ್
- 104/114 ಡಿಗ್ರಿವರೆಗೂ ಜ್ವರದ ಪ್ರಮಾಣ
- ನಾಯಿಗಳ ಸ್ವಾಧೀನ ಕಡಿಮೆಯಾಗುವುದು
ಏನೆಲ್ಲ ಮುನ್ನೆಚ್ಚರಿಕೆ ವಹಿಸಬೇಕು?
- ನಾಯಿಗಳನ್ನು ವಾಕಿಂಗ್ ಕರೆದುಕೊಂಡು ಹೋಗುವಾಗ ಜಾಗ್ರತೆ ವಹಿಸುವುದು
- ನಾಯಿಗಳಿಗೆ ಪ್ರತಿದಿನ ಸ್ನಾನ ಮಾಡಿಸುವುದು
- ಇಲಿಜ್ವರದ ಲಸಿಕೆ ಹಾಕಿಸುವುದು
- ಹೊರಗಿನಿಂದ ಬಂದ ನಾಯಿಯಿಂದ ಮಕ್ಕಳನ್ನ ದೂರವಿರಿಸುವುದು
- ನಾಯಿ ತಿಂದು ಬಿಟ್ಟ ಆಹಾರಗಳನ್ನು ಎಸೆಯುವುದು
ಇದನ್ನೂ ಓದಿ: ಒಂದು ಕಟ್ಟು ನಾಟಿ ಕೊತ್ತಂಬರಿ ಸೊಪ್ಪಿಗೆ ಬರೋಬ್ಬರಿ 100 ರೂ! ಇಲ್ಲಿದೆ ಬೆಂಗಳೂರಿನ ತರಕಾರಿ ದರ ಪಟ್ಟಿ
ಒಟ್ಟಿನಲ್ಲಿ ಶ್ವಾನಪ್ರಿಯರು ಇದೀಗ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾದ ಅಗತ್ಯವಿದೆ. ಇಲ್ಲವಾದಲ್ಲಿ ಇಲಿ ಜ್ವರದಂಥ ಮಾರಕ ರೋಗಗಳ ಹರಡುವಿಕೆ ಹೆಚ್ಚಾಗಬಹುದು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ