ಗೃಹಜ್ಯೋತಿ ಯೋಜನೆ ಬಗ್ಗೆ ಇನ್ನೂ ಗೊಂದಲ ಇದೆಯೇ? ನಿಮ್ಮೆಲ್ಲ ಸಂದೇಹಗಳಿಗೆ ಬೆಸ್ಕಾಂ ನೀಡಿದ ಉತ್ತರ ಇಲ್ಲಿದೆ

ಗೃಹಜ್ಯೋತಿ ಯೋಜನೆ ಬಗ್ಗೆ ಜನರಲ್ಲಿರುವ ಗೊಂದಲ ಪರಿಹಾರಕ್ಕೆ ಮುಂದಾಗಿರುವ ಬೆಸ್ಕಾಂ, ಗ್ರಾಹಕರು ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳನ್ನೂ ಅವುಗಳಿಗೆ ಉತ್ತರವನ್ನೂ ಪ್ರಕಟಣೆ ರೂಪದಲ್ಲಿ ನೀಡಿದೆ. ವಿವರ ಇಲ್ಲಿದೆ.

ಗೃಹಜ್ಯೋತಿ ಯೋಜನೆ ಬಗ್ಗೆ ಇನ್ನೂ ಗೊಂದಲ ಇದೆಯೇ? ನಿಮ್ಮೆಲ್ಲ ಸಂದೇಹಗಳಿಗೆ ಬೆಸ್ಕಾಂ ನೀಡಿದ ಉತ್ತರ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
|

Updated on:Jun 24, 2023 | 3:04 PM

ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಸರ್ಕಾರದ ಉಚಿತ ಗ್ಯಾರಂಟಿಗಳಲ್ಲಿ ಒಂದಾದ 200 ಯೂನಿಟ್ ವರೆಗೆ ವಿದ್ಯುತ್ ಉಚಿತವಾಗಿ ನೀಡುವ ಗೃಹಜ್ಯೋತಿ ಯೋಜನೆಗೆ (Gruha Jyothi Scheme) ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಲಕ್ಷಾಂತರ ಮಂದಿ ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ಆದಾಗ್ಯೂ, ಯೋಜನೆಯ ಬಗ್ಗೆ ಅನೇಕರಲ್ಲಿ ಇನ್ನೂ ಗೊಂದಲಗಳಿವೆ. ಹೀಗಾಗಿ ನಾಗರಿಕರಲ್ಲಿರುವ ಗೊಂದಲ ಬಗೆಹರಿಸಲು ಮುಂದಾಗಿರುವ ಬೆಸ್ಕಾಂ (BESCOM), ಪ್ರಶ್ನೋತ್ತರದ ರೂಪದಲ್ಲಿ ವಿಸ್ತೃತ ಮಾಹಿತಿ ನೀಡಿದೆ. ಗ್ರಾಹಕರಲ್ಲಿ ಸಾಮಾನ್ಯವಾಗಿ ಮೂಡಿಬರುವ ಪ್ರಶ್ನೆಗಳು ಹಾಗೂ ಅದಕ್ಕೆ ಉತ್ತರವನ್ನು ಬೆಸ್ಕಾಂ ನೀಡಿ ಟ್ವೀಟ್ ಮಾಡಿದೆ.

ಇಷ್ಟೇ ಅಲ್ಲದೆ, ಇನ್ನೂ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ 1912 ಸಂಖ್ಯೆಯ ಸಹಾಯವಾಣಿಗೆ ಕರೆ ಮಾಡಬಹುದು ಎಂದು ಉಲ್ಲೇಖಿಸಿದೆ. ಗೃಹ ಜ್ಯೋತಿ ಯೋಜನೆ ಬಗ್ಗೆ ಪದೇ ಪದೇ ಕೇಳಲಾಗುವ ಪ್ರಶ್ನೆಗಳು ಎಂದು ಬೆಸ್ಕಾಂ ಪಟ್ಟಿ ಮಾಡಿದೆ. ಅವುಗಳನ್ನು ಯಥಾವತ್ ಇಲ್ಲಿ ನೀಡಲಾಗಿದೆ.

– ನಾನು ಈ ಯೋಜನೆಗೆ ಅರ್ಹನೇ?

ಕರ್ನಾಟಕ ರಾಜ್ಯದ ಎಲ್ಲಾ ಗೃಹ ಬಳಕೆ ಗ್ರಾಹಕರು ಈ ಯೋಜನೆಗೆ ಅರ್ಹರಾಗಿರುತ್ತಾರೆ.

– ಗೃಹ ಜ್ಯೋತಿ ಯೋಜನೆ ಎಂದರೇನು?

ಗೃಹ ಜ್ಯೋತಿ ಕರ್ನಾಟಕ ಸರ್ಕಾರದ ಪ್ರಮುಖ ಯೋಜನೆಯಾಗಿದ್ದು, ಇದು ಕರ್ನಾಟಕದ ಪ್ರತಿ ಗೃಹ ಬಳಕೆದಾರರಿಗೆ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್‌ ಅನ್ನು ಒದಗಿಸುತ್ತದೆ.

– ಈ ಯೋಜನೆಯನ್ನು ಪಡೆಯಲು ನಾನು ಏನು ಮಾಡಬೇಕು?

ಈ ಯೋಜನೆಯನ್ನು ಪಡೆಯಲು ಸೇವಾ ಸಿಂಧು ವೆಬ್‌ಸೈಟ್​​ನಲ್ಲಿ ನೋಂದಾಯಿಸಿಕೊಳ್ಳಬೇಕು. ನೋಂದಣಿಯು ಜೂನ್‌ 18 ರಿಂದ ಪ್ರಾರಂಭವಾಗಿದೆ.

– ಈ ಯೋಜನೆಯನ್ನು ಯಾವಾಗಿನಿಂದ ಜಾರಿಗೆ ತರಲಾಗುತ್ತದೆ?

2023 ರ ಜುಲೈಯಲ್ಲಿ ಬಳಸಿದ ವಿದ್ಯುತ್‌ಗೆ ಆಗಸ್ಟ್‌ 1, 2023 ರಿಂದ ನೀಡುವ ಬಿಲ್ಲಿಗೆ ಅನ್ವಯವಾಗುವಂತೆ ಯೋಜನೆಯನ್ನು ಜಾರಿಗೊಳಿಸಲಾಗುವುದು.

– ಯೋಜನೆಗೆ ಆಫ್​​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದೇ?

ಹೌದು. ಎಲ್ಲಾ ಗೃಹಬಳಕೆ ಗ್ರಾಹಕರು ಗ್ರಾಮ ಒನ್‌, ಕರ್ನಾಟಕ ಒನ್‌, ಬೆಂಗಳೂರು ಒನ್‌ ಕೇಂದ್ರಗಳಲ್ಲಿ, ಗ್ರಾಮ ಪಂಚಾಯತ್‌ ಮತ್ತು ನಾಡಕಛೇರಿ ಹಾಗೂ ವಿದ್ಯುತ್‌ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತಿದೆ.

– ಈ ಯೋಜನೆ ಪಡೆಯಲು ಯಾವುದೆಲ್ಲಾ ದಾಖಲೆ ಸಲ್ಲಿಸಬೇಕು?

ಆಧಾರ್‌ ಸಂಖ್ಯೆ, ಬಿಲ್ಲಿನಲ್ಲಿ ನಮೂದಿಸಲಾಗಿರುವ ಗ್ರಾಹಕರ ಖಾತೆ ಸಂಖ್ಯೆ, ಮೊಬೈಲ್‌ ಸಂಖ್ಯೆ ಸಲ್ಲಿಸಬೇಕು.

– ಅರ್ಜಿ ಸಲ್ಲಿಸುವಾಗ ನಾನು ಶುಲ್ಕ ಪಾವತಿಸಬೇಕೆ?

ಈ ಯೋಜನೆಯಡಿಯಲ್ಲಿ ಯಾವುದೇ ಶುಲ್ಕವನ್ನು ಸೇವಾ ಸಿಂಧು ಪೋರ್ಟಲ್‌ ನಲ್ಲಿ ಪಾವತಿಸಬೇಕಾಗಿರುವುದಿಲ್ಲ.

– ನಾನು ಜೂನ್‌ ತಿಂಗಳ ವಿದ್ಯುತ್‌ ಬಿಲ್ಲನ್ನು ಪಾವತಿಸಬೇಕೆ?

ಹೌದು. ಆಗಸ್ಟ್‌ 1, 2023 ರಿಂದ ನೀಡುವ ಬಿಲ್ಲಿಗೆ ಅನ್ವಯವಾಗುವಂತೆ (ಜುಲೈ 2023 ರಲ್ಲಿ ಬಳಸಿದ ವಿದ್ಯುತ್‌ ಬಳಕೆಯನ್ನು) ಯೋಜನೆಯನ್ನು ಜಾರಿಗೊಳಿಸಲಾಗುವುದು.

– ನನಗೆ ಒಂದಕ್ಕಿಂತ ಹೆಚ್ಚು ವಿದ್ಯುತ್‌ ಮಾಪಕಗಳಿದ್ದರೆ, ನಾನು ಎಲ್ಲಾ ಮಾಪಕಗಳಿಗೆ ಅರ್ಹನಿರುವೇನೆ?

ಇಲ್ಲ. ಪ್ರತಿ ಮನೆಯ ಒಂದು ಮೀಟರ್​​ ಮಾತ್ರ ಈ ಯೋಜನೆಯಡಿ ಸೌಲಭ್ಯ ಪಡೆಯಲು ಅರ್ಹವಾಗಿರುತ್ತದೆ.

– ಅರ್ಜಿ ಸಲ್ಲಿಸಿದ ನಂತರ ನಾನು ಯಾವುದೇ ಸ್ವೀಕೃತಿಯನ್ನು ಪಡೆಯಬಹುದೇ?

ಹೌದು, ನೋಂದಣಿ ಸಮಯದಲ್ಲಿ ಸ್ವೀಕೃತಿ ಪತ್ರವನ್ನು ಗ್ರಾಹಕರಿಗೆ ನೀಡಲಾಗುತ್ತದೆ.

– ನಾನು ಈಗಾಗಲೇ ಈ ಯೋಜನೆಗೆ ಅರ್ಜಿ ಸಲ್ಲಿಸಿದ್ದೇನೆ, ಯೋಜನೆಯ ಲಾಭವು ಯಾವಾಗ ನನ್ನ ಖಾತೆಗೆ ಸೇರಲು ಪ್ರಾರಂಭವಾಗುತ್ತದೆ?

ಜುಲೈ 2023 ರಲ್ಲಿ ನೀಡಲಾದ ಬಿಲ್‌ ಅನ್ನು ಪೂರ್ಣವಾಗಿ ಪಾವತಿಸಬೇಕಾಗುತ್ತದೆ. ಯೋಜನೆಯ ಪ್ರಯೋಜನಗಳು ಆಗಸ್ಟ್‌ 1, 2023 ರಿಂದ ಅನ್ವಯಿಸುತ್ತದೆ. (ಜುಲೈ-2023 ರ ವಿದ್ಯುತ್‌ ಬಳಕೆಗಾಗಿ).

– ನಾನು ಅಪಾರ್ಟ್ಮೆಂಟ್‌ (ವಸತಿ ಸಮುಚ್ಛಯ) ಮಾಲೀಕನಾಗಿದ್ದೇನೆ, ನಾನು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದೇ?

ಹೌದು, ಪ್ರತ್ಯೇಕ ವಿದ್ಯುತ್‌ ಮೀಟರ್‌ಗಳು ಲಭ್ಯವಿದ್ದರೆ/ಸ್ಥಾಪಿಸಿದ್ದರೆ ಯೋಜನೆಗೆ ಅರ್ಜಿ ಸಲ್ಲಿಸಬಹುದು.

– ನಾನು ಬಾಡಿಗೆದಾರ; ಬಿಲ್‌ ಮಾಲೀಕರ ಹೆಸರಿನಲ್ಲಿದೆ, ನನಗೂ ಯೋಜನೆ ಅನ್ವಯವಾಗುವುದೇ?

ಹೌದು. ಆಧಾರ್‌ ಸಂಖ್ಯೆ, ಬಿಲ್ಲಿನಲ್ಲಿ ನಮೂದಿಸಲಾಗಿರುವ ಗ್ರಾಹಕರ ಖಾತೆ ಸಂಖ್ಯೆ, ಮೊಬೈಲ್‌ ಸಂಖ್ಯೆ ಸಲ್ಲಿಸಿ ಯೋಜನೆಯ ಲಾಭ ಪಡೆಯಬಹುದು.

– ನಾನು 2 ತಿಂಗಳ ಹಿಂದೆ ಮನೆಯನ್ನು ಬದಲಾಯಿಸಿದ್ದೇನೆ, ನನಗೆ ಲಾಭ ಸಿಗುತ್ತದೆಯೇ?

ಹೌದು, ಯೋಜನೆಯ ಲಾಭವನ್ನು ಪಡೆಯಬಹುದು.

– ನಾನು ಅಂಗಡಿಯ ಮಾಲೀಕರಾಗಿದ್ದೇನೆ, ನಾನು ಸಹ ಯೋಜನೆಯ ಪ್ರಯೋಜನ ಪಡೆಯಲು ಅರ್ಜಿ ಸಲ್ಲಿಸಬಹುದೇ?

ಇಲ್ಲ, ಗೃಹಬಳಕೆದಾರರಿಗೆ ಮಾತ್ರ ಈ ಯೋಜನೆ ಅನ್ವಯಿಸುತ್ತದೆ.

– ನಾನು ಎಷ್ಟು ಉಚಿತ ಯೂನಿಟ್‌ ವಿದ್ಯುತ್‌ಗೆ ಅರ್ಹನಾಗುತ್ತೇನೆ? ತಿಂಗಳಿಗೆ 200 ಯೂನಿಟ್‌ ಗಳಿಗೆ ನಾನು ಅರ್ಹನೇ?

2022-23 ರ ಸರಾಸರಿ ವಿದ್ಯುತ್‌ ಬಳಕೆ + ಶೇಕಡ 10 ಹೆಚ್ಚಳ (ಎರಡು ಸೇರಿಸಿದರೆ ಒಟ್ಟು 200 ಯೂನಿಟ್‌ಗಳಿಗಿಂತ ಒಳಗಿರಬೇಕು) ಸರಾಸರಿ ಬಳಕೆಯ ಆಧಾರದ ಮೇಲೆ ಲಾಭವನ್ನು ಲೆಕ್ಕ ಹಾಕಲಾಗುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:25 pm, Fri, 23 June 23