ಉಂಡ ಮನೆಗೇ ದಂಪತಿಯಿಂದ ದ್ರೋಹ: ಉದ್ಯಮಿ ಮನೆಯಲ್ಲಿ ಕದ್ದಿದ್ದು 979 ಗ್ರಾಂ ಬಂಗಾರ!
ಉಂಡಮನೆಗೇ ಕೆಲಸಗಾರರು ಕನ್ನ ಹಾಕಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಉದ್ಯಮಿ ಕುಟುಂಬ ಹೊಸ ವರ್ಷಾಚರಣೆಗೆಂದು ಅನ್ಯ ರಾಜ್ಯಕ್ಕೆ ತೆರಳಿದ್ದ ವೇಳೆ ಮನೆ ಕೆಲಸಕ್ಕಿದ್ದ ದಂಪತಿಯೇ ಮನೆಯಲ್ಲಿದ್ದ ಕೋಟ್ಯಾಂತರ ರೂ. ಮೌಲ್ಯದ ಚಿನ್ನ ಕದ್ದು ಎಸ್ಕೇಪ್ ಆಗಿದ್ದಾರೆ. ಡಿ.30ರಂದು ಘಟನೆ ನಡೆದಿದ್ದು, ಆರೋಪಿಗಳಿಗಾಗಿ ಖಾಕಿ ಶೋಧ ನಡೆಸುತ್ತಿದೆ.

ಬೆಂಗಳೂರು, ಜನವರಿ 02: ಉದ್ಯಮಿಯೊಬ್ಬರ ಮನೆಯಲ್ಲಿ ಮನೆ ಕೆಲಸಗಾರರೇ ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನ ಕದ್ದಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಹೊಸ ವರ್ಷಾಚರಣೆಗೆಂದು ಕುಟುಂಬ ಬೇರೆ ರಾಜ್ಯಕ್ಕೆ ತೆರಳುವ ವೇಳೆ ಕೆಲಸಗಾರರ ಬಳಿ ಕೀ ಕೊಟ್ಟು ತೆರಳಿತ್ತು. ಇದನ್ನೇ ಬಂಡವಾಳ ಮಾಡಕೊಂಡು ಮನೆಯಲ್ಲಿ ಆರೋಪಿಗಳು ಕಳ್ಳತನ ನಡೆಸಿದ್ದಾರೆ ಎನ್ನಲಾಗಿದೆ.
ಡಿ.30ರಂದು ಸದಾಶಿವ ನಗರದ ಉದ್ಯಮಿ ಅಭಿಷೇಕ್ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಬರೋಬ್ಬರಿ 1.37 ಕೋಟಿ ರೂ. ಮೌಲ್ಯದ ಚಿನ್ನ, ವಾಚ್ಗಳನ್ನು ಕಳವು ಮಾಡಲಾಗಿದೆ. ಆ ಪೈಕಿ ಚಿನ್ನ 1.27 ಕೋಟಿ ರೂ. ಮೌಲ್ಯದಾಗಿದ್ದರೆ, ವಾಚ್ಗಳು 10 ಲಕ್ಷ ಬೆಲೆಬಾಳುವಂತದ್ದು ಎಂದು ತಿಳಿದುಬಂದಿದೆ. ಆರೋಪಿಗಳಾದ ಹಾಜಿರ ಬೇಗಂ ಮತ್ತುಆಕೆಯಪತಿ ಶಾಹೀರ್ಗೆ ಖಾಕಿ ಬಲೆ ಬೀಸಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದೆ.
ಇದನ್ನೂ ಓದಿ: ಮಗಳಿಗೆ ಟಾರ್ಚರ್ ಕೊಡ್ತಿದ್ದ ಅಳಿಯನಿಗೆ ಚಟ್ಟ ಕಟ್ಟಿದ ಮಾವ; ರಾಡ್ನಿಂದ ಹೊಡೆದು ಕೊಲೆ
ಪಶ್ಚಿಮ ಬಂಗಾಳ ಮೂಲದ ಹಾಜಿರ ಬೇಗಂ ಮತ್ತು ಶಾಹೀರ್ ದಂಪತಿ ಈ ಹಿಂದೆ 2022ರಿಂದ 2024ರ ವರೆಗೆ ಅಭಿಷೇಕ್ ಮನೆಯಲ್ಲೇ ಕೆಲಸ ಮಾಡಿದ್ದರು. ಆ ಬಳಿಕ ಕೆಲಸ ಬಿಟ್ಟಿದ್ದ ಇವರು ಮತ್ತೆ ಮತ್ತೆ 2025 ಡಿ.27ರಂದು ಕೆಲಸಕ್ಕೆ ಸೇರಿದ್ದರು. ಡಿ. 30ರಂದು ಹೊಸ ವರ್ಷಾಚರಣೆ ಸಲುವಾಗಿ ಕೊಯಮತ್ತೂರಿಗೆ ಅಭಿಷೇಕ್ ಕುಟುಂಬ ತೆರಳಿದ್ದು, ತಮ್ಮ ಅತ್ತೆಗೆ ಕೊಡು ಎಂದು ಹಾಜಿರಾ ಬಳಿ ಒಂದು ಕೀಯನ್ನು ಕೊಟ್ಟು ಹೋಗಿದ್ದರು. ಆದರೆ ಸಂಜೆಯಾದರೂ ಮನೆಯ ಕೀಯನ್ನ ಅತ್ತೆಗೆ ಹಾಜಿರಾ ಕೊಟ್ಟಿಲ್ಲ. ಹೀಗಾಗಿ ವಿಚಾರಿಸಲು ದೂರವಾಣಿ ಕರೆ ಮಾಡಲಾಗಿದ್ದು, ಆ ವೇಳೆ ಹಾಜಿರಾ ದಂಪತಿ ಮೊಬೈಲ್ ಸ್ವಿಚ್ಆಫ್ ಆಗಿತ್ತು. ಬಳಿಕ ತಮ್ಮ ಕಾರಿನ ಡ್ರೈವರ್ ಮೂಲಕ ಮನೆ ಪರಿಶೀಲನೆ ನಡೆಸಿದಾಗ, ಮನೆಯ ಕಬೋರ್ಡ್ಗಳು ಓಪನ್ ಆಗಿರೋದು ಬೆಳಕಿಗೆ ಬಂದಿದೆ. 979 ಗ್ರಾಂ ಚಿನ್ನಾಭರಣ ಮತ್ತು ವಾಚ್ಗಳನ್ನು ಕೆಲಸದವರು ಕದ್ದು ಎಸ್ಕೇಪ್ ಆಗಿರೋದು ಕುಟುಂಬಕ್ಕೆ ಗೊತ್ತಾಗಿದೆ.
ವರದಿ: ಪ್ರದೀಪ್ ಚಿಕ್ಕಾಟಿ, ಟಿವಿ9 ಬೆಂಗಳೂರು
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:20 pm, Fri, 2 January 26




