ಮಗಳಿಗೆ ಟಾರ್ಚರ್ ಕೊಡ್ತಿದ್ದ ಅಳಿಯನಿಗೆ ಚಟ್ಟ ಕಟ್ಟಿದ ಮಾವ: ರಾಡ್ನಿಂದ ಹೊಡೆದು ಕೊಲೆ
ಇನ್ನೇನು ಆತ ಮನೆಗೆ ಹೋಗಬೇಕಿತ್ತು. ಅಷ್ಟರಲ್ಲಿ, ವೈನ್ ಶಾಪ್ ಮುಂದೆ ನಿಂತಿದ್ದ ಆ ವ್ಯಕ್ತಿಯನ್ನು ಇಬ್ಬರು ಬಂದು ರಾಡ್ನಿಂದ ದಾಳಿ ಮಾಡಿ ಹತ್ಯೆ ಮಾಡಿದ್ದಾರೆ. ಕೊಲೆಯಾದ ಬಳಿಕ ಇಬ್ಬರೂ ಪರಾರಿ ಆಗಿದ್ದಾರೆ. ಇಲ್ಲಿ ಕೊಲೆ ಆಗಿದ್ದು ಅಳಿಯ, ಕೊಲೆ ಮಾಡಿದ್ದು ಮಾವ ಮತ್ತು ಪತ್ನಿಯ ಸೋದರ ಮಾವ!

ಶಿವಮೊಗ್ಗ, ಜನವರಿ 2: ಶಿವಮೊಗ್ಗದ (Shivamogga) ವಿನೋಬ ನಗರದ ಎಪಿಎಂಸಿ ತರಕಾರಿ ಮಾರುಕಟ್ಟೆ ಬಳಿ ಇರುವ ಶ್ರೀನಿಧಿ ವೈನ್ ಶಾಪ್ ಮುಂದೆ ಒಂದು ಭೀಕರ ಕೊಲೆ ನಡೆದಿದೆ. ಅರುಣ ಎನ್ನುವ ವ್ಯಕ್ತಿಯು ವೈನ್ ಶಾಪ್ ಮುಂದೆ ನಿಂತಿದ್ದಾಗ ಹಠಾತ್ ಆಗಿ ಅಲ್ಲಿಗೆ ಎಂಟ್ರಿ ಕೊಟ್ಟ ಇಬ್ಬರು ವ್ಯಕ್ತಿಗಳು ಕೆಲವೇ ಕ್ಷಣದಲ್ಲಿ ಅರುಣ ಮೇಲೆ ರಾಡ್ನಿಂದ ದಾಳಿ ಮಾಡಿದ್ದಾರೆ. ಈ ದಾಳಿಯಲ್ಲಿ ಅರುಣ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅರುಣನನ್ನು ಕೊಲೆ ಮಾಡಿದ್ದು ಮತ್ಯಾರೂ ಅಲ್ಲ, ಆತನಿಗೆ ಹೆಣ್ಣು ಕೊಟ್ಟ ಮಾವ ತಿಪ್ಪೇಶ್ ಮತ್ತು ಹೆಂಡತಿಯ ಸೋದರ ಮಾವ ಲೋಕೇಶ್! ತಲೆಗೆ ಬಿದ್ದ ರಾಡ್ ಹೊಡೆತದಿಂದ ಅರುಣ ಮೃತಪಟ್ಟಿದ್ದಾನೆ. ಎಲ್ಲಿಯೂ ಕೂಡಾ ರಕ್ತ ಸೇರಿದಂತೆ ಯಾವುದೇ ಸಾಕ್ಷಿಗಳು ಘಟನಾ ಸ್ಥಳದಲ್ಲಿ ಸಿಗಲಿಲ್ಲ.
ಅರುಣ್ಗೆ ಯಶಸ್ವಿನಿ ಜೊತೆ ಮದುವೆಯಾಗಿ ಎರಡು ವರ್ಷವಾಗಿತ್ತು. ಪತಿ ಪತ್ನಿ ನಡುವೆ ಇತ್ತೀಚೆಗೆ ಪದೇ ಪದೇ ಗಲಾಟೆ ಆಗಿತ್ತು. ಈ ನಡುವೆ ಕೆಲವು ತಿಂಗಳನಿಂದ ಪತ್ನಿ ತವರು ಮನೆಯಲ್ಲಿ ಇದ್ದಳು. ಮಗಳಿಗೆ ಅಳಿಯ ಹಿಂಸೆ ಕೊಡುತ್ತಿದ್ದಾನೆ ಎಂದುಕೊಂಡು ಹೆಣ್ಣು ಕೊಟ್ಟ ಮಾವ ಮತ್ತು ಯಶಸ್ವಿನಿ ಸೋದರ ಮಾವ ಇಬ್ಬರು ಸೇರಿ ಅರುಣನನ್ನು ಹತ್ಯೆ ಮಾಡಿದ್ದಾರೆ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಪ್ರೀತಿಸಿ ಮದುವೆಯಾಗಿದ್ದ ಅರುಣ್, ಯಶಸ್ವಿನಿ!
ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾಗಿ ಎರಡು ವರ್ಷ ಆಗಿದ್ದು, ಒಂದು ಮಗು ಕೂಡಾ ಇದೆ. ಅರುಣ್ ಕೂಲಿ ಕೆಲಸ ಮಾಡಿಕೊಂಡು ಮಾಡಿಕೊಂಡಿದ್ದ. ಅದರ ಜೊತೆಗೆ ಗಾಂಜಾ ಸೇವನೆಯ ಚಟ ಕೂಡ ಇತ್ತು. ಪದೇ ಪದೇ ಪತ್ನಿಗೆ ಹಿಂಸೆ ಕೊಡುತ್ತಿದ್ದ ಎನ್ನಲಾಗಿದೆ. ಕುಡಿದು ಬಂದು ಪತ್ನಿಯ ಜೊತೆ ಗಲಾಟೆ ಮಾಡುವುದು, ಹೆಂಡತಿಯನ್ನು ಹೊಡೆಯುವುದು ಮಾಡುತ್ತಿದ್ದ. ಆತನ ದೌರ್ಜನ್ಯ ತಾಳಲಾರದೇ ಪತ್ನಿ ತವರು ಮನೆಗೆ ಹೋಗಿದ್ದಳು. ಮೂರು ತಿಂಗಳಿನಿಂದ ತವರು ಮನೆಯಲ್ಲಿದ್ದ ಪತ್ನಿಗೆ, ‘ನಿಮ್ಮ ಇಡೀ ಕುಟುಂಬವನ್ನೇ ಟಾರ್ಗೆಟ್ ಮಾಡುವೆ’ ಎಂದು ಅರುಣ್ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ.
ಇದನ್ನೂ ಓದಿ: ಪ್ರತ್ಯೇಕ ರಸ್ತೆ ಅಪಘಾತ: ತಮ್ಮದಲ್ಲದ ತಪ್ಪಿಗೆ ಮಗು ಸೇರಿ ನಾಲ್ವರು ದಾರುಣವಾಗಿ ಸಾವು
ಅಳಿಯ ಮಗಳಿಗೆ ಕೊಡುತ್ತಿದ್ದ ಟಾರ್ಚರ್ ನೋಡಿ ತಂದೆ ರೋಸಿ ಹೋಗಿದ್ದ. ಈ ಹಿನ್ನಲೆಯಲ್ಲಿ ಪತ್ನಿಯ ತಮ್ಮ ಮಂಜುನಾಥ್ನನ್ನು ಕರೆದುಕೊಂಡು ಹೋಗಿ ಅಳಿಯನ ಕಥೆಯನ್ನೇ ಮುಗಿಸಿದ್ದಾನೆ.



