ಕದ್ದ ಹಣದಲ್ಲೇ ಸ್ನೇಹಿತರಿಗೆ ಪಾರ್ಟಿ, ಬಡವರಿಗೆ ಸಹಾಯ! ಖತರ್ನಾಕ್ ಮನೆಗಳ್ಳ ಅರೆಸ್ಟ್

ಕದ್ದ ಹಣದಲ್ಲಿ ಬಡವರಿಗೆ ನೆರವಾಗಿ, ಸ್ನೇಹಿತರಿಗೆ ಪಾರ್ಟಿ ನೀಡುತ್ತಿದ್ದ ಖತರ್ನಾಕ್ ಮನೆಗಳ್ಳ ಶಿವರಸನ್‌ನನ್ನು ಬೇಗೂರು ಪೊಲೀಸರು ಬಂಧಿಸಿದ್ದಾರೆ. ವೈಟ್‌ಫೀಲ್ಡ್‌ನಲ್ಲಿ ನೆಲೆಸಿದ್ದ ಈತನಿಂದ 8 ಮನೆಗಳ್ಳತನ ಪ್ರಕರಣ ಭೇದಿಸಲಾಗಿದ್ದು, 196 ಗ್ರಾಂ ಚಿನ್ನ ಹಾಗೂ 4 ಕೆಜಿ ಬೆಳ್ಳಿ ಸೇರಿದಂತೆ ₹36 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕದ್ದ ಹಣದಲ್ಲೇ ಸ್ನೇಹಿತರಿಗೆ ಪಾರ್ಟಿ, ಬಡವರಿಗೆ ಸಹಾಯ! ಖತರ್ನಾಕ್ ಮನೆಗಳ್ಳ ಅರೆಸ್ಟ್
ಮನೆಗಳ್ಳ ಶಿವರಸನ್ (34)
Edited By:

Updated on: Aug 25, 2026 | 12:21 PM

ಮುಖ್ಯಾಂಶಗಳು

  • ಕದ್ದ ಹಣದಲ್ಲಿ ಬಡವರಿಗೆ ಸಹಾಯ ಮಾಡುತ್ತಿದ್ದ ಕಳ್ಳ ಬಂಧನ.
  • ತಮಿಳುನಾಡು ಮೂಲದ ಶಿವರಸನ್‌ನನ್ನು ಬಂಧಿಸಿದ ಬೇಗೂರು ಪೊಲೀಸರು.
  • ಬಂಧಿತನಿಂದ 36 ಲಕ್ಷ ಮೌಲ್ಯದ ಚಿನ್ನ-ಬೆಳ್ಳಿ ವಶಕ್ಕೆ ಪಡೆಯಲಾಗಿದೆ.

ಬೆಂಗಳೂರು, ಆಗಸ್ಟ್ 25: ಕದ್ದ ಹಣದಲ್ಲೇ ಬಡವರಿಗೆ ನೆರವಾಗಿ, ಸ್ನೇಹಿತರಿಗೆ ಗ್ರಾಂಡ್ ಪಾರ್ಟಿ ನೀಡುತ್ತಿದ್ದ ಖತರ್ನಾಕ್ ಮನೆಗಳ್ಳ ಶಿವರಸನ್ (34) ಎಂಬಾತನನ್ನು ನಗರದ (Bengaluru) ಬೇಗೂರು ಪೊಲೀಸರು ಬಂಧಿಸಿದ್ದಾರೆ. ವೈಟ್‌ಫೀಲ್ಡ್‌ನಲ್ಲಿ ವಾಸವಿದ್ದ ಈತ, ಬೆಳಗಿನ ಜಾವ ಬೀಗ ಹಾಕಿದ ಮನೆಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ. ಬಂಧಿತನಿಂದ 8 ಮನೆಗಳ್ಳತನ ಪ್ರಕರಣ ಭೇದಿಸಲಾಗಿದ್ದು, ಚಿನ್ನ-ಬೆಳ್ಳಿ ಸೇರಿದಂತೆ 36 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಶೋಕಿಗಾಗಿ ಕಳ್ಳತನ ಮಾಡ್ತಿದ್ದ ಕಲಾವಿದ!

ಮೂಲತಃ ಕಲಾವಿದ ಆಗಿ ಕೆಲಸ ಮಾಡುತ್ತಿದ್ದ ಶಿವರಸನ್, ಶೋಕಿ ಜೀವನಕ್ಕಾಗಿ ಕಳ್ಳತನದ ಹಾದಿ ಹಿಡಿದಿದ್ದ. ವೈಟ್‌ಫೀಲ್ಡ್‌ನಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ದ ಈತ, ಬೆಳಗಿನ ಜಾವದಲ್ಲಿ ಬೈಕ್‌ನಲ್ಲಿ ಸುತ್ತಾಡಿ ಬೀಗ ಹಾಕಿದ್ದ ಮನೆಗಳನ್ನು ಟಾರ್ಗೆಟ್ ಮಾಡುತ್ತಿದ್ದ. ಆಟೋ ಚಾಲಕರು ಮತ್ತು ಬಡವರಿಗೆ ಕದ್ದ ಹಣದಿಂದ ಸ್ವಲ್ಪ ಧನಸಹಾಯ ಮಾಡಿ, ಅವರಿಂದಲೇ ಬೀಗ ಹಾಕಿದ ಮನೆಗಳ ಮಾಹಿತಿ ಸಂಗ್ರಹಿಸುತ್ತಿದ್ದ. ಈತನ ವಿರುದ್ಧ ಈಗಾಗಲೇ ಬೆಂಗಳೂರಿನ ವಿವಿಧ ಠಾಣೆಗಳಲ್ಲಿ 30ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

8 ಮನೆಗಳ್ಳತನ ಪ್ರಕರಣ

ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಬೇಗೂರು ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯಿಂದ ಬೇಗೂರಿನ 3, ರಾಮಮೂರ್ತಿನಗರದ 2, ಆಲವಳ್ಳಿ, ಹೊಸಕೋಟೆ (ಹನಗೊಂಡನಹಳ್ಳಿ) ಹಾಗೂ ಕೆ.ಆರ್.ಪುರಂನ ತಲಾ 1 ಮನೆ ಸೇರಿದಂತೆ ಒಟ್ಟು 8 ಮನೆಗಳ್ಳತನ ಪ್ರಕರಣಗಳನ್ನು ಭೇದಿಸಲಾಗಿದೆ.

ಬಂಧಿತನಿಂದ 196 ಗ್ರಾಂ ಚಿನ್ನ ಹಾಗೂ 4 ಕೆಜಿ ಬೆಳ್ಳಿ ಸೇರಿದಂತೆ ಒಟ್ಟು 36 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಿಕಾಸ್​ ಬಿಎಂ

ವಿಕಾಸ್​ ಬಿಎಂ ಅವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ. ಬೆಳೆದಿದ್ದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ. ಮೈಸೂರು ಯೂನಿವರ್ಸಿಟಿ ಯಲ್ಲಿ ಶಿಕ್ಷಣ ಮುಗಿಸಿ, 2014 ರಿಂದ ಎಲೆಕ್ಟ್ರಾನಿಕ್ ಮಾದ್ಯಮದಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ಸದ್ಯ ಬೆಂಗಳೂರು ಕ್ರೈಂ ವರದಿಗಾರನಾಗಿ 11 ವರ್ಷ ಸೇವೆ ಸಲ್ಲಿಸಿದ್ದಾರೆ. ಕ್ರೈಂ ರಿಪೋರ್ಟಿಂಗ್ ಹಾಗು ಇನ್ವೆಷ್ಟಿಗೇಟಿವ್ ವರದಿಗಾರರಾಗಿ ಹಾಗು ಸ್ಟಿಂಗ್ ಆಪರೇಷನ್​ಗಳನ್ನ ಮಾಡಿದ್ದಾರೆ. ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದ ಸುದ್ದಿ ಮೊದಲು ಬ್ರೇಕ್ ಮಾಡಿದ್ದಲ್ಲದೆ, ಶಂಕಿತರ ಸಿಸಿ ಕ್ಯಾಮರಾ ವಿಡಿಯೋಗಳನ್ನ ಪ್ರಸರಣ ಮಾಡಿ ಸಂಸ್ಥೆಯಿಂದ ಪ್ರಶಂಸೆಗೆ ಪಾತ್ರನಾಗಿದ್ದಾರೆ. ಅಲ್ಲದೇ ಬೆಂಗಳೂರಲ್ಲಿ ಟೈಡಾಲ್ ಡ್ರಗ್ ಸೇವನೆಯ ಸ್ಟಿಂಗ್ ಆಪರೇಷನ್ ಮಾಡಿ, ಮೆಡಿಕಲ್ ಗಳಲ್ಲಿ ಟೈಡಾಲ್ ಮಾತ್ರೆಯ ಮಾರಟ ನಿಯಂತ್ರಣಕ್ಕೆ ಬರುವಂತೆ ಮಾಡಿದ್ದಾರೆ. ನೊಂದವರ ಪರವಾಗಿ ನಿಂತು ವಸ್ತುನಿಷ್ಠವಾಗಿ ಸುದ್ದಿಗಳನ್ನ ನೀಡಿ ನ್ಯಾಯ ಕೊಡಿಸುವುದು ಇವರ ಮೊದಲ ಉದ್ದೇಶ. ಸದ್ಯ ಟಿವಿ9 ಸಂಸ್ಥೆಯಲ್ಲಿ ಬೆಂಗಳೂರು ಕ್ರೈಂ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ರೋಡ್ ಟ್ರಿಪ್, ಕ್ರಿಕೆಟ್‌, ವಾಲಿಬಾಲ್ ಆಡುವುದು, ಕ್ರೈಂ ಇನ್ವೆಷ್ಟಿಗೇಷನ್ ಪುಸ್ತಕ ಓದುವುದು ಮತ್ತು ಕ್ರೈಂ ತ್ರಿಲ್ಲರ್ ಸಿನಿಮಾಗಳನ್ನ ನೋಡುವುದು ಇವರ ಹವ್ಯಾಸಗಳು.

Read More
Loading...
Unable to load recommendations.
Follow Us